ಕೃಷ್ಣಮಠದ ಮಧ್ವಸರೋವರದಲ್ಲಿ ತೀರ್ಥಸ್ನಾನಕ್ಕಿಳಿದ ವೃದ್ಧ ಸಾವು
ಉಡುಪಿ, ಫೆಬ್ರವರಿ 11: ತೀರ್ಥಸ್ನಾನಕ್ಕೆ ಇಳಿದಿದ್ದ ಭಕ್ತರೊಬ್ಬರು ಮಧ್ವಸರೋವರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಉಡುಪಿ ಕೃಷ್ಣಮಠದಲ್ಲಿ ಇಂದು ಮುಂಜಾನೆ ಈ ದುರ್ಘಟನೆ ನಡೆದಿದೆ.
ಚೆನ್ನೈ ಮೂಲದ 62 ವರ್ಷದ ಕ್ಯಾಪ್ಟನ್ ಜಿ. ಶ್ರೀಧರನ್ ಮೃತ ದುರ್ದೈವಿ. ಕೃಷ್ಣನ ದರ್ಶನ ಪಡೆಯಲು ಬಂದಿದ್ದ ಇವರು ಮಧ್ವ ಸರೋವರದಲ್ಲಿ ತೀರ್ಥಸ್ನಾನಕ್ಕೆ ಇಳಿದಿದ್ದಾರೆ. ಸರೋವರ ಆಳವಿದ್ದ ಕಾರಣ ಈಜಲು ಬಾರದೆ ಮುಳುಗಿ ಸಾವನ್ನಪ್ಪಿದ್ದಾರೆ.

ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆಯೂ ಇಂತಹ ದುರ್ಘಟನೆಗಳು ಮಧ್ವ ಸರೋವರದಲ್ಲಿ ನಡೆದ ಉದಾಹರಣೆಗಳಿವೆ. ಭಕ್ತರಿಗೆ ಇಲ್ಲಿ ಸ್ನಾನಕ್ಕೆ ಅವಕಾಶ ಇಲ್ಲ. ಆದರೂ ಕೆಲವು ಭಕ್ತರು ಮಠದ ಸಿಬ್ಬಂದಿ ಕಣ್ತಪ್ಪಿಸಿ ಸ್ನಾನಕ್ಕೆ ಇಳಿಯುತ್ತಾರೆ. ಈ ಮೊದಲೂ ಇಂತಹ ದುರ್ಘಟನೆ ನಡೆದಿರುವುದರಿಂದ ಮಠದ ಆಡಳಿತ ಮಂಡಳಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವ ಮೂಲಕ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕಿದೆ.












Click it and Unblock the Notifications