Udupi: ಖ್ಯಾತ ಹುಲಿ ವೇಷಧಾರಿ ಅಶೋಕ್ ರಾಜ್ ಕಾಡಬೆಟ್ಟು ವಿಧಿವಶ
ಉಡುಪಿ, ಫೆಬ್ರವರಿ 02: ಉಡುಪಿ, ದಕ್ಷಿಣ ಕನ್ನಡ ಭಾಗದ ಖ್ಯಾತ ಹುಲಿ ವೇಷಧಾರಿ ಅಶೋಕ್ ರಾಜ್ ಕಾಡಬೆಟ್ಟು ವಿಧಿವಶರಾಗಿದ್ದಾರೆ. 56 ವರ್ಷ ವಯಸ್ಸಾಗಿದ್ದ ಅಶೋಕ್ ರಾಜ್ ಕಾಡಬೆಟ್ಟು ಅವರು ಗುರುವಾರ ಸಂಜೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಉಡುಪಿಯ ಕಾಡುಬೆಟ್ಟು ನಿವಾಸಿಯಾಗಿದ್ದ ಅಶೋಕ್ ರಾಜ್ ಅವರು ಜಿಲ್ಲೆಯಲ್ಲಿ ಹುಲಿ ಕುಣಿತ ಜನಪ್ರಿಯತೆ ಪಡೆಯುವಲ್ಲಿ ಕಾರಣೀಕರ್ತರಾಗಿದ್ದರು. ಹುಲಿವೇಷಕ್ಕೆ ಹೊಸ ಆಯಾಮ ನೀಡಿದ್ದ ಖ್ಯಾತ ಕಲಾವಿದ ಇವರಾಗಿದ್ದು, ಕಾಡಬೆಟ್ಟು ಹುಲಿವೇಷ ತಂಡ ಕಟ್ಟಿದ್ದರು. ಉಡುಪಿ ಅಷ್ಟಮಿ ಹಾಗೂ ವಿಟ್ಲಿಪಿಂಡಿಯ ವೇಳೆ ಇವರ ಹುಲಿ ವೇಷದ ಅಬ್ಬರ ನೋಡುಲು ಸಾವಿರಾರು ಜನ ಸೇರುತ್ತಿದ್ದರು.

ಕಳೆದ ಮೂರು ದಶಕಗಳಿಂದ ಹುಲಿ ವೇಷದಾರಿಯಾಗಿ ಪ್ರಸಿದ್ಧರಾಗಿರುವ ಅಶೋಕ್ ರಾಜ್ ಕಾಡಬೆಟ್ಟು ಹುಲಿ ಕುಣಿತವನ್ನು ರಾಜ್ಯ ಮತ್ತು ದೇಶಾದ್ಯಂತ ಪ್ರಚಾರಪಡಿಸಿದ್ದರು. ಕಳೆದೊಂದು ವರ್ಷದಿಂದ ಅಶೋಕ್ ರಾಜ್ ಕಾಡಬೆಟ್ಟು ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಕುಟುಂಬಸ್ಥರು ಹಾಗೂ ಸ್ನೇಹಿತರು ಅವರು ಚೇತರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರು. ಆದರೆ ದುರಾದೃಷ್ಟವಶಾತ್ ನಿನ್ನೆ ಸಂಜೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಅಶೋಕ್ ರಾಜ್ ಕೊನೆಯುಸಿರೆಳೆದಿದ್ದಾರೆ.
ಹುಲಿವೇಷದಲ್ಲೇ ಕುಸಿದು ಬಿದ್ದಿದ್ದ ಅಶೋಕ್ ರಾಜ್ ಕಾಡಬೆಟ್ಟು
ಕಳೆದ ನವರಾತ್ರಿ ಸಮಯದಲ್ಲಿ ಬೆಂಗಳೂರಿನಲ್ಲಿ ಹುಲಿವೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಡಬೆಟ್ಟು ಹುಲಿವೇಷ ತಂಡ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಅಬ್ಬರದ ಹುಲಿ ಕುಣಿತದ ವೇಳೆ ಅಶೋಕ್ ರಾಜ್ ಹುಲಿವೇಷದಲ್ಲೇ ಏಕಾಏಕಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಬೆಂಗಳೂರಿನಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಗೆ ಕರೆತಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿಲ್ಲ ಎಂದು ಸಹೋದರ ಹುಲಿ ವೇಷಧಾರಿ ಕಲಾವಿದ ಕಿಶೋರ್ ರಾಜ್ ಕಾಡಬೆಟ್ಟು ತಿಳಿಸಿದ್ದಾರೆ.












Click it and Unblock the Notifications