ಲಾಕ್‌ಡೌನ್ ಸಂದರ್ಭದಲ್ಲಿ ಮೀನುಗಾರಿಕೆಗೆ ವಿನಾಯಿತಿ ಕೊಟ್ಟ ಸರ್ಕಾರ
ಉಡುಪಿ, ಏಪ್ರಿಲ್ 12: ಕೇಂದ್ರ ಸರ್ಕಾರದ ಆದೇಶದಂತೆ ದೇಶಾದ್ಯಂತ ಕೊರೊನ ಲಾಕ್ ಡೌನ್ ನಡುವೆಯೂ ಮೀನುಗಾರಿಕೆಗೆ ವಿನಾಯಿತಿ ನೀಡಲಾಗುತ್ತಿದೆ. ದೇಶದೆಲ್ಲೆಡೆ 21 ದಿನಗಳ ಲಾಕ್ ಡೌನ್ ಜಾರಿಯಲ್ಲಿದ್ದು, ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ಆದರೀಗ ಮೀನುಗಾರಿಕೆಗೆ ಅನುಮತಿ ನೀಡಿರುವುದರಿಂದ ರಾಜ್ಯಾದ್ಯಂತ ಹದಿನಾಲ್ಕು ಸಾವಿರ ನಾಡ ದೋಣಿಗಳು ಕಸುಬು ಆರಂಭಿಸಲಿದೆ ಎಂದು ಬಂದರು ಮತ್ತು ಮೀನುಗಾರಿಕಾ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
''ಒಳನಾಡು ಮೀನುಗಾರಿಕೆಗೂ ಅವಕಾಶ ಕಲ್ಪಿಸಲಾಗಿದೆ, ಮೀನುಗಾರಿಕೆ ನಡೆಸಿದ ದೋಣಿಗಳು ಬಂದರಿಗೆ ಬರುವಂತಿಲ್ಲ, ಮನೆ ಮನೆಗೆ ಭೇಟಿ ಕೊಟ್ಟು ಮೀನನ್ನು ಗ್ರಾಹಕರಿಗೆ ಮಾರಾಟ ಮಾಡಬೇಕು ಸಾಮಾಜಿಕ ಅಂತರ ವಹಿಸಿಕೊಂಡು ವ್ಯವಹಾರ ನಡೆಸಬೇಕು, ಮೀನು ತಿನ್ನುವವರಿಗೆ ಮತ್ತು ಮೀನು ಹಿಡಿಯುವವರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ'' ಎಂದು ಸಚಿವ ಶ್ರೀನಿವಾಸ ಪೂಜಾರಿ ಹೇಳಿದರು.
ಮೀನಿನ ದರ ನಿಗದಿಪಡಿಸುವ ಶಕ್ತಿ ನಮ್ಮ ಕೈಯಲ್ಲಿ ಇಲ್ಲ, ಹಿಡಿದ ಮೀನನ್ನು ಹರಾಜು ಮಾಡುವ ಅವಕಾಶ ಯಾರಿಗೂ ಇಲ್ಲ, ಸದ್ಯಕ್ಕೆ ಬೆಂಗಳೂರಿಗೆ ಕರಾವಳಿಯ ಮೀನು ಪೂರೈಕೆ ಸಾಧ್ಯವಿಲ್ಲ, ಮೂರು ಜಿಲ್ಲೆಗಳ ಬೇಡಿಕೆಗೆ ಮೊದಲ ಆದ್ಯತೆ ಕೊಡಲಾಗುವುದು, ಹೊರ ಜಿಲ್ಲೆ, ಬೆಂಗಳೂರು ಮೀನು ರವಾನೆ ಬಗ್ಗೆ ಮಾರ್ಗಸೂಚಿ ರೂಪಿಸಲಾಗುವುದು ಎಂದು ಉಡುಪಿಯಲ್ಲಿ ಸಚಿವರು ತಿಳಿಸಿದರು.

ರಾಷ್ಟ್ರೀಯ ವಿಪತ್ತು ನಿಯಂತ್ರಣ ಕಾಯ್ದೆ ಅನ್ವಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಮೀನುಗಾರಿಕೆ ಕುರಿತಂತೆ ಎಲ್ಲಾ ಸಂಬಂಧಪಟ್ಟ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.












Click it and Unblock the Notifications