ಕರಾವಳಿ ವಿದ್ಯಾರ್ಥಿಗಳ ಜತೆ ಕಲಾಂ ಸಂವಾದ
ಉಡುಪಿ, ಮಾ.30: ಭಾರತದ ಮಾಜಿ ರಾಷ್ಟ್ರಪತಿ, ಭಾರತ ರತ್ನ, ವಿಜ್ಞಾನಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಜಿಲ್ಲೆಯ ಎರಡು ಕಾಲೇಜಿನ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲಿದ್ದಾರೆ. '2020ಕ್ಕೆ ಭಾರತವನ್ನು ಅಭಿವೃದ್ಧಿಶೀಲ ದೇಶವಾಗಿ ಪರಿವರ್ತನೆ' ಎಂಬ ವಿಷಯದ ಕುರಿತು 20 ನಿಮಿಷಗಳ ಕಾಲ ಉಪನ್ಯಾಸ ನೀಡಲಿದ್ದು, ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ಆಯೋಜನೆಗೊಂಡಿದೆ.
ಏ.2ರಂದು ಉಡುಪಿ ಜಿಲ್ಲೆಯಲ್ಲಿ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಬೆಳಗ್ಗೆ 10:20ಕ್ಕೆ ಮಣಿಪಾಲದ ಟಿ.ಎ.ಪೈ ಮ್ಯಾನೇಜ್ ಮೆಂಟ್ ಇನ್ ಸ್ಟಿಟ್ಯೂಟ್(ಟ್ಯಾಪ್ಮಿ)ನ 28ನೆ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವ ಡಾ.ಅಬ್ದುಲ್ ಕಲಾಂ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮ ಮಣಿಪಾಲದಲ್ಲಿರುವ ಕೆಎಂಸಿ ಗ್ರೀನ್ಸ್ ನಲ್ಲಿ ನಡೆಯಲಿದೆ.

ನಂತರ ಮಧ್ನಾಹ್ನ 12:15ಕ್ಕೆ ಶಿರ್ವ -ಬಂಟಕಲ್ಲಿನಲ್ಲಿರುವ ಶ್ರೀ ಮಧ್ವ ವಾದಿರಾಜ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಮ್ಯಾನೇಜ್ ಮೆಂಟ್ (SMVITM)ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ವಿದ್ಯಾಸಂಸ್ಥೆಯ ಪ್ರಾಂಶುಪಾಲ ಪ್ರೊ.ಡಾ.ರಾಧಾಕೃಷ್ಣ ಎಸ್.ಐತಾಳ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಉಡುಪಿ ಎಸ್ ಎಸ್ ವಿಎಂಇಟಿಯ ಕಾರ್ಯದರ್ಶಿ ರತ್ನಕುಮಾರ್ ಉಪಸ್ಥಿತರಿದ್ದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಇದೇ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ ಸಂಸ್ಥೆಯ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಇ ಎಂಡ್ ಸಿ, ಮೆಕ್ಯಾನಿಕಲ್ ಹಾಗೂ ಸಿವಿಲ್ ಇಂಜಿನಿಯರಿಂಗ್ ವಿಭಾಗಗಳ ಮೂರು ಸುಸಜ್ಜಿತ ಶೈಕ್ಷಣಿಕ ಸಮುಚ್ಚಯಗಳನ್ನು ಅನಾವರಣ ಗೊಳಿಸಲಿದ್ದಾರೆ. ಬಂಟಕಲ್ಲಿನ ಎಸ್ ಎಂವಿಐಟಿಎಂ ಸಂಸ್ಥೆಯ ಬಯಲು ರಂಗಮಂದಿರದಲ್ಲಿ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರು ವಹಿಸಲಿದ್ದಾರೆ.












Click it and Unblock the Notifications