ಉಡುಪಿ-ಅಯೋಧ್ಯೆ ನೇರ ರೈಲು; ಪೇಜಾವರ ಶ್ರೀಗಳಿಗೆ ಮನವಿ
ಉಡುಪಿ, ಜನವರಿ 09: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಮೂರ್ತಿ ಪ್ರತಿಷ್ಠಾಪನೆ ಜನವರಿ 22ರಂದು ನಡೆಯಲಿದೆ. ಮುಂದಿನ ದಿನಗಳಲ್ಲಿ ರಾಮ ಮಂದಿರ ನೋಡಲು ತೆರಳುವ ಭಕ್ತರ ಸಂಖ್ಯೆ ಹೆಚ್ಚಾಗಲಿದೆ. ಆದ್ದರಿಂದ ನೇರ ರೈಲು ಸಂಪರ್ಕ ಬೇಕು ಎಂದು ಬೇಡಿಕೆ ಇಡಲಾಗುತ್ತಿದೆ.
ಕರ್ನಾಟಕದ ಕರಾವಳಿ ಭಾಗದ ಉಡುಪಿ, ಕುಂದಾಪುರದಿಂದ ಅಯೋಧ್ಯೆಗೆ ನೇರ ರೈಲು ಸಂಪರ್ಕ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ. ಈ ಕುರಿತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗೆ ಮನವಿ ಸಲ್ಲಿಸಲಾಗಿದೆ.

ಕರಾವಳಿ ರೈಲ್ವೆ ಹಿತರಕ್ಷಣಾ ಒಕ್ಕೂಟ ಈ ಕುರಿತು ಮನವಿ ಮಾಡಿದೆ. ಮನವಿ ಸ್ವೀಕಾರ ಮಾಡಿರುವ ಸ್ವಾಮೀಜಿಗಳು, ಈ ಕುರಿತು ರೈಲ್ವೆ ಸಚಿವರಿಗೆ ಪತ್ರ ಬರೆಯುತ್ತೇನೆ, ದೂರವಾಣಿ ಮೂಲಕವೂ ಮಾತುಕತೆ ನಡೆಸುತ್ತೇನೆ ಎಂದು ಭರವಸೆಯನ್ನು ನೀಡಿದ್ದಾರೆ.
ಮನವಿಯಲ್ಲಿನ ವಿವರ; ಭಾರತೀಯ ರೈಲ್ವೆ ಈಗಾಗಲೇ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ದೇಶದ ವಿವಿಧ ಭಾಗಗಳಿಂದ ಅಯೋಧ್ಯೆಗೆ ನೇರ ರೈಲು ಸಂಪರ್ಕವನ್ನು ಆರಂಭಿಸಿದೆ. ಕರ್ನಾಟಕದಲ್ಲಿ ಮೈಸೂರು, ಹುಬ್ಬಳ್ಳಿ ಮತ್ತು ಬೆಂಗಳೂರಿನಿಂದ ನೇರ ರೈಲುಗಳು ಸಂಚಾರ ನಡೆಸಲಿವೆ.
ಕರಾವಳಿ ಭಾಗದ ಭಕ್ತರು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಕ್ಕೆ ತೆರಳಲು ಅನುಕೂಲವಾಗುವಂತೆ ಉಡುಪಿ, ಕುಂದಾಪುರದಿಂದ ಅಯೋಧ್ಯೆಗೆ ನೇರ ರೈಲು ಆರಂಭಿಸಬೇಕು ಎಂದು ಮನವಿಯಲ್ಲಿ ಉಲ್ಲೇಖ ಮಾಡಲಾಗಿದೆ.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಈಗಾಗಲೇ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್‌ಗೆ ಕರಾವಳಿ ಭಾಗದಿಂದ ಅಯೋಧ್ಯೆಗೆ ನೇರ ರೈಲು ಸಂಪರ್ಕ ಕಲ್ಪಿಸಬೇಕು ಎಂದು ಮನವಿ ಸಲ್ಲಿಕೆ ಮಾಡಿದ್ದಾರೆ.
ಉಡುಪಿಯ ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ಬರೆದ ಪತ್ರವನ್ನು ಉಲ್ಲೇಖಿಸಿ ಕೇಂದ್ರ ಸಚಿವೆಯೂ ಆಗಿರುವ ಶೋಭಾ ಕರಂದ್ಲಾಜೆ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದರು. ಕರ್ನಾಟಕದಿಂದ ವಿಶೇಷವಾಗಿ ಕರಾವಳಿ ಪ್ರದೇಶದಿಂದ ಹಲವಾರು ಯಾತ್ರಿಕರು, ಪ್ರವಾಸಿಗರು ಅಯೋಧ್ಯೆಗೆ ಭೇಟಿ ನೀಡುತ್ತಾರೆ. ಆದ್ದರಿಂದ ನೇರ ರೈಲು ಅಗತ್ಯವಿದೆ" ಎಂದು ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದರು.
ರೈಲ್ವೆ ಇಲಾಖೆ ಕರಾವಳಿ ಭಾಗದ ಜನರ, ಜನಪ್ರತಿನಿಧಿಗಳ ಮನವಿಗೆ ಸ್ಪಂದಿಸಲಿದೆಯೇ? ಎಂದು ಕಾದು ನೋಡಬೇಕಿದೆ. ಬೆಂಗಳೂರು ಸೇರಿದಂತೆ ವಿವಿಧ ನಗರದಿಂದ ಅಯೋಧ್ಯೆಗೆ ಆರಂಭಿಸಿರುವಂತೆ ಕರಾವಳಿ ಭಾಗದಿಂದ ನೇರ ರೈಲು ಆರಂಭವಾಗುವ ನಿರೀಕ್ಷೆ ಇದೆ.
ರೈಲು ನಿಲ್ದಾಣ ಉದ್ಘಾಟನೆ; ಶ್ರೀ ರಾಮ ಮಂದಿರದ ಮೂರ್ತಿ ಪ್ರತಿಷ್ಠಾಪನೆ ಜನವರಿ 22ರಂದು ನಡೆಯಲಿದೆ. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಪುನರಾಭಿವೃದ್ಧಿಗೊಂಡ ಅಯೋಧ್ಯೆ ರೈಲು ನಿಲ್ದಾಣವನ್ನು ಲೋಕಾರ್ಪಣೆ ಮಾಡಿದ್ದಾರೆ.
ರೈಲು ನಿಲ್ದಾಣ ಉದ್ಘಾಟಿಸಿ ಮಾತನಾಡಿದ ನರೇಂದ್ರ ಮೋದಿ, "ಅಯೋಧ್ಯಾ ಧಾಮ್ ರೈಲು ನಿಲ್ದಾಣವು 10 ಸಾವಿರ ಜನರನ್ನು ನಿಭಾಯಿಸುತ್ತದೆ, ಇದೀಗ ನವೀಕರಣ ಪೂರ್ಣಗೊಂಡ ನಂತರ ಇದು 60 ಸಾವಿರಕ್ಕೆ ತಲುಪುತ್ತದೆ" ಎಂದರು.
ಭವಿಷ್ಯದಲ್ಲಿ ಅಯೋಧ್ಯೆಗೆ ಆಗಮಿಸುವ ಭಕ್ತರನ್ನು ಗಮನದಲ್ಲಿಟ್ಟುಕೊಂಡು ರೈಲು ನಿಲ್ದಾಣವನ್ನು ಪುನರ್ ಅಭಿವೃದ್ಧಿಗೊಳಿಸಲಾಗಿದೆ. ಮರುಅಭಿವೃದ್ಧಿಗೊಂಡ ಅಯೋಧ್ಯೆ ರೈಲು ನಿಲ್ದಾಣದ ಹಂತ-1 ಇದನ್ನು 'ಅಯೋಧ್ಯಾ ಧಾಮ್ ಜಂಕ್ಷನ್' ರೈಲು ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ.
ರೂ. 240 ಕೋಟಿಗೂ ಹೆಚ್ಚು ವೆಚ್ಚದಲ್ಲಿ ರೈಲು ನಿಲ್ದಾಣ ಅಭಿವೃದ್ಧಿಪಡಿಸಲಾಗಿದೆ. ಮೂರು ಅಂತಸ್ತಿನ ಆಧುನಿಕ ರೈಲು ನಿಲ್ದಾಣದ ಕಟ್ಟಡವು ಲಿಫ್ಟ್‌ಗಳು, ಎಸ್ಕಲೇಟರ್‌ಗಳು, ಫುಡ್ ಪ್ಲಾಜಾಗಳು, ಪೂಜಾ ಅಗತ್ಯಗಳಿಗಾಗಿ ಅಂಗಡಿಗಳು, ಮಕ್ಕಳ ಆರೈಕೆ ಕೊಠಡಿಗಳು, ವೈಟಿಂಗ್ ಹಾಲ್‌ಗಳಂತಹ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿದೆ.












Click it and Unblock the Notifications