ಉಡುಪಿಯಲ್ಲಿ ಗ್ಯಾಂಗ್‌ವಾರ್: ಬ್ರದರ್ಸ್ ಸರ್ಕಾರ ವಿರುದ್ಧ ಗುಡುಗಿದ ಮಾಜಿ ಶಾಸಕ ರಘುಪತಿ ಭಟ್
ಉಡುಪಿ, ಮೇ 27: ಉಡುಪಿ ನಗರದಲ್ಲಿ ನಡೆದ ಗ್ಯಾಂಗ್‌ವಾರ್ ಬಗ್ಗೆ ಮಾಜಿ ಶಾಸಕ ರಘುಪತಿ ಭಟ್ ಕಳವಳ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಇಂತಹ ಘಟನೆ ನಡೆದಿರುವುದು ನಂಬಲು ಅಸಾಧ್ಯ. ಜಿಲ್ಲೆಯಲ್ಲಿ ಭಯಾನಕ ವಾತಾವರಣ ಸೃಷ್ಟಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿನಿಮಾದಲ್ಲಿ ನಡೆದಂತೆ ಉಡುಪಿಯಲ್ಲಿ ಗ್ಯಾಂಗ್‌ವಾರ್ ನಡೆದಿದೆ. ಉಡುಪಿ ನಗರದಲ್ಲಿ ಇದು ಊಹಿಸಲು ಸಾಧ್ಯವಿಲ್ಲದ ಘಟನೆ. ಕರಾವಳಿ ಭಾಗದ ಮೂಲಭೂತವಾದಿ ಮುಸ್ಲಿಂ ಸಂಘಟನೆ ಯಾವ ಮಟ್ಟಿಗೆ ಬೆಳೆದಿದ್ದಾರೆ ಎಂದು ಗೊತ್ತಾಗುತ್ತದೆ. ಹಿಂದೂ ಸಂಘಟನೆ, ಹಿಂದೂ ನಾಯಕರ ಮೇಲೆ ಈ ರೀತಿ ನಡೆದರೆ ಎನ್ನುವ ಭಯ ಇದೆ ಎಂದರು.

ಸರ್ಕಾರ ಗರುಡ ಸಂಘಟನೆಯಲ್ಲಿರುವ ಎಲ್ಲರನ್ನು ತನಿಖೆಗೆ ಒಳಪಡಿಸಬೇಕು. ಹಿಂದೂ ನಾಯಕರಿಗೆಲ್ಲ ಬೆದರಿಕೆ ಇದೆ. ಹಿಜಾಬ್ ವಿವಾದದ ವೇಳೆ ನನ್ನ ಹಾಗೂ ಕುಟುಂಬದ ಮೇಲೂ ಬೆದರಿಕೆ ಇತ್ತು. ಗರುಡ ಎಂಬ ಮೂಲಭೂತ ಸಂಘಟನೆ ಗೋ-ಸಾಗಾಟಕ್ಕೆ ಬೆಂಬಲ ಕೊಡುವ ಸಂಘಟನೆ. ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಕರಾವಳಿಗೆ ಆತಂಕದ ದಿನ ಬರಲಿದೆ.
ರಾಜ್ಯದಲ್ಲಿ ಬ್ರದರ್ಸ್ ಸರ್ಕಾರ ಇರುವ ಕಾರಣ ಏನು ಬೇಕಾದರೂ ಮಾಡಬಹುದು ಎನ್ನುವ ಧೈರ್ಯ ಇದೆ. ಯೋಗಿಯಂತಹ ಸರ್ಕಾರ ಇದ್ದರೆ, ಇಂತಹ ಕೃತ್ಯ ನಡೆಯುತ್ತಿರಲಿಲ್ಲ. ಉತ್ತರ ಪ್ರದೇಶದಲ್ಲಿ ಕ್ರಿಮಿನಲ್‌ಗಳನ್ನು ಮಟ್ಟ ಹಾಕಲಾಗುತ್ತಿದೆ. ಅಲ್ಲಿ ಹಿಂದೂ ಮುಸ್ಲಿಂ ಎಲ್ಲರೂ ಸಂತೋಷದಲ್ಲಿದ್ದಾರೆ. ಇಲ್ಲಿ ಬ್ರದರ್ಸ್ ಸರ್ಕಾರ ಇರುವ ಕಾರಣ ಕ್ರಿಮಿನಲ್‌ಗಳು ಹಾರಾಟ ನಡೆಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದರು.

ಪರಿಷತ್ ಚುನಾವಣೆಯಲ್ಲಿ ಗೆದ್ದ ಮೇಲೆ ವಜಾ ರದ್ದಾಗುತ್ತದೆ
ಇನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವ ಬಗ್ಗೆ ಮಾತನಾಡಿದ ರಘುಪತಿ ಭಟ್, ಉಚ್ಛಾಟನೆಯಾದದ್ದು ಮಾಧ್ಯಮದ ಮೂಲಕ ತಿಳಿಯಿತು ಬೇಸರವಾಯಿತು. ಶಿಸ್ತು ಸಮಿತಿಯ ನೋಟಿಸ್ ಈವರೆಗೆ ನನಗೆ ತಲುಪಿಲ್ಲ. ಪಕ್ಷ ಎಂದರೆ ಜೀವ ಬಿಡುವ ಕಾರ್ಯಕರ್ತರಿಗೆ ನಿರಂತರ ನೋವಾಗುತ್ತಿದೆ. ಪಕ್ಷದ ಎಲ್ಲಾ ಹುದ್ದೆಯಿಂದ ವಜಾ ಮಾಡುವುದಾಗಿ ಹೇಳಿದ್ದಾರೆ. ನನ್ನದು ಕಾರ್ಯಕರ್ತ ಹುದ್ದೆ, ಪಕ್ಷದಲ್ಲಿ ನನಗೆ ಯಾವ ಹುದ್ದೆಯನ್ನು ಕೊಟ್ಟಿಲ್ಲ ಎಂದರು.
ಬಿಜೆಪಿ ನನ್ನನ್ನು ಯಾವ ಹುದ್ದೆಯಿಂದ ವಜಾ ಮಾಡಿದೆ ಸ್ಪಷ್ಟಪಡಿಸಬೇಕು. ಟಿಕೆಟ್ ತಪ್ಪಿದಾಗ ಸ್ಥಾನಮಾನ ಕೊಡುತ್ತೇವೆ ಎಂದಿದ್ದರು. ಪಕ್ಷ ನನ್ನನ್ನು ರಾಜ್ಯ ಕಾರ್ಯಕಾರಿ ಸದಸ್ಯನನ್ನೂ ಮಾಡಿಲ್ಲ. ಈ ವಜಾಕ್ಕೆಲ್ಲ ನಾನು ತಲೆ ಬಿಸಿ ಮಾಡಿಕೊಳ್ಳಲ್ಲ. ನಾನು ಮೋದಿಗೆ ಬೈದಿಲ್ಲ.. ರಾಜ್ಯದ ನಾಯಕರಿಗೆ ಬೈದಿಲ್ಲ. ಬಿಜೆಪಿ ಪಕ್ಷದ ವ್ಯವಸ್ಥೆಯ ಬಗ್ಗೆ ನನಗೆ ಅಸಮಾಧಾನವಿದೆ. ಪಕ್ಷ ನಾಯಕರನ್ನು ಟೀಕೆ ಮಾಡಿದ ಜಗದೀಶ್ ಶೆಟ್ಟರ್ ಒಂದು ವರ್ಷದಲ್ಲಿ ವಾಪಾಸಾದರು. ಪಕ್ಷಕ್ಕೆ ವಾಪಸ್ ಆಗಿ ಲೋಕಸಭಾ ಟಿಕೆಟ್ ಪಡೆದುಕೊಂಡರು. ಇದು ಶಾಶ್ವತ ವಜಾ ಅಲ್ಲ ಪರಿಷತ್ ಚುನಾವಣೆಯಲ್ಲಿ ನಾನು ಗೆದ್ದ ಮೇಲೆ ವಜಾ ರದ್ದಾಗುತ್ತದೆ. ಒಬ್ಬ ಬಿಜೆಪಿ ಕಾರ್ಯಕರ್ತನನ್ನು ವಜಾ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.












Click it and Unblock the Notifications