Udupi: ಹರಕೆ ಈಡೇರಿಸಿದ ಕೊರಗಜ್ಜನಿಗೆ 1,002 ಬಾಟಲಿ ಮದ್ಯ ಅರ್ಪಿಸಿದ ಭಕ್ತ
ಉಡುಪಿ, ಡಿಸೆಂಬರ್ 08: ತುಳುನಾಡಿನ ಜನರು ಹೆಚ್ಚು ನಂಬಿಕೆ ಇಟ್ಟು ಪೂಜಿಸುವ ದೈವ ಕೊರಗಜ್ಜ. ಯಾವುದೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು, ಕಳೆದುಹೋದ ವಸ್ತುಗಳನ್ನು ಮರಳಿ ಪಡೆಯಲು, ಉದ್ಯೋಗ, ವ್ಯವಹಾರದಲ್ಲಿ ಯಶಸ್ಸು ಸಿಗಲು, ಆರೋಗ್ಯ ಸುಧಾರಿಸಲು ಇನ್ನು ಅನೇಕ ಬೇಡಿಕೆಯೊಂದಿಗೆ ತುಳುನಾಡಿನ ಜನರು ಕೊರಗಜ್ಜನನ್ನು ಪ್ರಾರ್ಥಿಸುತ್ತಾರೆ.
ಕೊರಗ ತನಿಯು ಐತಿಹಾಸಿಕ ವ್ಯಕ್ತಿಯೇ ಹೊರತು ಪೌರಾಣಿಕ ಸೃಷ್ಟಿಯಲ್ಲ ಎನ್ನುವ ನಂಬಿಕೆ ಇದೆ. ಹೀಗಾಗಿ ಕೊರಗಜ್ಜನ ಬಳಿ ಕೇಳಿಕೊಂಡ ಬಯಕೆಗಳು ಸಂಪೂರ್ಣಗೊಳ್ಳುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ. ತಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ಭಕ್ತರು ಕೊರಗಜ್ಜನಿಗೆ ಚಕ್ಕುಲಿ, ಬೀಡಾ, ವೀಳ್ಯದೆಲೆ, ಮದ್ಯದ ಬಾಟಲಿಗಳನ್ನು ಅರ್ಪಿಸುತ್ತಾರೆ. ಇದು ಇಲ್ಲಿಯ ಸಂಪ್ರದಾಯ. ಇದೇ ರೀತಿ ತನ್ನ ಬಯಕೆ ಈಡೇರಿಸಿದ ಕೊರಗಜ್ಜನಿಗೆ ಭಕ್ತರೊಬ್ಬರು ಸಾವಿರಕ್ಕೂ ಹೆಚ್ಚು ಮದ್ಯದ ಪ್ಯಾಕೆಟ್‌ಗಳನ್ನು ಅರ್ಪಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಪೇಟೆಬೆಟ್ಟು ಭಗವಾನ್ ಶ್ರೀ ಬಬ್ಬು ಸ್ವಾಮಿ ಹಾಗೂ ಸ್ವಾಮಿ ಕೊರಗಜ್ಜ ದೇವಸ್ಥಾನ ಕಟಪಾಡಿಯಲ್ಲಿದ್ದು, ಭಕ್ತರ ಆರಾಧ್ಯ ಸ್ಥಳವಾಗಿದೆ. ದಿನನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಬಂದು ಹರಕೆ ಕಟ್ಟಿಕೊಳ್ಳುತ್ತಾರೆ. ಜೊತೆಗೆ ತಮ್ಮ ಬೇಡಿಕೆ ಈಡೇರಿದ್ದರೆ ಹರಕೆ ತೀರಿಸುತ್ತಾರೆ. ಇಲ್ಲಿ ನೂರಾರು ಭಕ್ತರು ಚಕ್ಕುಲಿ, ಬೀಡಾ, ವೀಳ್ಯದೆಲೆ, ಮದ್ಯವನ್ನು ಕೊರಗಜ್ಜನಿಗೆ ಪ್ರತಿನಿತ್ಯ ಅರ್ಪಿಸುತ್ತಾರೆ. ಬಳಿಕ ಸಮರ್ಪಿಸಲಾದ ಮದ್ಯವನ್ನು ಪ್ರಸಾದದ ರೂಪದಲ್ಲಿ ಮದ್ಯ ಸೇವಿಸುವ ಭಕ್ತರಿಗೆ ನೀಡಲಾಗುತ್ತದೆ.
ಉಡುಪಿ ಜಿಲ್ಲೆಯ ಸಾಲಿಗ್ರಾಮದ ದಂಪತಿಯು ಮದುವೆಯಾಗಿ ಹಲವು ವರ್ಷಗಳಾಗಿದ್ದು, ಸಂತಾನ ಪ್ರಾಪ್ತಿಯಾಗಿಲ್ಲ ಎಂದು ನೊಂದಿದ್ದರು. ಈ ದಂಪತಿ ಸಂಬಂಧಿಕರೊಬ್ಬರ ಸಲಹೆ ಮೇರೆಗೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿಯ ಪೇಟೆಬೆಟ್ಟು ಬಬ್ಬುಸ್ವಾಮಿ ಮತ್ತು ಕೊರಗಜ್ಜ ದೈವಸ್ಥಾನಕ್ಕೆ ಬಂದು ಕೊರಗಜ್ಜ ಗುಡಿಯ ಮುಂದೆ ಸಂತಾನ ಪ್ರಾಪ್ತಿಯಾದರೆ ಒಂದು ಸಾವಿರದ ಎರಡು ಮದ್ಯದ ಬಾಟಲಿಗಳ ಹರಕೆ ರೂಪದಲ್ಲಿ ನೀಡುತ್ತೇವೆ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತಾರೆ.

ಹರಕೆ ಹೊತ್ತ ಕೆಲವೇ ಸಮಯದಲ್ಲಿ ದಂಪತಿಗೆ ಸಂತಾನ ಪ್ರಾಪ್ತಿಯಾಗಿದೆ. ಪೇಟೆಬೆಟ್ಟು ಬಬ್ಬುಸ್ವಾಮಿ ಮತ್ತು ಕೊರಗಜ್ಜನ ಮಹಿಮೆಯಿಂದ ತಮ್ಮ ಪ್ರಾರ್ಥನೆ ಫಲಿಸಿದೆ ಎಂದು ತಾನು ಹರಕೆ ಹೊತ್ತಂತೆ, ಒಂದು ಸಾವಿರದ ಎರಡು ಮದ್ಯದ ಬಾಟಲಿಗಳನ್ನು ತಂದು ಕೊರಗಜ್ಜನ ಸನ್ನಿಧಾನಕ್ಕೆ ದಂಪತಿ ಅರ್ಪಿಸಿದ್ದಾರೆ. ಹರಕೆ ಹೊತ್ತ ಕ್ಷಣ ಮಾತ್ರದಲ್ಲಿ ಸ್ವಾಮಿ ಕೊರಗಜ್ಜ ಈಡೇರಿಸುತ್ತಾರೆ ಎನ್ನುವ ಭಕ್ತರ ನಂಬಿಕೆ ಇನ್ನಷ್ಟು ಹೆಚ್ಚಾಗಿದೆ.
ಕೊರಗಜ್ಜನಿಗೆ ಮದ್ಯ ನೈವೇದ್ಯ ಯಾಕೆ..?
ಕೊರಗಜ್ಜನಾಗಿರುವ ಕೊರಗ ತನಿಯು ಆ ಕಾಲದಲ್ಲಿ ಸಾಮಾನ್ಯ ವ್ಯಕ್ತಿಯಾಗಿದ್ದು, ಕಳ್ಳು ವ್ಯಾಪಾರ ಮಾಡುವ ಕುಟುಂಬದಲ್ಲಿ ಬೆಳೆದರು. ಜೊತೆಗೆ ಕಳ್ಳನ್ನು ಸೇವಿಸುವುದು ಆ ಕುಟುಂಬಕ್ಕೆ ಸಾಮಾನ್ಯವಾಗಿತ್ತು. ಹೀಗಾಗಿ ತನಿಯನಿಗೆ ಮದ್ಯವನ್ನು ಅರ್ಪಿಸುವುದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಮೊದಲೆಲ್ಲ ತನಿಯನಿಗೆ ಕಳ್ಳು ಅರ್ಪಿಸಲಾಗುತ್ತಿತ್ತು. ಈಗಿಗ ಪ್ಯಾಕೆಟ್ ಮದ್ಯಗಳನ್ನು ಅರ್ಪಿಸಲಾಗುತ್ತಿದೆ. ಜೊತೆಗೆ ಎಲೆ, ಅಡಿಕೆ ಹಾಗೂ ಬೀಡಿ ಪ್ಯಾಕೆಟ್‌ನ್ನು ಸಹ ಕೆಲವು ಭಕ್ತರು ಅರ್ಪಿಸುತ್ತಾರೆ.












Click it and Unblock the Notifications