ಮತ್ತೆ ಪ್ರಕೃತಿ ಚಿಕಿತ್ಸೆಗೆ ಉಡುಪಿಗೆ ಆಗಮಿಸಿದ ದೇವೇಗೌಡ ದಂಪತಿ
ಉಡುಪಿ ಮೇ 09:ಇತ್ತೀಚೆಗಷ್ಟೆ ಉಡುಪಿಯ ಕಾಪು ಬಳಿಯಿರುವ ಹೆಲ್ತ್ ರೆಸಾರ್ಟ್ ನಲ್ಲಿ ಪ್ರಕೃತಿ ಚಿಕಿತ್ಸೆ ಪಡೆದು ತೆರಳಿದ್ದ ಮಾಜಿ ಪ್ರಧಾನಿ ದೇವೇಗೌಡ ಅವರು ಮತ್ತೆ ಐದು ದಿನಗಳ ಕಾಲ ಪ್ರಕೃತಿ ಚಿಕಿತ್ಸೆಗೆಂದು ಉಡುಪಿಗೆ ಆಗಮಿಸಿದ್ದಾರೆ. ಈ ಬಾರಿ ದೇವೇಗೌಡ ಅವರು ತಮ್ಮ ಪತ್ನಿ ಚನ್ನಮ್ಮ ಅವರ ಜೊತೆ ಆಗಮಿಸಿರುವುದು ವಿಶೇಷ.
ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ದಂಪತಿ ರಸ್ತೆ ಮಾರ್ಗವಾಗಿ ನೇರವಾಗಿ ಉಡುಪಿ ತೆರಳಿದರು.ದೇವೇಗೌಡರ ಜೊತೆ ಅವರ ಪತ್ನಿ ಚನ್ನಮ್ಮ ಕೂಡ ಪ್ರಕೃತಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.

ಕಳೆದ ವಾರವಷ್ಟೇ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೊಂದಿಗೆ ದೇವೇಗೌಡ ಅವರು ಇದೇ ರೆಸಾರ್ಟ್ ನಲ್ಲಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆ ಪಡೆದು ನೇರವಾಗಿ ಚಿಕ್ಕಮಗಳೂರಿಗೆ ತೆರಳಿದ್ದರು.ಆ ನಂತರ ಕೊಪ್ಪ ತಾಲೂಕಿನ ಕಮ್ಮರಡಿಗೆಯ ಉಮಾಮಹೇಶ್ವರಿ ದೇವಾಲಯದಲ್ಲಿ ಅಮಾವಾಸ್ಯೆಯಂದು ವಿಶೇಷ ಪೂಜೆ ಸಲ್ಲಿಸಿದ್ದರು.
ದೇವಾಲಯದಲ್ಲಿ ಶತ್ರು ಸಂಹಾರ, ಯಶಸ್ಸು ಹಾಗೂ ಶ್ರೇಯಸ್ಸಿಗಾಗಿ ಕುಮಾರಸ್ವಾಮಿ ಪೂಜೆ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಅವರೊಂದಿಗೆ ದೇವೇಗೌಡ ಕೂಡ ಜೊತೆಗಿದ್ದರು.

ಈಗ ದೇವೇಗೌಡರು ತಮ್ಮ ಪತ್ನಿ ಚನ್ನಮ್ಮ ಅವರ ಜೊತೆ ರೆಸಾರ್ಟ್ ಗೆ ಆಗಮಿಸಿದ್ದಾರೆ. ಈ ನಡುವೆ ದೇವೇಗೌಡ ಅವರು ಇಂದು ಅಥವಾ ನಾಳೆ ಶುಕ್ರವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಕೊಲ್ಲೂರಿನ ಮುಕಾಂಬಿಕಾ ದೇವಸ್ಥಾನದಲ್ಲಿ ಚಂಡಿಕಾ ಯಾಗ ಸಹ ನಡೆಸಲಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications