ಆ.18ರಂದು ತಾಯ್ನಾಡಿಗೆ ಹರೀಶ್ ಬಂಗೇರ: ಮತ್ತೆ ಗೂಡು ಸೇರಿದ ಹಳ್ಳಿಹಕ್ಕಿ!
ಉಡುಪಿ, ಆಗಸ್ಟ್ 15: ದೇಶ 75ನೇ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸುತ್ತಿದ್ದು, ಎಲ್ಲೆಡೆ ಆಜಾದಿ ಸದ್ದು ಮೊಳಗುತ್ತಿದೆ. ದೇಶ ಸ್ವಾತಂತ್ರ್ಯ ಸಿಕ್ಕಿದ ಸವಿ ನೆನಪಿನ ಸಂಭ್ರಮದಲ್ಲಿದ್ದರೆ, ಅತ್ತ ಮೂರು ವರ್ಷಗಳ ಕಾಲ ತನ್ನದಲ್ಲದ ತಪ್ಪಿಗೆ ವಿದೇಶದ ಜೈಲಿನಲ್ಲಿ ಕೊರಗುತ್ತಿದ್ದ ಹಳ್ಳಿಹಕ್ಕಿಯೂ ಕಬ್ಬಿಣದ ಕೊಳಗಳಿಂದ ಬಂಧ ಮುಕ್ತಿಯಾಗುತ್ತಿದೆ.
ಸೌದಿ ಅರೇಬಿಯಾದ ಜೈಲಿನಲ್ಲಿ ಕಳೆದ ಮೂರು ವರ್ಷಗಳಿಂದ ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದ ಉಡುಪಿ ಜಿಲ್ಲೆಯ ಬೀಜಾಡಿ ನಿವಾಸಿ ಹರೀಶ್ ಬಂಗೇರ, ಬಂಧ ಮುಕ್ತರಾಗಿ ಆಗಸ್ಟ್ 18ರಂದು ಬೆಂಗಳೂರು ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ. ಈ ಬಗ್ಗೆ ಸೌದಿಯ ಭಾರತೀಯ ಧೂತವಾಸ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಅಧೀಕೃತ ಮಾಹಿತಿ ನೀಡಿದೆ. ಈ ಮೂಲಕ ಸೌದಿ ಜೈಲಿನ ಹಿಂದೆ ಬಿಡುಗಡೆ ಎಂಬ ಭರವಸೆಯ ಬೆಳಕನ್ನು ಕಾಣುತ್ತಿದ್ದ ಹರೀಶ್ ಬಂಗೇರ ಕೊನೆಗೂ ತಾಯ್ನಾಡಿಗೆ ಮರಳಲಿದ್ದಾರೆ.
2019ರ ಡಿಸೆಂಬರ್ 20ರಿಂದ ಸೌದಿ ಜೈಲಿನಲ್ಲಿದ್ದ ಹರೀಶ್ ಬಂಗೇರ ಮೇಲಿನ ಆರೋಪ ಸುಳ್ಳು ಎಂಬುದಾಗಿ ಸಾಬೀತಾಗಿದ್ದು, ಇದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಪೊಲೀಸರು ಸೌದಿ ಸರ್ಕಾರಕ್ಕೆ ನೀಡಿದ್ದರಿಂದ ಸೌದಿ ಸರ್ಕಾರ ಹರೀಶ್ ಪೂಜಾರಿ ನಿರಪರಾಧಿ ಎಂದು ಪರಿಗಣಿಸಿ ಬಿಡುಗಡೆ ಮಾಡಿದೆ.

ಗಲಭೆಯ ವಿಡಿಯೋ ಫೇಸ್‌ಬುಕ್‌ನಲ್ಲಿ ಶೇರ್
2019 ಡಿಸೆಂಬರ್ ಮೂರನೇ ವಾರ ಮಂಗಳೂರು ಕಾದು ಕೆಂಡವಾಗಿತ್ತು. ಸಿಎಎ ಕಾಯ್ದೆ ವಿರೋಧಿಸಿ ಪ್ರತಿಭಟನೆ ಹಿಂಸಾ ರೂಪ ತಾಳಿತ್ತು. ಮಂಗಳೂರು ನಗರದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿ, ಗೋಲಿಬಾರ್ ನಡೆದಿತ್ತು. ಪೊಲೀಸ್ ಗೋಲಿಬಾರ್‌ನಲ್ಲಿ ಇಬ್ಬರು ಪ್ರತಿಭಟನಾಕಾರರು ಬಲಿಯಾಗಿ ಇಡೀ ಮಂಗಳೂರಿನಲ್ಲಿ ಕರ್ಫ್ಯೂ ವಿಧಿಸಲಾಗಿತ್ತು.
ಅತ್ತ ದೂರದ ಸೌದಿಯಲ್ಲಿದ್ದ ಹರೀಶ್ ಬಂಗೇರ ತನ್ನೂರಿನಲ್ಲಾಗುತ್ತಿದ್ದ ಗಲಭೆಯ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದ. ಸೌದಿ ಅರೇಬಿಯಾದ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಹರೀಶ್ ಬಂಗೇರ, ತನ್ನ ಫೇಸ್‌ಬುಕ್‌ನಲ್ಲಿ ವಿಡಿಯೋ ಹಾಕುತ್ತಿದ್ದಂತೆಯೇ, ಸೌದಿಯಲ್ಲಿದ್ದ ಕೆಲ ಮಂಗಳೂರು ಮೂಲದ ಅನ್ಯ ಕೋಮಿನ ಯುವಕರು ಹರೀಶ್ ಬಂಗೇರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹರೀಶ್ ಬಂಗೇರಗೆ ಬೆದರಿಕೆ
ವಿಡಿಯೋ ಡಿಲೀಟ್ ಮಾಡುವಂತೆ ಹರೀಶ್ ಬಂಗೇರಗೆ ಬೆದರಿಕೆ ಹಾಕಿದ್ದಾರೆ. ಯುವಕರ ಬೆದರಿಕೆಗೆ ಮಣಿದ ಹರೀಶ್ ಬಂಗೇರ ವಿಡಿಯೋ ಡಿಲೀಟ್ ಮಾಡಿ ಬಹಿರಂಗ ಕ್ಷಮೆ ಕೇಳಿದ್ದಾರೆ. ಬಳಿಕ ತನ್ನ ಫೇಸ್‌ಬುಕ್ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ.
ಆದರೆ ಮಾರನೇ ದಿನ ಅಂದರೆ ಡಿ.20 ರಂದು ಕಿಡಿಗೇಡಿಗಳು ಹರೀಶ್ ಬಂಗೇರ ಹೆಸರಿನಲ್ಲಿ ನಕಲಿ ಖಾತೆ ತೆಗೆದಿದ್ದಾರೆ. ಮುಸ್ಲಿಂರ ಪವಿತ್ರ ಕ್ಷೇತ್ರಗಳಾದ ಮೆಕ್ಕಾ ಮತ್ತ ಸೌದಿ ದೊರೆಯ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಭಾರೀ ವೈರಲ್ ಆಗಿ ಹರೀಶ್ ಬಂಗೇರನನ್ನು ಸೌದಿ ಪೊಲೀಸರು ಬಂಧನ ಮಾಡಿದ್ದಾರೆ. ತಾನು ಮಾಡದ ತಪ್ಪಿಗೆ ಅಮಾಯಕ ಹರೀಶ್ ಬಂಗೇರ ಜೈಲು ಸೇರಿದ್ದಾನೆ.

ಉಡುಪಿ ಠಾಣೆಯಲ್ಲಿ ದೂರು ದಾಖಲು
ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ, ತನ್ನ ಗಂಡ ಸೌದಿಯಲ್ಲಿ ಅಪಾಯದಲ್ಲಿರುವುದನ್ನು ಕಂಡ ಹರೀಶ್ ಬಂಗೇರ ಪತ್ನಿ ಪತಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದಿರುವುದರ ಬಗ್ಗೆ ಉಡುಪಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ತನಿಖೆ ಆರಂಭಿಸಿದ್ದಾರೆ. ಸೈಬರ್ ಕ್ರೈಂ ಸಹಾಯದಿಂದ 2020ರ ಜೂನ್ ತಿಂಗಳಿನಲ್ಲಿ ಹರೀಶ್ ಬಂಗೇರ ಹೆಸರಿನಲ್ಲಿ ನಕಲಿ ಖಾತೆ ತೆರೆದ ಇಬ್ಬರನ್ನು ಬಂಧಿಸಿದ್ದಾರೆ. ಮೂಡಬಿದಿರೆಯ ಸಹೋದರರಾದ ಅಬ್ದುಲ್ ಹುಯೇಸ್ ಮತ್ತು ಅಬ್ದುಲ್ ತುವೇಸದ ಎಂಬುವವರನ್ನು ಮೂಡಬಿದಿರೆಯ ಪೊಲೀಸರು ಬಂಧಿಸಿದ್ದಾರೆ.
Recommended Video

ಸೌದಿ ಸರ್ಕಾರಕ್ಕೆ ಮನವರಿಕೆ ಮಾಡುವ ದೊಡ್ಡ ಪ್ರಯತ್ನ
ಇತ್ತ ನೈಜ ಆರೋಪಿಗಳ ಬಂಧನವಾದರೂ, ಸೌದಿ ಸರ್ಕಾರಕ್ಕೆ ಮನವರಿಕೆ ಮಾಡುವ ದೊಡ್ಡ ಪ್ರಯತ್ನಕ್ಕೆ ಬಹಳ ಸಮಯ ತಗಲಿದ್ದರಿಂದ ಮೂರು ವರ್ಷಗಳ ಕಾಲ ಹರೀಶ್ ಬಂಗೇರ ಜೈಲು ಶಿಕ್ಷೆ ಅನುಭವಿಸಿದಂತಾಗಿದೆ. ಹರೀಶ್ ಬಂಗೇರ ನಿರಪರಾಧಿ ಅಂತಾ ಸಾಬೀತು ಪಡಿಸಲು ಎಲ್ಲಾ ದಾಖಲೆಗಳನ್ನು ಒದಗಿಸಿದ ಬಳಿಕ ಹರೀಶ್ ಬಂಗೇರನನ್ನು ಸೌದಿ ಸರ್ಕಾರ ಬಿಡುಗಡೆ ಮಾಡಿದೆ.
ತನ್ನದಲ್ಲದ ತಪ್ಪಿಗೆ ಮೂರು ವರ್ಷಗಳ ಕಾಲ ನರಕಯಾತನೆ ಅನುಭವಿಸಿದ ಹರೀಶ್ ಬಂಗೇರ ಕೊನೆಗೂ ಮರಳಿ ತಾಯ್ನೆಲಕ್ಕೆ ಆಗಮಿಸುತ್ತಿದ್ದು, ಹರೀಶ್ ಬಂಗೇರನ ವಿಮಾನಯಾನ ವೆಚ್ಚವನ್ನೆಲ್ಲಾ ಸೌದಿ ಆರೇಬಿಯಾದಲ್ಲಿರುವ ಮಂಗಳೂರು ಅಸೋಸಿಯೇಷನ್ ತಂಡ ಭರಿಸಿ, ಹಳ್ಳಿಹಕ್ಕಿ ಮತ್ತೆ ಗೂಡು ಸೇರುವಂತೆ ಮಾಡಿ ಉದಾರತೆ ಮೆರೆದಿದೆ.












Click it and Unblock the Notifications