Operation Hasta: ಬಿಜೆಪಿಗೆ ಗುಡ್ ಬೈ ಹೇಳಿದ ಬೈಂದೂರು ಮಾಜಿ ಶಾಸಕ ಸುಕುಮಾರ್ ಶೆಟ್ಟಿ!
ಮಂಗಳೂರು, ಸೆಪ್ಟೆಂಬರ್ 08: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ರಾಜ್ಯದಲ್ಲಿ ಪಕ್ಷ ಸಂಘಟನೆಯನ್ನು ಭದ್ರಗೊಳಿಸುತ್ತಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಬಿಜೆಪಿ ಮುಖಂಡರ ಮನವೊಲಿಸಿ ಪಕ್ಷಕ್ಕೆ ಕರೆತರುತ್ತಿದ್ದು, ಆಪರೇಷನ್ ಹಸ್ತದ ಗಾಳಕ್ಕೆ ಬೈಂದೂರು ಬಿಜೆಪಿ ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಬಿದ್ದಿದ್ದಾರೆ.
ಟಿಕೆಟ್ ವಿಚಾರದಲ್ಲಿ ಬಿಜೆಪಿ ಕೈ ಕೊಟ್ಟ ಹಿನ್ನಲೆಯಲ್ಲಿ ಪಕ್ಷಾಂತರ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ಬಗ್ಗೆ ಅಧೀಕೃತವಾದ ಹೇಳಿಕೆಯನ್ನು ಸುಕುಮಾರ್ ಶೆಟ್ಟಿ ನೀಡಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಆಗಿರುವ ಬಿ.ಎಮ್ ಸುಕುಮಾರ್ ಶೆಟ್ಟಿ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಬೆಳೆಯುವವರನ್ನು ಬಿಜೆಪಿ ಪಕ್ಷ ಬಿಡುವುದಿಲ್ಲ. ಕಾಲೆಳೆದು ಮಲಗಿಸುವ ಕೆಲಸ ಬಿಜೆಪಿಯ ಪರಿಪಾಠ. ಅದರಂತೆ ನನಗೆ ಸೀಟು ಕೊಡದೆ ಅನ್ಯಾಯ ಮಾಡಿದ್ದಾರೆ. ಇದರಿಂದ ನನಗೆ ಮಾನಸಿಕವಾಗಿ ಬಹಳಷ್ಟು ನೋವಾಗಿದೆ. ಕೆಲವು ನಾಯಕರು ತನ್ನನ್ನ ಕಾಂಗ್ರೆಸ್ ಸೇರಲು ಹೇಳುತ್ತಿದ್ದರು. ಮುಂದಿನ ದಿನಗಳಲ್ಲಿ ಬಿಜೆಪಿಗೆ ಭವಿಷ್ಯ ಇಲ್ಲ ಎಂದು ಕಾಂಗ್ರೆಸ್ ಸೇರುವ ಧೃಢ ನಿರ್ಧಾರ ಮಾಡಿದ್ದೇನೆ ಎಂದು ಸುಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಕರಾವಳಿಯಲ್ಲಿ ಹಿಂದುತ್ವದ ಹಿನ್ನಲೆ ಹೊರತುಪಡಿಸಿ ಬೇರೆಲ್ಲ ಕಡೆ ಬಿಜೆಪಿ ಹೆಸರು ಹಾಳುಮಾಡಿಕೊಂಡಿದೆ. ಡಿ.ಕೆ ಶಿವಕುಮಾರ್ ಬಹಳಷ್ಟು ಬಾರಿ ಕರೆ ಮಾಡಿ ಆಹ್ವಾನ ನೀಡಿದ್ದಾರೆ. ಈಗ ನಾನು ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಸೇರುವ ಬಗ್ಗೆ ಗ್ರೀನ್ ಸಿಗ್ನಲ್ ನೀಡಿದ್ದೇನೆ ಎಂದು ಸುಕುಮಾರ್ ಶೆಟ್ಟಿ ಅಧೀಕೃತ ಹೇಳಿಕೆ ನೀಡಿದ್ದಾರೆ.
ಬೈಂದೂರು ಕಾಂಗ್ರೆಸ್ ಭಧ್ರಕೋಟೆಯಾಗಿತ್ತು. ನಿರಂತರ ಪ್ರಯತ್ನದಿಂದ ಬೈಂದೂರುರನ್ನು ಬಿಜೆಪಿಯ ಭಧ್ರಕೋಟೆಯಾಗಿ ಮಾಡಿದ್ದೇನೆ. ಬಿಜೆಪಿಯಲ್ಲಿ ಯಾರನ್ನೂ ಬೆಳೆಯೋಕೆ ಬಿಡಲ್ಲ. ನಾನು ಶಾಸಕನಾಗಿದ್ದಾಗ ಮಾಡಿದ ಅಭಿವೃದ್ಧಿ, ಜನರ ಸ್ಪಂದನೆಗೆ ನನಗೆ ಸೀಟು ಕೊಡಬೇಕಿತ್ತು. ಆದರೆ ಸೀಟು ಕೊಡದೆ ಮೋಸ ಮಾಡಿದ್ದಾರೆ.

ಬಿಜೆಪಿಗೆ ಇಲ್ಲಿ ತನಕ ವಿರೋಧ ಪಕ್ಷದ ನಾಯಕನ್ನು ಮಾಡಲು ಸಾಧ್ಯವಾಗಿಲ್ಲ. ಬಿಜೆಪಿ ಅಷ್ಟು ದುರ್ಬಲವಾಗಿದೆ. ನನ್ನನ್ನು ಕಾಂಗ್ರೆಸ್ ಸೇರುವಂತೆ ಡಿ.ಕೆ ಶಿವಕುಮಾರ್ ಮೂರು ಬಾರಿ ಕರೆ ಮಾಡಿ ಒತ್ತಾಯ ಮಾಡಿದ್ದಾರೆ. ಬೈಂದೂರು ಕಾಂಗ್ರೆಸ್ ಮುಖಂಡ ಗೋಪಾಲ ಪೂಜಾರಿ ಮತ್ತು ಶೃಂಗೇರಿ ಶಾಸಕರ ಜೊತೆ ಹೋಗಿ ಡಿಕೆಶಿವಕುಮಾರ್ ಅವರನ್ನು ಭೇಟಿಯಾಗಿ ಪಕ್ಷ ಸೇರೋದಾಗಿ ಹೇಳಿದ್ದೇನೆ. ಮುಂದೆ ಡಿ.ಕೆ ಶಿವಕುಮಾರ್ ಅವರನ್ನು ಬೈಂದೂರುಗೆ ಬಂದಾಗ ದೊಡ್ಡ ಕಾರ್ಯಕ್ರಮ ಮಾಡಿ ಪಕ್ಷ ಸೇರುವುದಾದಿ ಸುಕುಮಾರ್ ಶೆಟ್ಟಿ ಹೇಳಿದ್ದಾರೆ.












Click it and Unblock the Notifications