Karkala: ಪರಶುರಾಮ ಥೀಂ ಪಾರ್ಕ್ ಸಮೀಪದಲ್ಲಿ ಅಗ್ನಿ ಅವಘಡ: 30 ಎಕರೆ ಪ್ರದೇಶ ಬೆಂಕಿಗಾಹುತಿ
ಉಡುಪಿ, ಮೇ 06: ಉಡುಪಿ ಜಿಲ್ಲೆಯ ಕಾರ್ಕಳದ ವಿವಾದಿತ ಪರಶುರಾಮ ಥೀಂ ಪಾರ್ಕ್‌ನ ಇರುವ ಬೈಲೂರು ಸಮೀಪದ ಉಮಿಕ್ಕಳ ಗುಡ್ಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಒಂದಲ್ಲ..ಎರಡಲ್ಲ..ಬರೋಬ್ಬರಿ 30 ಎಕರೆ ಪ್ರದೇಶ ಬೆಂಕಿಗಾಹುತಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಉಮಿಕ್ಕಳ ಗುಡ್ಡದ ತಳದಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ ಗಿಡ ಮರ ಬಳ್ಳಿಗೆ ತಗುಲಿ, ಬಿರು ಬಿಸಿಲಿನ ನಡುವೆ ಬೀಸುತ್ತಿದ್ದ ಗಾಳಿಗೆ ತೀವ್ರಗತಿಯಲ್ಲಿ ವ್ಯಾಪಿಸಿತ್ತು. ಇದನ್ನು ಸ್ಥಳೀಯರು ಗಮನಿಸಿದ್ದು, ಕೂಡಲೇ ಸ್ಥಳೀಯ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಸ್ಥಳೀಯರ ಮಾಹಿತಿಯಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಧಾವಿಸಿ ಬಂದು ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾದರು. ಆದರೆ ಬೆಂಕಿ ಹಬ್ಬಿಕೊಂಡ ಸ್ಥಳ ಬೆಟ್ಟದ ಕೆಳಗಿನ ಪ್ರದೇಶವಾಗಿದ್ದು, ಅಲ್ಲಿಗೆ ತೆರಳಲು ಸಾಧ್ಯವಾಗಲಿಲ್ಲ. ಇನ್ನೊಂದೆಡೆ ಬೃಹತ್ ಪ್ರಮಾಣದ ಮುಳ್ಳು ಅಡ್ಡಿಯಾಯಿತು.
ಬಳಿಕ ಅಗ್ನಿಶಾಮಕ ದಳದ ಸಿಬಂದಿ, ಸ್ಥಳೀಯರು ನೀರನ್ನು ಹೊತ್ತೊಯ್ದು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಈ ವೇಳೆ ಅರಣ್ಯ ಇಲಾಖೆಯ ನೆರವನ್ನು ಪಡೆದುಕೊಳ್ಳಲಾಯಿತು.

ಘಟನಾ ಸ್ಥಳದಲ್ಲಿ ಸುಮಾರು 30 ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿದ್ದು, ಕೊನೆಗೆ ನಿಯಂತ್ರಣಕ್ಕೆ ಬಂದಿದೆ. ಇಲ್ಲಿರುವ ಪರಶುರಾಮ ಥೀಂ ಪಾರ್ಕ್‌ನ ವಿಗ್ರಹ ಕುರಿತು ವಿವಾದ ಇರುವ ಹೊತ್ತಲ್ಲೇ ಉಮಿಕ್ಕಳ ಬೆಟ್ಟದಲ್ಲಿ ದೊಡ್ಡ ಮಟ್ಟದ ಬೆಂಕಿ ಅವಘಡ ಸಂಭವಿಸಿರುವುದು ಸಾಕಷ್ಟು ಚರ್ಚೆಗಳಿಗೆ ಎಡೆಮಾಡಿ ಕೊಟ್ಟಿದೆ.












Click it and Unblock the Notifications