ಕಾರ್ಕಳ; ಊರಿಗೆ ಬಂದಿದ್ದ ಮಗ ತಂದೆಯಿಂದ ಕೊಲೆಯಾದ
ಉಡುಪಿ, ಡಿಸೆಂಬರ್ 11: ಈಚೆಗಷ್ಟೆ ಊರಿಗೆ ಬಂದಿದ್ದ ಮಗನನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ಕಸಬಾ ಗ್ರಾಮದ ರಾಮಸಮುದ್ರ ಬಳಿಯ ಮಂಗಲಪಾದೆಯಲ್ಲಿ ಈ ಘಟನೆ ನಡೆದಿದೆ.
ವಿವಿಯನ್ ಡಿ ಸೋಜಾ (24) ಮೃತಪಟ್ಟ ಯುವಕ. ಈತನ ತಂದೆ ವಿಕ್ಟರ್ ಡಿ ಸೋಜಾ ಕೊಲೆಗೈದ ಆರೋಪಿ. ವಿವಿಯನ್ ಈ ಹಿಂದೆ ಮುಂಬೈನಲ್ಲಿ ಉದ್ಯೋಗದಲ್ಲಿದ್ದು, ಇತ್ತೀಚೆಗಷ್ಟೆ ಊರಿಗೆ ಬಂದಿದ್ದ.
ತಂದೆ ಮಗ ಒಟ್ಟಿಗೇ ಕೂತು ಕುಡಿಯುವ ಅಭ್ಯಾಸ ಹೊಂದಿದ್ದರು. ಕುಡಿದಾಗ ತಂದೆ ಮಗನ ಮಧ್ಯೆ ಆಗಾಗ ಜಗಳವೂ ನಡೆಯುತ್ತಿತ್ತು. ನಿನ್ನೆ ರಾತ್ರಿ ಕೂಡ ತಂದೆ ಮಗನ ನಡುವೆ ಜಗಳ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ತಂದೆ ಮಗನ ತೊಡೆಗೆ ಚಾಕುವಿನಿಂದ ಇರಿದಿದ್ದಾನೆ. ಇರಿತಕ್ಕೊಳಗಾದ ವಿವಿಯನ್ ಡಿಸೋಜಾ ತೀವ್ರ ಅಸ್ವಸ್ಥಗೊಂಡಿದ್ದು, ಸರಕಾರಿ ಆಸ್ಪತ್ರೆಗೆ ಆತನನ್ನು ದಾಖಲಿಸಲಾಯಿತು.

ಆದರೆ ತೀವ್ರ ರಕ್ತಸ್ರಾವಕ್ಕೊಳಗಾಗಿ ವಿವಿಯನ್ ಸಾವನ್ನಪ್ಪಿದ್ದಾನೆ. ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಕ್ಟರ್ ಡಿಸೋಜಾನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.












Click it and Unblock the Notifications