ಕುತೂಹಲ ಮೂಡಿಸಿದ ಸಿಎಂ ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನ ಭೇಟಿ
ಉಡುಪಿ, ಏಪ್ರಿಲ್ 05:ಚುನಾವಣಾ ಪ್ರಚಾರದ ನಡುವೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸೌಕೂರು ದೇವಸ್ಥಾನಕ್ಕೆ ಏಕಾಏಕಿ ಭೇಟಿ ನೀಡಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಖಾಸಗಿ ಭೇಟಿ ನಿಮಿತ್ತ ಸೌಕೂರಿನಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ ಕುಮಾರಸ್ವಾಮಿ, ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕೆಲವೇ ಹೊತ್ತು ದೇವಸ್ಥಾನದಲ್ಲಿದ್ದು, ಮತ್ತೆ ಚುನಾವಣಾ ಪ್ರಚಾರ ನಿಮಿತ್ತ ಕೊಪ್ಪಕ್ಕೆ ತೆರಳಿದರು. ಸಿಎಂ ಜೊತೆ ವಿಧಾನಪರಿಷತ್ ಸದಸ್ಯ ಬೋಜೇಗೌಡ ಮತ್ತು ಸ್ಥಳೀಯ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.
ಗುರುವಾರ (ಏ.4) ಸಂಜೆ ಕುಂದಾಪುರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಲಾಗಿದ್ದ ಮೀನುಗಾರ ಮಹಿಳೆಯರ ಸಮಾವೇಶದಲ್ಲಿ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರ ಪರ ಮತ ಯಾಚಿಸಿದರು. ಆದರೆ ಕುಂದಾಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸೌಕೂರಿನ ದುರ್ಗಾಪರಮೇಶ್ವರಿ ದೇವಾಲಯಕ್ಕೆ ತೆರಳದೇ ಉತ್ತರ ಕನ್ನಡ ಜಿಲ್ಲೆಗೆ ಪ್ರಯಾಣ ಬೆಳೆಸಿದರು.
ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿ ಜೆಡಿಎಸ್ ಅಭ್ಯರ್ಥಿ ಅಸ್ನೋಟಿಕರ್ ಪರ ಕುಮಾರಸ್ವಾಮಿ ಚುನಾವಣಾ ಪ್ರಚಾರ ನಡೆಸಿದರು. ಈ ನಡುವೆ ಕೊಪ್ಪಕ್ಕೆ ತೆರಳಬೇಕಿದ್ದ ಮುಖ್ಯಮಂತ್ರಿ ಕುಮಾರ ಸ್ವಾಮಿ ಏಕಾಏಕಿ ಸೌಕೂರಿನಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿರುವುದು ಎಲ್ಲರಿಗೂ ಕುತೂಹಲ ಮೂಡಿಸಿದೆ.












Click it and Unblock the Notifications