ಗೋಕಳ್ಳರ ಜೊತೆ ಶಾಮೀಲು: ಭಜರಂಗದಳ ಮಾಜಿ ಸಂಚಾಲಕ ಅನಿಲ್ ಪ್ರಭು ಬಂಧನ
ಉಡುಪಿ, ಡಿಸೆಂಬರ್ 15: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಆಗಬೇಕು ಎಂದು ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದ ಹಿಂದೂಪರ ಸಂಘಟನೆಯ ಮುಖಂಡನೊಬ್ಬ ಅಕ್ರಮ ದನದ ಮಾಂಸ ಸಾಗಾಟ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದಾನೆ.
ಗೋವು ಕಳ್ಳರಿಗೆ ಗೋವು ಸಾಗಾಟ ಮಾಡಲು ಸಹಾಯ ಮಾಡುತ್ತಿದ್ದ ಮತ್ತು ಅದಕ್ಕೆ ಪ್ರತಿಯಾಗಿ ಪಾಲು(ಹಣ) ಪಡೆಯುತ್ತಿದ್ದ ಕಾರ್ಕಳ ನಗರದ ಭಜರಂಗದಳ ಮಾಜಿ ಸಂಚಾಲಕ ಅನಿಲ್ ಪ್ರಭುವನ್ನು ಪೊಲೀಸರು ಬಂಧಿಸಿದ್ದಾರೆ.
ದನಗಳನ್ನು ಕಳವುಗೈದು ಅದರ ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಕಾರ್ಕಳ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಪೊಲೀಸರಿಂದ ಯಾವುದೇ ರೀತಿ ತೊಂದರೆಯಾಗದಂತೆ ನಾನಿದ್ದೇನೆ ಎಂದು ವಾಗ್ದಾನ ನೀಡಿ, ಅವರಿಂದ ಪಾಲು ಪಡೆಯುತ್ತಿದ್ದನೆಂದು ತನಿಖೆಯ ವೇಳೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಅನಿಲ್ ಪ್ರಭುನನ್ನು ಬಂಧಿಸಿದ್ದಾರೆ.

ಕಾರ್ಕಳದಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮ ದನದ ಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, ವಿಚಾರಿಸಿದಾಗ ಈ ವಿಷಯ ಬಹಿರಂಗಗೊಂಡಿತು. ಆರೋಪಿ ಅನಿಲ್ ಪ್ರಭು ಈ ಹಿಂದೆ ಕಾರ್ಕಳ ಭಜರಂಗದಳದ ಸಂಚಾಲಕನಾಗಿದ್ದನು.












Click it and Unblock the Notifications