ಕರಾವಳಿಯಲ್ಲಿ ಸಂಭ್ರಮದ ತೆನೆ ಹಬ್ಬ, ಕಬ್ಬು ತಿಂದು ಖುಷಿಪಟ್ಟ ಕ್ರೈಸ್ತರು
ಉಡುಪಿ, ಸೆಪ್ಟೆಂಬರ್.08: ಕರಾವಳಿಯಾದ್ಯಂತ ಇಂದು ಶನಿವಾರ ಕ್ರೈಸ್ತರು ಭಕ್ತಿ, ಶ್ರದ್ಧೆಯಿಂದ ತೆನೆ ಹಬ್ಬ ಆಚರಿಸಿದರು. ಮಾತೆ ಮೇರಿ ಹುಟ್ಟುಹಬ್ಬ ದಿನವನ್ನು ಈ ದಿನ ಕ್ರೈಸ್ತರು ತೆನೆ ಹಬ್ಬವನ್ನಾಗಿ ಆಚರಿಸುವುದು ಪದ್ಧತಿ.
ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ಗೆ ಬೆಳಗಿನಿಂದಲೇ ಆಗಮಿಸಿದ ಭಕ್ತರು ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಬಲಿ ಪೂಜೆ ನಡೆಸಿದರು. ನಂತರ ಶುಭಾಷಯಗಳನ್ನು ಹಂಚಿಕೊಂಡರು.
ಮುಖ್ಯವಾಗಿ ಭತ್ತದ ತೆನೆ, ಧವಸ ಧಾನ್ಯಗಳನ್ನು ಮೇರಿಯಮ್ಮನಿಗೆ ಸಮರ್ಪಿಸುವ ಮೂಲಕ ಹೊಸ ಫಲಗಳನ್ನು ಸ್ವಾಗತಿಸುವುದೂ ಈ ದಿನದ ಮಹತ್ವ. ತೆನೆ ಹಬ್ಬದಂದು ಹೂವಿಗೆ ವಿಶೇಷ ಮಹತ್ವ. ಈ ಹಿನ್ನೆಲೆಯಲ್ಲಿ ಕ್ರೈಸ್ತ ಬಾಂಧವರು ಇಂದು ಬೆಳಗ್ಗೆಯೇ ಹೂಗಳನ್ನು ಹಿಡಿದುಕೊಂಡು ಚರ್ಚ್ ಗಳಿಗೆ ಬಂದರು.

ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಹೂಗಳನ್ನು ತಂದು ಬಲಿಪೀಠಕ್ಕೆ ಅರ್ಪಿಸಿ ಕೃತಾರ್ಥರಾದರು. ದೂರದೂರುಗಳಲ್ಲಿರುವ ಬಂಧುಗಳು ಈ ದಿನ ಒಂದೇ ಕಡೆ ಸೇರುವುದು ವಾಡಿಕೆ. ತೆನೆ ಹಬ್ಬದಂದು ಬಂಧುಗಳು ಯಾವುದೇ ಊರಿನಲ್ಲಿರಲಿ, ಒಂದೆಡೆ ಸೇರಿ ಹೊಸ ಫಲಗಳ ಅಡುಗೆ ಸೇವಿಸಿ ಖುಷಿಪಡುತ್ತಾರೆ.

ಈ ವರ್ಷ ಹೊಸದಾಗಿ ಬೆಳೆದ ಧವಸ ಧಾನ್ಯ, ತರಕಾರಿಗಳನ್ನು ಎಲ್ಲೇ ಇದ್ದರೂ ತಂದು ಅದನ್ನು ಸೇವಿಸುವ ಮೂಲಕ ಸಸ್ಯಾಹಾರ ವ್ರತ ಕೈಗೊಳ್ಳುತ್ತಾರೆ. ಕ್ರೈಸ್ತರಿಗೆ ಕಬ್ಬು ಈ ದಿನದ ಸಿಹಿ ತಿನಿಸು. ಬಂದವರಿಗೆ ಚರ್ಚ್ ಗಳಲ್ಲಿ ಹೇರಳವಾಗಿ ಕಬ್ಬು ಹಂಚುವುದು ದಿನದ ವಿಶೇಷ.

ಕ್ರೈಸ್ತರ ಪ್ರಾಬಲ್ಯ ಹೆಚ್ಚಿರುವ ಉಡುಪಿ ನಗರ, ಕಲ್ಯಾಣಪುರ, ಹೂಡೆ, ಸಂತೆಕಟ್ಟೆ , ಶಂಕರಪುರ, ಕಟಪಾಡಿ, ಉದ್ಯಾವರ ಮುಂತಾದೆಡೆಗಳಲ್ಲಿ ಮೇರಿ ಹುಟ್ಟುಹಬ್ಬದ ಸಂಭ್ರಮ ಜೋರಾಗಿತ್ತು.












Click it and Unblock the Notifications