ಕೃಷ್ಣಮಠದಲ್ಲಿ ಈ ಬಾರಿ ಮಡೆಸ್ನಾನ, ಎಡೆಸ್ನಾನ ಇಲ್ಲ
ಉಡುಪಿ, ಡಿಸೆಂಬರ್ 2: ಸುಬ್ರಹ್ಮಣ್ಯ ಷಷ್ಠಿ ಹಿನ್ನೆಲೆಯಲ್ಲಿ ಕೃಷ್ಣಮಠದಲ್ಲಿ ಈ ಬಾರಿ ಬಹುಚರ್ಚಿತ ಮಡೆಸ್ನಾನ ಅಥವಾ ಎಡೆಸ್ನಾನಕ್ಕೆ ತಿಲಾಂಜಲಿ ಇಡಲಾಗಿದೆ.
ಇವತ್ತು ಷಷ್ಠಿ ಪ್ರಯುಕ್ತ ಮಠಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಆದರೆ ಪ್ರತಿ ವರ್ಷದಂತೆ ಕೃಷ್ಣ ಮಠದಲ್ಲಿ ಮಡೆಸ್ನಾನವೂ ಇರಲಿಲ್ಲ, ಎಡೆ ಸ್ನಾನವೂ ಇರಲಿಲ್ಲ.
ಪರ್ಯಾಯ ಪಲಿಮಾರು ಸ್ವಾಮೀಜಿ ಗಳು ಇಂತಹದ್ದೊಂದು ಕ್ರಾಂತಿಕಾರಿ ನಿರ್ಧಾರಕ್ಕೆ ಬಂದಿದ್ದಾರೆ. ಕೆಲವರಿಗೆ ಇದು ನಂಬಿಕೆಯಂತೆಯೂ ಇನ್ನೂ ಕೆಲವರಿಗೆ ಇದು ಮೂಢನಂಬಿಕೆಯಂತೆಯೂ ಭಾಸವಾಗುತ್ತಿತ್ತು. ಈ ಸಂಬಂಧ ಮಡೆಸ್ನಾನ ನಿಷೇಧ ಆಗಬೇಕು ಎಂದು ಹಿಂದೆ ನ್ಯಾಯಾಲಯಕ್ಕೂ ದೂರು ಹೋಗಿತ್ತು. ಬಳಿಕ ನ್ಯಾಯಾಲಯ ಎಡೆಸ್ನಾನಕ್ಕೆ ಅವಕಾಶ ಕಲ್ಪಿಸಿತ್ತು. ಮುಂದಿನ ದಿನಗಳಲ್ಲಿ ಕೃಷ್ಣಮಠದಲ್ಲಿ ಎಡೆ ಸ್ನಾನ ಪದ್ಧತಿ ಜಾರಿಯಲ್ಲಿತ್ತು. ಆದರೆ ಈ ವರ್ಷ ಯಾವುದೇ ಗೊಂದಲಕ್ಕೆ ಅವಕಾಶಗದಿರಲು ಪರ್ಯಾಯ ಶ್ರೀಗಳು ಇಂತಹದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ.

ಪೇಜಾವರ ಶ್ರೀಗಳ ಸಲಹೆಯಂತೆ ಅವರ ಹಿಂದಿನ ಪರ್ಯಾಯದಲ್ಲಿ ಎಡೆಸ್ನಾನ ಆರಂಭಿಸಲಾಗಿತ್ತು. ಆದರೆ ಎಡೆಸ್ನಾನವನ್ನೂ ಮಾಡಿಸದಿರಲು ಪಲಿಮಾರುಶ್ರೀ ನಿರ್ಧಾರ ಕೈಗೊಂಡಿದ್ದಾರೆ. ಈ ಸಲ ಕೇವಲ ವಿಶೇಷ ಪೂಜೆ ಸಲ್ಲಿಸಿ, ಅನ್ನಪ್ರಸಾದ ಸ್ವೀಕರಿಸಿ ಭಕ್ತರು ತೆರಳಿದ್ದಾರೆ. ಎಡೆ ಮತ್ತು ಮಡೆ ಸ್ನಾನ ಎರಡರಲ್ಲೂ ವಿವಾದಗಳಿವೆ. ಹೀಗಾಗಿ ವಿವಾದ ಬೇಡ ಅನ್ನೋ ಉದ್ದೇಶಕ್ಕೆ ಈ ನಿರ್ಧಾರ ಕೈಗೊಂಡಿದ್ದೇವೆ. ದೇವರ ಸೇವೆ ಪೂಜೆಯಷ್ಟೇ ಮುಖ್ಯ ಎಂದು ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ಹೇಳಿಕೆ ನೀಡಿದ್ದಾರೆ.
ಆದರೆ ಉಡುಪಿಯ ಮುಚ್ಲಗೋಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎಡೆ ಸ್ನಾನ ಎಂದಿನಂತೆ ಸರಾಗವಾಗಿ ನಡೆದಿದೆ. ಈ ದೇವಸ್ಥಾನದ ಆಡಳಿತ ಪೇಜಾವರ ಮಠದ ಅಧೀನದಲ್ಲಿದೆ ಎಂಬುದು ಗಮನಾರ್ಹ ವಿಷಯ.












Click it and Unblock the Notifications