ಉಡುಪಿಯ ಏಕಮಾತ್ರ ಮನೆಯಲ್ಲಿ ಉಳಿದ ಕೈಮಗ್ಗ ನೇಕಾರಿಕೆ!
ಉಡುಪಿ, ಡಿಸೆಂಬರ್ 15: ಆ ಊರು ಕರ್ನಾಟಕದ ಕರಾವಳಿಯಲ್ಲೇ ಕೈಮಗ್ಗ ನೇಕಾರಿಕೆಗೆ ಪ್ರಸಿದ್ಧಿ ಪಡೆದಿತ್ತು. ಯಾಕಂದರೆ ಈ ಊರಿನ ಪ್ರತಿ ಮನೆಯಲ್ಲೂ ಕೈಮಗ್ಗದ ಉಡುಪುಗಳು ತಯಾರಾಗುತ್ತಿದ್ದವು. ಆದರೀಗ ಬದಲಾದ ಕಾಲಘಟ್ಟದಲ್ಲಿ ಒಂದು ಮನೆಯಲ್ಲಿ ಮಾತ್ರ ನೇಕಾರಿಕೆ ಉಳಿದುಕೊಂಡಿದೆ.
ಇದೇ ಮನೆಯಿಂದ ಉಡುಪಿ ಕೃಷ್ಣ ಮಠಕ್ಕೆ ಪಾಣಿ, ಪಂಚೆ ಪೂರೈಕೆ ಆಗುತ್ತಿದ್ದು, ಸರ್ಕಾರದಿಂದ ಬೆಂಬಲ ದೊರೆಯುವ ನಿರೀಕ್ಷೆಯಲ್ಲಿ ಈ ಮನೆಯ ನೇಕಾರರು ಕಾಯುತ್ತಿದ್ದಾರೆ.
ವಿಧವಿಧವಾದ ಡಿಸೈನ್ ಬಟ್ಟೆಗಳು ಮಾರುಕಟ್ಟೆಗೆ ಬರುತ್ತಿದ್ದಂತೆಯೇ, ಸಾಂಪ್ರದಾಯಿಕ ಕೈಮಗ್ಗ ಬಟ್ಟೆಗಳು ಕಾಣ ಸಿಗುವುದೇ ಅಪರೂಪವಾಗಿದೆ. ಜನ ಕೂಡ ಟ್ರೆಂಡ್‌ಗೆ ತಕ್ಕಂತಹ ಬಟ್ಟೆಗಳನ್ನು ಧರಿಸುತ್ತಾರೆ. ಆಧುನಿಕ ಜೀವನವನ್ನು ಜನ ಇಷ್ಟ ಪಡುತ್ತಾರೆ. ಹೀಗಾಗಿ ಹಳೆ ಕಾಲದ ವಸ್ತ್ರವಿನ್ಯಾಸ ಮೂಲೆ ಸೇರಿದೆ.

ವಸ್ತ್ರ ತಯಾರಿಸುವ ಸಾಂಪ್ರದಾಯಿಕ ನೇಕಾರರು ಕಾಣ ಸಿಗುವುದೇ ಅಪರೂಪವಾಗಿದ್ದು, ಈ ವಸ್ತ್ರಗಳನ್ನು ಧರಿಸುವವರ ಸಂಖ್ಯೆಯೂ ವಿರಳವಾಗಿದೆ. ಆದರೆ ಉಡುಪಿ ಮನೆಯೊಂದರಲ್ಲಿ ಶತಮಾನಗಳಿಂದಲೂ ಕೈಮಗ್ಗ ಬಟ್ಟೆಗಳು ತಯಾರಿಸಲಾಗುತ್ತಿದೆ. ಉಡುಪಿಯ ಶ್ರೀಕೃಷ್ಣ ಮಠಕ್ಕೆ ಪಾಣಿ, ಪಂಚೆ ಪೂರೈಕೆಯಾಗುವುದು ಇದೇ ಮನೆಯಿಂದಲೇ ಆಗಿದೆ.
ಈ ಹಿಂದೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಜಿಲ್ಲೆಯ ಸಾಲೀಕೆರಿ ಗ್ರಾಮದ ಪ್ರತಿ ಮನೆಯಲ್ಲೂ ಕೈಮಗ್ಗ ನೇಕಾರಿಕೆ ಇತ್ತು. 150ಕ್ಕೂ ಹೆಚ್ಚು ಮಂದಿ ನೇಕಾರರು ಕೈ ಮಗ್ಗ ವಿವಿಧ ಉಡುಪುಗಳನ್ನು ತಯಾರು ಮಾಡುತ್ತಿದ್ದರು.

ಆದರೆ ಬದಲಾದ ಕಾಲ ಘಟ್ಟದಲ್ಲಿ ಮಾರುಕಟ್ಟೆಯಲ್ಲಿ ಆಧುನಿಕ ಟ್ರೆಂಡ್ ಬಟ್ಟೆಗಳ ಜೊತೆ ಸ್ಪರ್ಧಿಸಲಾಗದೆ, ಈಗ ಸಾಲಿಕೇರಿಯ ಸರಸ್ವತಿ ಅಜ್ಜಿ ಮನೆಯಲ್ಲಿ ಮಾತ್ರ ಕೈಮಗ್ಗ ನೇಕಾರಿಕೆ ನಡೆಯುತ್ತಿದೆ. 75 ವರ್ಷಗಳಿಂದ ಸರಸ್ವತಿ ಅಜ್ಜಿ ನೇಕಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನೇಕಾರಿಕೆಯಿಂದಲೇ ಜೀವನ ಸಾಗಿಸುತ್ತಿದ್ದಾರೆ.
ಇನ್ನು ಸಾಲೀಕೆರಿ ಗ್ರಾಮದ ಸರಸ್ವತಿ ಅವರ ಮನೆಯಲ್ಲಿ ಪಾಣಿ ಪಂಚೆಯನ್ನೇ ಈಗ ಹೆಚ್ಚಾಗಿ ತಯಾರು ಮಾಡುತ್ತಿದ್ದಾರೆ. ವಿಶೇಷ ಅಂದರೆ, ಉಡುಪಿ ಶ್ರೀಕೃಷ್ಣ ಮಠ ಸೇರಿದಂತೆ ಎಲ್ಲ ದೇವಸ್ಥಾನಗಳಿಗೂ ಇಲ್ಲಿಂದಲೇ ಪಾಣಿ ಪಂಚೆ ಪೂರೈಕೆ ಆಗುತ್ತಿದೆ. ಆದರೆ ಸದ್ಯ ಕೈಮಗ್ಗಕ್ಕೆ ಬೇಕಾಗುವ ಕಚ್ಚಾವಸ್ತುಗಳ ಬೆಲೆ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಕೈಮಗ್ಗ ನೇಕಾರರ ನೆರವಿಗೆ ಬರುವಂತೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸರಸ್ವತಿ ಅಜ್ಜಿ, 75 ವರ್ಷಗಳಿಂದ ನೇಕಾರಿಕೆ ಮಾಡುತ್ತಿದ್ದೇನೆ. ಆಗೆಲ್ಲಾ ನಮ್ಮ ಬಟ್ಟೆಗೆ ಬಹಳ ಬೇಡಿಕೆಯಿತ್ತು. ಆದರೆ ಈಗ ಬೇರೆ ಬೇರೆ ಶೈಲಿಯ ಬಟ್ಟೆಗಳು ಮಾರುಕಟ್ಟೆಗೆ ಬರುತ್ತಿವೆ. ಈಗ ನನಗೂ ವಸ್ತ್ರಗಳನ್ನು ಮಾಡುವುದಕ್ಕೆ ಆಗುತ್ತಿಲ್ಲ. ನೇಕಾರಿಕೆಯ ಮುಂದಿನ ಭವಿಷ್ಯ ಹೇಗೆ ಅಂತಾ ಗೊತ್ತಾಗುತ್ತಿಲ್ಲ ಅಂತಾ ಹೇಳಿದ್ದಾರೆ.
ಇನ್ನು ನೇಕಾರಿಕೆಯ ಕಚ್ಚಾವಸ್ತುಗಳಿಗೆ ದರ ಹೆಚ್ಚಾಗಿದ್ದು, ಒಂದೆಡೆ ಮಾರುಕಟ್ಟೆಯಲ್ಲಿ ಕೈಮಗ್ಗದ ವಸ್ತುಗಳಿಗೆ ಧಾರಣೆ ಕಡಿಮೆ ಇದೆ. ಇನ್ನೊಂದೆಡೆ ನೂಲುಗಳಿಗೆ ದರ ಜಾಸ್ತಿಯಾಗಿದೆ. ಈಗ ನೇಕಾರಿಕೆಯಲ್ಲಿ ಜೀವನ ಸಾಗುತ್ತಿದೆ. ಭವಿಷ್ಯದ ಬಗ್ಗೆಯೇ ಚಿಂತೆಯಾಗುತ್ತಿದೆ ಅಂತಾ ನೇಕಾರಿಕೆಯಲ್ಲಿ ತೊಡಗಿಸಿ ಜೀವನ ನಡೆಸುತ್ತಿರುವ ಮಹಿಳೆ ಮೋಹಿನಿ ಹೇಳಿದ್ದಾರೆ.
ಒಟ್ಟಿನಲ್ಲಿ ನೇಕಾರಿಕೆಗೆ ಕರಾವಳಿಯಲ್ಲೇ ಪ್ರಸಿದ್ಧ ಪಡೆದ ಸಾಲಿಕೇರಿಯ ಒಂದು ಮನೆಯಲ್ಲಿ ಮಾತ್ರ ನೇಕಾರಿಕೆ ಉಳಿದುಕೊಂಡಿದೆ. ಸರ್ಕಾರ ಇನ್ನು ಮುಂದಾದರೂ ನೇಕಾರರ ಬೆಂಬಲವಾಗುವ ಯೋಜನೆ ರೂಪಿಸಿದರೆ ಬಡ ನೇಕಾರರಿಗೆ ಪ್ರಯೋಜನ ಆಗಲಿದೆ.












Click it and Unblock the Notifications