ಸತೀಶ್ ಜಾರಕಿಹೊಳಿಯಿಂದ ಸಮಾಜದಲ್ಲಿ ಹುಳಿ ಹಿಂಡುವ ಕೆಲಸ: ಸಿಎಂ ಬಸವರಾಜ ಬೊಮ್ಮಾಯಿ
ಉಡುಪಿ, ನವೆಂಬರ್ 08: ಹಿಂದೂ ಪದದ ಬಗ್ಗೆ ಹೇಳಿಕೆ ನೀಡಿರುವ ಶಾಸಕ ಸತೀಶ್ ಜಾರಕಿಹೊಳಿ ಅವರು ಸಮಾಜದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿ ಕಾರಿದರು.
ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇಶದ ಜನರ ಭಾವನೆಗಳಿಗೆ ಧಕ್ಕೆ ಆಗುವ ರೀತಿಯಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿದ್ದು ಸರಿಯಲ್ಲ. ಅರೆಬರೆಯ ಮತ್ತು ಆಳವಾದ ಅಧ್ಯಯನ ಇಲ್ಲದೆ ಕೇವಲ ಓಟಿಗಾಗಿ ತುಷ್ಟೀಯ ರಾಜಕಾರಣ ಮಾಡುತ್ತಿದ್ದಾರೆ. ಈ ರೀತಿ ಮಾತನಾಡಿದರೆ ಅಲ್ಪಸಂಖ್ಯಾತರ ಮತಗಳನ್ನು ಪಡೆಯಬಹುದೆಂಬ ಭ್ರಮೆಯಲ್ಲಿ ಇದ್ದಾರೆ ಎಂದು ಅವರ ಹೇಳಿಕೆಯನ್ನು ಬೊಮ್ಮಾಯಿ ಖಂಡಿಸಿದರು.
ಶಾಸಕರು ಭಾರತದ ನಂಬಿಕೆಗಳ ಬುನಾದಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಯಾವುದಾದರೂ ದೇಶದಲ್ಲಿ ಆಂತರಿಕ ಕ್ಷೋಭೆಯನ್ನುನುಂಟು ಮಾಡುವುದು ದೇಶದ್ರೋಹದ ಕೆಲಸ. ಇದನ್ನು ಪ್ರತಿಯೊಬ್ಬರೂ ಖಂಡಿಸಬೇಕು. ಕಾಂಗ್ರೆಸ್ ಪಕ್ಷ ಇದಕ್ಕೆ ಸಹಮತ ವ್ಯಕ್ತಪಡಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಬಹುಸಂಖ್ಯಾತರಿಗೆ ಧಕ್ಕೆಯಾದರೂ ಮಾತನಾಡಿಲ್ಲ
ಸಣ್ಣ ಸಣ್ಣ ವಿಚಾರಗಳಿಗೆ ರಾಹುಲ್ ಗಾಂಧಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೂಗಾಡುತ್ತಾರೆ. ಈಗ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರದಲ್ಲಿ ಯಾಕೆ ಮೌನ ವಹಿಸಿದ್ದಾರೆ? ಅವರ ಮೌನ ಸತೀಶ್ ಜಾರಕಿಹೊಳಿ ಅವರ ಹೇಳಿಕೆಗೆ ಸಮ್ಮತಿ ಸೂಚಿಸುತ್ತದೆ. ಕಾಂಗ್ರೆಸ್ ಪಕ್ಷ ಬಹುಸಂಖ್ಯಾತ ಹಿಂದೂಗಳಿಗೆ ಧಕ್ಕೆಯಾದರೂ ಕೂಡ ಮಾತನಾಡುವುದಿಲ್ಲ ಎಂದರೆ ಅರ್ಥವೇನು? ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

ಯೋಜನಾ ಬದ್ಧ ಹೇಳಿಕೆಗೆ ಕಾಂಗ್ರೆಸ್ ಕ್ಷಮೇಯಾಚಿಸಬೇಕು
ಸತೀಶ್ ಜಾರಕಿಹೊಳಿ ಅವರು ಇಷ್ಟೆಲ್ಲಾ ಆದರೂ ಕೊಡ ತಮ್ಮ ವಾದ, ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದು ಅತ್ಯಂತ ಹೇಯ ಕೃತ್ಯ. ಕೂಡಲೇ ಕಾಂಗ್ರೆಸ್ ಪಕ್ಷ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ನೆಪ ಮಾತ್ರಕ್ಕಿರುವ ಅಸ್ತಿತ್ವವನ್ನು ಈ ದೇಶದಲ್ಲಿ ಕಾಂಗ್ರೆಸ್ ಕಳೆದುಕೊಳ್ಳಲಿದೆ. ಕಾಂಗ್ರೆಸ್ ಅನ್ನು ಸಮಗ್ರ ಜನತೆ ಮೂಲೆಯಲ್ಲಿ ಸ್ಥಾನ ತೋರಿಸುತ್ತಾರೆ. ಈ ಹೇಳಿಕೆ ಪೂರ್ವಾಗ್ರಹ ಪೀಡಿತ ಹೇಳಿಕೆ ಮಾತ್ರವಲ್ಲ ಯೋಜನಾಬದ್ಧ ಹೇಳಿಕೆ ಆಗಿದೆ.
ಹಲವಾರು ಪಕ್ಷದವರು ಬೇರೆ ಬೇರೆ ಸಂದರ್ಭಗಳಲ್ಲಿ ಹಿಂದೂ ಭಾವನೆಗಳನ್ನು, ವಿಚಾರ, ಪರಂಪರೆ ಗಳಿಗೆ ಧಕ್ಕೆಯಾಗುವ ರೀತಿಯಲ್ಲಿ, ಮನಸ್ಸಿಗೆ ಘಾಸಿಯಾಗುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಪ್ರತಿಭಟನೆಯ ಜೊತೆಗೆ ಇಂತಹ ಹೇಳಿಕೆ ನೀಡುವುದನ್ನು ಕೊನೆಗಾಣಿಸುವ ಕಾಲ ಬಂದಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಬೆಳಗಾವಿ ನಿಪ್ಪಾಣಿಯಲ್ಲಿ ಇತ್ತೀಚೆಗೆ ಸತೀಶ್ ಜಾರಕಿಹೊಳಿ ನೀಡಿದ್ದ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಅವರು, 'ಹಿಂದೂ ಎಂಬ ಪದವು ಎಲ್ಲಿಂದ ಹುಟ್ಟಿತು?, ಅದು ನಮ್ಮದೇ ಎಂದು ಪ್ರಶ್ನಿಸಿದ್ದ ಶಾಸಕರು ಇದು ಪರ್ಷಿಯನ್, ಇರಾನ್, ಇರಾಕ್, ಉಜ್ಬೇಕಿಸ್ತಾನ್, ಕಜಕಿಸ್ತಾನ್‌ನಿದ ಬಂದಿದೆ. ಹಿಂದೂ ಪದಕ್ಕೂ ಭಾರತಕ್ಕೂ ಏನು ಸಂಬಂಧವಿದೆ?. ಹಾಗಾದರೆ ನೀವು ಅದನ್ನು ಹೇಗೆ ಒಪ್ಪಿಕೊಳ್ಳುತ್ತೀರಿ? ಇದರ ಬಗ್ಗೆ ಚರ್ಚೆಯಾಗಬೇಕು,' ಹಿಂದೂಗಳ ಭಾವನೆಗೆ ಧಕ್ಕೆಯಾಗುವ ರೀತಿಯಲ್ಲಿ ಅವರು ಹೇಳಿಕೆ ನೀಡಿದ್ದರು. ಹೇಳಿಕೆ ನೀಡಿದ ಬಳಿಕ ಈ ವಿಚಾರವಾಗಿ ಸಾಕಷ್ಟು ವ್ಯಾಪಕ್ತ ಟೀಕೆ, ಆಕ್ರೋಶಗಳು ಕೇಳಿ ಬಂದಿದ್ದವು.

ತಪ್ಪು ಮಾಡದಿದ್ದರೆ ಭಯ ಏಕೆ?
ಸಿಬಿಐ ಕಿರುಕುಳ ಬ್ಯೂರೋ ಆಫ್ ಇಂಡಿಯಾ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ತಪ್ಪು ಮಾಡದಿದ್ದರೆ ಭಯ ಏಕೆ ಪಡಬೇಕು. ಏನೇ ತನಿಖೆ ಬಂದರೂ ಸಿದ್ಧ ಎಂದು ಒಂದೆಡೆ ಹೇಳುತ್ತಾರೆ, ಇನ್ನೊಂದೆಡೆ ಈ ರೀತಿ ಹೇಳಿಕೆ ನೀಡುತ್ತಾರೆ. ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗೆಲುವಿನ ಉಡುಗೊರೆ ನೀಡುವುದಾಗಿ ಘೋಷಣೆ ಮಾಡಿದ್ದು, ಯಾರು ಯಾರಿಗೆ ಗಿಫ್ಟ್ ಕೊಡುತ್ತಾರೆ ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.












Click it and Unblock the Notifications