ಉಡುಪಿಯಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದ ನಾಲ್ವರು ಪೊಲೀಸರು
ಉಡುಪಿ, ಮೇ 30: ಉಡುಪಿ ಜಿಲ್ಲೆಯಲ್ಲಿ ನಾಲ್ವರು ಪೊಲೀಸರು ಮಾರಣಾಂತಿಕ ಕೊರೊನಾ ವೈರಸ್ ಸೋಂಕನ್ನು ಮಣಿಸಿ ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯ ವಿವಿಧ ಠಾಣೆಗಳ ನಾಲ್ವರು ಪೊಲೀಸರನ್ನು ಕೆಲ ದಿನಗಳ ಹಿಂದೆ ನಗರದ ಟಿ.ಎ ಪೈ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
Recommended Video
ಇಂದು ಆ ಎಲ್ಲಾ ನಾಲ್ವರು ಪೊಲೀಸರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪೊಲೀಸರನ್ನು ಆಸ್ಪತ್ರೆಯಿಂದ ಹೂಗುಚ್ಛ ಕೊಟ್ಟು ಬೀಳ್ಕೊಡಲಾಯಿತು. ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರಾಯ್ ಇಂದು ಪೊಲೀಸರು ಆಸ್ಪತ್ರೆಯಿಂದ ಬಿಡುಗಡೆ ಆಗುವ ಸಂದರ್ಭ ಉಡುಪಿಗೆ ಆಗಮಿಸಿದ್ದರು. ಎಸ್ ಪಿ ವಿಷ್ಣುವರ್ಧನ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
ಚಿತ್ರದುರ್ಗದಲ್ಲಿ ಪೊಲೀಸ್ ಗೆ ಕೊರೊನಾ ವೈರಸ್: ಚಿತ್ರದುರ್ಗದಲ್ಲಿ ಪೊಲೀಸ್ ಒಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹಾಸನದ KSRP 11ನೇ ಬೆಟಾಲಿಯನ್ ನ ಪೊಲೀಸ್ ಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಮೇ 22ರಂದು ರಜೆಯ ಮೇಲೆ ಇವರು ಚಿತ್ರದುರ್ಗ ತಾಲೂಕಿನ ಸೊಂಡೆಕೊಳ ಗ್ರಾಮಕ್ಕೆ ಬಂದಿದ್ದರು. ಮೇ 23ರಂದು ದಾವಣಗೆರೆಯಲ್ಲಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆಂದು ತಿಳಿದುಬಂದಿದೆ. ಕೊರೊನಾ ಸೋಂಕು ಪೀಡಿತ ಪ್ರದೇಶಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ಸೊಂಡೆಕೊಳ ಗ್ರಾಮದ ಶಾಲೆಯಲ್ಲಿ ಇವರನ್ನು ಕ್ವಾರೆಂಟೈನ್ ಮಾಡಲಾಗಿತ್ತು.

ಗಂಟಲು ದ್ರವ ಸಂಗ್ರಹಿಸಿ ಆರೋಗ್ಯ ಇಲಾಖೆ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇಂದು ಬಂದ ವರದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಇರುವುದಾಗಿ ತಿಳಿದುಬಂದಿದೆ. ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದವರ ಪತ್ತೆಗೆ ಜಿಲ್ಲಾಡಳಿತ ಮುಂದಾಗಿದೆ.












Click it and Unblock the Notifications