ಉಡುಪಿಯಲ್ಲಿ ಗ್ರಾಹಕರ ಠೇವಣಿಗೆ ಖನ್ನ ಹಾಕಿದ ಬ್ಯಾಂಕ್; ಆತ್ಮಹತ್ಯೆಗೆ ಯತ್ನಿಸಿದ ಬ್ಯಾಂಕ್ ಸಿಬ್ಬಂದಿ
ಮಂಗಳೂರು, ಡಿಸೆಂಬರ್, 19: ನೂರಾರು ಕೋಟಿ ಪಂಗನಾಮ ಹಾಕಿದ ಸಹಕಾರಿ ಬ್ಯಾಂಕ್‌ಗೆ ಗ್ರಾಹಕರು ಮುತ್ತಿಗೆ ಹಾಕಿದ ಘಟನೆ ಉಡುಪಿಯಲ್ಲಿ ನಡೆದಿದೆ. ನೂರಾರು ಕೋಟಿ ವಂಚಿಸಿದ ಕಮಲಾಕ್ಷಿ ವಿವಿಧೋದ್ದೇಶ ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು ನೂರು ಕೋಟಿಗೂ ಅಧಿಕ ಠೇವಣಿ ಹಣ ಪಡೆದ ಬ್ಯಾಂಕ್ ಮುಖ್ಯಸ್ಥ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖದೀಮ ಬ್ಯಾಂಕ್ ಮುಖ್ಯಸ್ಥನಿಗಾಗಿ ಬಲೆ ಬೀಸಿದ್ದಾರೆ. ಉಡುಪಿಯ ಕಮಲಾಕ್ಷಿ ವಿವಿಧೊದ್ದೇಶ ಬ್ಯಾಂಕ್‌ನಲ್ಲಿ ಅವ್ಯವಹಾರದ ಆರೋಪ ಕೇಳಿಬಂದಿದೆ. ಉಡುಪಿಯ ಕೃಷ್ಣಾಪುರ ಮಠದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಗ್ರಾಹಕರು ಜೀವನ ಪರ್ಯಂತ ದುಡಿದ ಹಣವನ್ನು ಠೇವಣಿ ಇಟ್ಟಿದ್ದರು. ತಿಂಗಳಿಗೆ 12% ಬಡ್ಡಿಯಂತೆ ಠೇವಣಿಯನ್ನಾಗಿ ಇಟ್ಟಿದ್ದರು. ಠೇವಣಿ ಇಟ್ಟಾಗಿನಿಂದ ಕಳೆದ ಜೂನ್ ತಿಂಗಳವರೆಗೆ ಸಂಸ್ಥೆಯವರು ಸರಿಯಾಗಿ ಬಡ್ಡಿ ಪಾವತಿಸಿದ್ದಾರೆ. ಜೂನ್ ನಂತರ ಬಡ್ಡಿಯನ್ನು ಪಾವತಿಸಿಲ್ಲ ಎನ್ನುವುದು ಬಯಲಾಗಿದೆ. ಠೇವಣಿಯನ್ನು ಮರಳಿ ಕೊಡದೆ ಸತಾಯಿಸಿದ್ದಾರೆ ಎಂದು ಗ್ರಾಹಕರು ಬ್ಯಾಂಕ್ ವಿರುದ್ಧ ಕೆಂಡಕಾರುತ್ತಿದ್ದಾರೆ.

ಬ್ಯಾಂಕ್‌ನಿಂದಲೇ ಗ್ರಾಹಕರ ಠೇವಣಿಗೆ ಖನ್ನ
ಅಕ್ರೋಶಗೊಂಡ ಗ್ರಾಹಕರು ಬ್ಯಾಂಕ್ ಕಚೇರಿ ಮುಂದೆ ಜಮಾಯಿಸಿದ್ದರು. ಗ್ರಾಹಕರು ಬಂದರೂ ಸಹ ನಿಗದಿತ ಸಮಯಕ್ಕೆ ಕಚೇರಿಯನ್ನು ತೆರೆಯದೇ, ತಡವಾಗಿ ತೆರೆದಿದ್ದಾರೆ. ಈ ವೇಳೆ ಗ್ರಾಹಕರು ಕಚೇರಿ ಒಳಗೆ ನುಗ್ಗಿ ನ್ಯಾಯಕ್ಕಾಗಿ ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕಚೇರಿಯ ಮಹಿಳಾ ಸಿಬ್ಬಂದಿಯೋರ್ವರು ಗ್ರಾಹಕರ ಎದುರೇ 4-5 ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ.

ಭರವಸೆ ನೀಡಿದ್ದ ಸಂಘದ ಅಧ್ಯಕ್ಷ
ಸಂಘದ ಅಧ್ಯಕ್ಷ ಬಿ.ವಿ. ಲಕ್ಷ್ಮೀನಾರಾಯಣ ಭಟ್ ರವರು ಕಳೆದ ನವೆಂಬರ್ 10 ರಂದು ಬೋರ್ಡ್ ಮೀಟಿಂಗ್ ಕರೆದು ಎಲ್ಲಾ ಗ್ರಾಹಕರ ಹಣ ವಾಪಾಸ್ ಕೊಡುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಅಂದು ಮೀಟಿಂಗ್ ಮಾಡಲು ಡಿ.ಆರ್. ಆಪೀಸ್‌ನಿಂದ ಬರಬೇಕಾದ ಅಧಿಕಾರಿ ಬಾರದೇ ಇದ್ದುದರಿಂದ ಮೀಟಿಂಗ್ ರದ್ದಾಗಿತ್ತು ಎಂಬುದಾಗಿ ಸುಳ್ಳು ಹೇಳಿ ಗ್ರಾಹಕರನ್ನು ನಂಬಿಸಿದ್ದರು. ಡಿಆರ್ ಕಚೇರಿಯಲ್ಲಿ ವಿಚಾರಿಸಿದಾಗ ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂಬುದಾಗಿ ತಿಳಿಸಿದ್ದಾರೆ. ಬಳಿಕ ಪ್ರತಿದಿನ ಕಚೇರಿಗೆ ಹೋದಾಗಲೂ ಸುಮ್ಮನೆ ದಿನಾಂಕ ಹೇಳಿ ಸತಾಯಿಸುತ್ತಿದ್ದಾರೆ.

ಕಚೇರಿಯ ಬಳಿ ನೆರೆಯುವ ಗ್ರಾಹಕರ ದಂಡು
ಅಲ್ಲದೆ ನೂರಾರು ಗ್ರಾಹಕರು ಪ್ರತಿನಿತ್ಯ ಕಚೇರಿಗೆ ಬರುತ್ತಿದ್ದಾರೆ. ಆದರೆ ಇದುವರೆಗೂ ಯಾರಿಗೂ ಹಣ ವಾಪಾಸ್ ಕೊಟ್ಟಿಲ್ಲ. ಕುಟುಂಬದ ಸದಸ್ಯರನ್ನೇ ಒಳಗೊಂಡ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಊರಿನ ಹಾಗೂ ಬೇರೆ ಊರಿನ ನೂರಾರು ಜನರ ಠೇವಣಿಯ ಕೋಟಿಗಟ್ಟಲೇ ಹಣ ಹೂಡಿಕೆ ಮಾಡಿದ್ದಾರೆ. ಸದ್ಯ ಗ್ರಾಹಕರು ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಹಾಗೂ ನಿರ್ದೇಶಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಂಚನೆಗೆ ಒಳಗಾದ ಗ್ರಾಹಕರು ಕೊನೆಗೆ ನಗರ ಠಾಣೆಗೆ ದೂರು ನೀಡಿದ್ದಾರೆ.

ಬ್ಯಾಂಕ್ ಅಧಿಕಾರಿಗಳ ವಿರುದ್ಧ ಗ್ರಾಹಕರ ಆಕ್ರೋಶ
ಒಟ್ಟಾರೆಯಾಗಿ, ಠೇವಣಿಯ ಮೊತ್ತವನ್ನು ಹಿಂತಿರುಗಿಸದೆ ಗ್ರಾಹಕರಿಗೆ ವಂಚನೆ ಮಾಡಿರುವ ಬ್ಯಾಂಕ್ ವಿರುದ್ದ ಗ್ರಾಹಕರು ರೊಚ್ಚಿಗೆದ್ದಿದ್ದಾರೆ. ಅಲ್ಲದೆ ಮೋಸ ಮಾಡುತ್ತಿರುವ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರ ಬಳಿ ಗ್ರಾಹಕರು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಈ ಪ್ರಕರಣ ಉಡುಪಿಯ ದೊಡ್ಡ ಬ್ಯಾಂಕ್ ಹಗರಣವಾಗಿರುವಂತೆ ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ತನಿಖೆ ಬಳಿಕವಷ್ಟೆ ಇನ್ನಷ್ಟು ಸತ್ಯ ಹೊರಬರುವ ನಿರೀಕ್ಷೆ ಇದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications