ರಾಜ್ಯದ ಈ ಭಾಗದಲ್ಲಿ ಮಳೆ ರಜೆ ಸರಿದೂಗಿಸಲು ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ
ಉಡುಪಿ, ಜೂನ್, 21: ಭಾರೀ ಮಳೆ ಮುಂದುವರೆದ ಕಾರಣ ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ಸಾಲು ರಜೆಗಳನ್ನೇ ಘೋಷಿಸಲಾಗಿತ್ತು. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಿಂದುಳಿಯುತ್ತಿರುವ ಹಿನ್ನೆಲೆ ಈ ರಜೆಗಳನ್ನು ಸರಿದೂಗಿಸಲು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅದೇನಂತೀರಾ? ಇಲ್ಲಿದೆ ನೋಡಿ ಉತ್ತರ.
ಭಾರೀ ಮಳೆ ಹಿನ್ನೆಲೆ ದಕ್ಷಿಣ ಕನ್ನಡ, ಉಡುಪಿ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಗಳಿಗೆ ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿತ್ತು. ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ರಜೆ ನೀಡಲಾಗಿದೆ. ಇದೀಗ ಈ ರಜೆಗಳನ್ನು ಸರಿದೂಗಿಸಲು ಬೈಂದೂರು ಬೈಂದೂರು ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರಕ್ಕೆ ಕೈಹಾಕಿದೆ.

ರಣ ಮಳೆ ಮುಂದುವರೆದ ಪರಿಣಾಮ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಶಾಲೆಗಳಿಗೆ ಒಟ್ಟು 5 ರಜೆಗಳನ್ನು ನೀಡಲಾಗಿತ್ತು. ಇದೀಗ ಈ ರಜೆಗಳನ್ನು ಸರಿದೂಗಿಸುವ ಹಿನ್ನೆಲೆ ಜೂನ್ 21, 28, ಜುಲೈ 5, 12, 19, 26, ಅಗಸ್ಟ್ 2, 9, 16, 23 ಒಟ್ಟು 10 ಶನಿವಾರ ಪೂರ್ಣ ದಿನದವರೆಗೆ ಶಾಲೆ ನಡೆಸಲು ಆದೇಶಿಸಿ ಜಿಲ್ಲೆಯ ಸರ್ಕಾರಿ, ಅನುದಾನ ರಹಿತ, ಅನುದಾನಿತ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ಮುಖ್ಯಸ್ಥರಿಗೆ ಬೈಂದೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಸೂಚಿಸಿದ್ದಾರೆ.
ಭಾರೀ ಮಳೆ ಮುನ್ಸೂಚನೆ ಇದ್ದ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಈಗಾಗಲೇ ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ, ಪದವಿ ಪೂರ್ವ ಕಾಲೇಜು, ಐಟಿಐ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿತ್ತು.
ಮತ್ತೊಂದೆಡೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದುದರಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆ ಮಕ್ಕಳ ಹಿತದೃಷ್ಟಿಯಿಂದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ತಾಲ್ಲೂಕುಗಳಲ್ಲಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಸಾಲು ರಜೆಗಳೇ ಸಿಕ್ಕಂತಾಗಿವೆ. ಇದರಿಂದ ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವನ್ನೇ ಬಡಿಸಿದಂತಾಗಿದೆ.












Click it and Unblock the Notifications