ಖಾಸಗಿ ಬಸ್ ಪ್ರಾಬಲ್ಯಕ್ಕೆ ಮಣಿದ ಆಡಳಿತ- ನರ್ಮ್ ಬಸ್ ಸಂಖ್ಯೆ ಕಡಿತ
ಮಂಗಳೂರು, ಡಿಸೆಂಬರ್, 06: ಕರಾವಳಿಯ ಸಾರಿಗೆ ವ್ಯವಸ್ಥೆಯ ಜೀವನಾಡಿ ಖಾಸಗಿ ಬಸ್ಸುಗಳು. ಸರ್ಕಾರಿ ಬಸ್‌ಗಳು ತಲುಪದ ಊರನ್ನೆಲ್ಲಾ ಖಾಸಗಿ ಬಸ್‌ಗಳು ತಲುಪುತ್ತದೆ. ಹಾಗಾಗಿ ಕರಾವಳಿಯ ಶೇ 80ರಷ್ಟು ಖಾಸಗಿ ಬಸ್‌ಗಳೇ ತುಂಬಿಕೊಂಡಿವೆ.
ಕೆಎಸ್‌ಆರ್‌ಟಿಸಿ ಪ್ರಬಲವಾಗಿರುವ ಸರ್ಕಾರ ಯಾಕೆ ಸರ್ಕಾರಿ ಬಸ್‌ಗಳನ್ನು ಕರಾವಳಿಗೆ ಹಾಕಲ್ಲ ಅನ್ನೋದಕ್ಕೆ ಈಗ ಮತ್ತೊಂದು ಕಾರಣ ಸಿಕ್ಕಿದೆ. ಕರಾವಳಿಯಲ್ಲಿ ಸರ್ಕಾರಿ ಬಸ್ ರಸ್ತೆಗಿಳಿದರೆ ಖಾಸಗಿ ಲಾಭಿ ಸರ್ಕಾರದಲ್ಲಿ ಕೂತಿರುವವರ ಬುಡವನ್ನೇ ಅಲ್ಲಾಡಿಸುತ್ತದೆ ಅನ್ನೋದು ಈಗ ಮತ್ತೊಮ್ಮೆ ರುಜುವಾತಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಉಡುಪಿ ಜನರಿಗೆ ಪ್ರತಿದಿನದ ಆಪ್ತರಕ್ಷಕವಾಗಿದ್ದ ನರ್ಮ್ ಬಸ್‌ಗಳ ಸಂಖ್ಯೆ ಕಡಿಮೆ ಮಾಡಲು ಸರ್ಕಾರ ಮುಂದಾಗಿದೆ.
ಉಡುಪಿಯ ಅದೆಷ್ಟೋ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮೀಣ ಭಾಗದ ಜನರಿಗೆ ನರ್ಮ್ ಬಸ್ ಸಂಪರ್ಕ ಕೊಂಡಿಯಾಗಿತ್ತು. ದಿನನಿತ್ಯ ಸಾವಿರಾರು ಮಂದಿ ಸಂಚಾರಕ್ಕಾಗಿ ನರ್ಮ್ ಬಸ್‌ನ್ನು ಬಳಸುತ್ತಿದ್ದರು. ಆದರೆ ಇತ್ತೀಚೆಗೆ ವರ್ಷಗಳಲ್ಲಿ, ನರ್ಮ್ ಬಸ್‌ನ್ನು ಜಿಲ್ಲೆಯಿಂದ ಹೊರಗಿಡಲು ಹಂತ ಹಂತವಾಗಿ ಸಿದ್ದತೆ ನಡೆಸುತ್ತಿದೆ. ಜಿಲ್ಲೆಯಲ್ಲಿ ನರ್ಮ್ ಸಂಚಾರ ಕಡಿಮೆಯಾಗಿ ಪ್ರಯಾಣಿಕರು ದೊಡ್ಡ ತೊಂದರೆ ಎದುರಿಸುವಂತಾಗಿದೆ.

ಕರಾವಳಿಯಲ್ಲಿ ಖಾಸಗಿ ಬಸುಗಳದ್ದೇ ಕಾರುಬಾರು. ಸರ್ಕಾರಿ ಬಸ್‌ಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಪರಿಸ್ಥಿತಿ ಹಿಂದೆ ಇತ್ತು, ಈಗಲೂ ಹಾಗೇ ಇದೆ. ಆದರೆ ಈ ನಡುವೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವಧಿಯಲ್ಲಿ, ಜನರ ಬೇಡಿಕೆಯಂತೆ ಜಿಲ್ಲೆಯಲ್ಲಿ 49 ರೂಟ್‌ಗಳಲ್ಲಿ ನರ್ಮ್ ಬಸ್ಸು ಓಡಾಟ ಆರಂಭಿಸಿತ್ತು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಗ್ರಾಮೀಣ ಭಾಗದವರು ಇದನ್ನೇ ಅವಲಂಬಿಸಿದ್ದರು. ಆದರೆ ಕ್ರಮೇಣ ರಾಜಕೀಯದ ಕರಾಳ ಛಾಯೆ ಆವರಿಸಿ ನರ್ಮ್ ಬಸ್ಸು ಮೂಲೆ ಸೇರಲಾರಂಭಿಸಿದೆ.
ಹಿಂದೆ ಉಡುಪಿಯಲ್ಲಿ 41 ನರ್ಮ್ ಬಸ್ಸು ಸಂಚಾರ ಮಾಡುತ್ತಿದ್ದವು. ಆದರೆ ಸದ್ಯ 27 ಬಸುಗಳು ಮಾತ್ರ ಸಂಚಾರ ಮಾಡುತ್ತಿದೆ. ಮೂರು ಬಸ್ಸನ್ನು ಈಗಾಗಲೇ ಹಾಸನ ಡಿಪೋಗೆ ವರ್ಗಾಯಿಸಲಾಗಿದೆ. ಉಳಿದಂತೆ 7 ಬಸ್ಸುಗಳನ್ನು ಹಾಸನಕ್ಕೆ ವರ್ಗಾಯಿಸಲು ಸಿದ್ದತೆಗಳು ನಡೆದಿದೆ ಎನ್ನಲಾಗಿದೆ. ಉಳಿದ ಬಸ್‌ಗಳು ಡಿಪೋದಲ್ಲೇ ಇದೆ. ಹೀಗಾಗಿ ನರ್ಮ್ ಬಸ್ ಸಂಚಾರ ಇಲ್ಲದೇ ಇದರಿಂದ ವಿದ್ಯಾರ್ಥಿಗಳು ತೊಂದರೆ ಎದುರಿಸುವಂತಾಗಿದೆ. ವಿದ್ಯಾರ್ಥಿಗಳಿಗೆ ರಿಯಾಯಿತಿ ಸಂಚಾರವೇ ಈಗ ಇಲ್ಲವಾಗಿದೆ.
ಈ ಬಗ್ಗೆ ಉಡುಪಿಯ ಕಾಲೇಜು ವಿದ್ಯಾರ್ಥಿ ಸೂರಜ್ ಮಾತನಾಡಿ, ಉಡುಪಿ ಸಿಟಿಗೆ ಗ್ರಾಮೀಣ ಭಾಗಗಳಿಂದ ದಿನಕ್ಕೆ ನೂರಾರು ಮಂದಿ ಬರುತ್ತಾರೆ. ಅದರಲ್ಲೂ ವಿದ್ಯಾರ್ಥಿಗಳು ಉಡುಪಿಯ ಹಲವು ಕಾಲೇಜಿಗಳಿಗೆ ಗ್ರಾಮೀಣ ಭಾಗಗಳಿಂದ ಬರುತ್ತಾರೆ. ಆದರೆ ಈಗ ನರ್ಮ್ ಬಸ್ ಸಂಚಾರ ಕಡಿಮೆಯಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿದೆ. ಖಾಸಗಿ ಬಸ್‌ಗಳಲ್ಲಿ ಟಿಕೆಟ್ ದರವೂ ಹೆಚ್ಚಿದೆ. ನರ್ಮ್ ಬಸ್‌ಗಳಲ್ಲಿ ಟಿಕೆಟ್ ದರ ಕಡಿಮೆಯಿದ್ದು ವಿದ್ಯಾರ್ಥಿಗಳಿಗೆ ಉಪಯೋಗವಾಗುತಿತ್ತು. ಆದರೆ ಈಗ ದುಪ್ಪಟ್ಟು ಹಣ ಕೊಟ್ಟು ಕಾಲೇಜಿಗೆ ಬರಬೇಕಿದೆ. ನರ್ಮ್ ಬಸ್ ಇಲ್ಲದೇ ನರ್ಮ್ ಬಸ್ ನಿಲ್ದಾಣದ ಖಾಲಿ ಖಾಲಿಯಾಗಿದೆ ಅಂತಾ ಹೇಳಿದ್ದಾರೆ.

ಇನ್ನೂ ನರ್ಮ್ ಬಸ್ ಸಂಚಾರ ಇಲ್ಲದೇ, ಸಾರ್ವಜನಿಕರಂತೇ ನರ್ಮ್ ಬಸ್ ನಿಲ್ದಾಣದಲ್ಲಿ ಬಾಡಿಗೆ ಆಧಾರದಲ್ಲಿ ಹೋಟೆಲ್ ಸೇರಿದಂತೆ ಇತರೆ ವ್ಯಾಪಾರ ಮಾಡಿಕೊಂಡಿದ್ದವರಿಗೂ ನರ್ಮ್ ಬಸ್ ಕಡಿತದಿಂದ ಗ್ರಾಹಕರು ಇಲ್ಲದೇ ವ್ಯಾಪಾರದಲ್ಲಿ ನಷ್ಟ ಉಂಟಾಗುತ್ತಿದೆ. ಬಾಡಿಗೆ ಕಟ್ಟೋದಕ್ಕೂ ಪರದಾಡುವ ಪರಿಸ್ಥಿತಿ ಅವರದ್ದಾಗಿದೆ.
ಇನ್ನು ಹೊಟೇಲ್ ಮಾಲಿಕ ದಿವಾಕರ್ ಮಾತನಾಡಿ, ಈಗ ಎಲ್‌ಕೆಜಿಯಿಂದ ಉನ್ನತ ಪದವಿಯವೆರೆಗೆ ಶಾಲಾ ಕಾಲೇಜುಗಳು ಆರಂಭಗೊಂಡಿದೆ. ಹೊಟೇಲ್ ಉದ್ಯಮಗಳೆಲ್ಲ ಈಗ ಪೂರ್ಣ ಪ್ರಮಾಣದಲ್ಲಿ ತೆರದುಕೊಂಡಿದೆ. ನರ್ಮ್ ಬಸ್ ನಂಬಿ ನಿಲ್ದಾಣ ದಲ್ಲಿ ಹೊಟೇಲ್ ತೆರೆದಿದ್ದೆವು. ಈಗ ನರ್ಮ್ ಬಸ್‌ಗಳ ಸಂಖ್ಯೆ ಕಡಿಮೆಯಾಗಿದೆ. ನರ್ಮ್ ಬಸ್ ಫುಟ್ ಬೋರ್ಡ್ ತಗ್ಗು ಇರೋದರಿಂದ ವೃದ್ಧರಿಗೆ ಸಹಾಯವಾಗುತಿತ್ತು. ಬಸ್ ಬಸ್ ದರ ಕೂಡ ಕಡಿಮೆ ಇತ್ತು. ಜಿಲ್ಲೆಗೆ ಬಂದ ನರ್ಮ್ ಬಸ್ ಸೇವೆ ಬೇರೆ ಕಡೆ ಹೋಗದಂತೆ ಜನಪ್ರತಿನಿಧಿಗಳು ತಡೆಯಬೇಕು. ಜನರಿಗೆ ನೆರವಾಗಬೇಕು ಅಂತಾ ಹೇಳಿದ್ದಾರೆ.
ಈ ರೀತಿಯಲ್ಲಿ ನರ್ಮ್ ಬಸ್ ಕಡಿತ ಮಾಡೋದಕ್ಕೆ ಖಾಸಗಿ ಲಾಬಿ ಕೂಡ ಕಾರಣ ಎನ್ನಲಾಗಿದೆ. ಖಾಸಗಿಯವರ ಒತ್ತಡಕ್ಕೆ ಮಣಿದ ನರ್ಮ್‌ನ್ನು ಮೂಲೆಗೆ ಸೇರಿಸುತ್ತಿದ್ದಾರೆ ಎನ್ನುವ ಆರೋಪ ಕೂಡ ಕೇಳಿ ಬರುತ್ತಿದೆ. ಹೀಗಾಗಿ ಸರ್ಕಾರ ಕೂಡಲೇ ಎಚ್ಚೆತ್ತು, ನರ್ಮ್ ಬಸ್‌ಗಳ ಹಿಂದಿನಂತೆ ಮತ್ತೆ ಆರಂಭಿಸಬೇಕಿದೆ.












Click it and Unblock the Notifications