BJP: ಉಡುಪಿಯಲ್ಲಿ ಬಿಜೆಪಿಯಲ್ಲಿ ಗುರು ಶಿಷ್ಯರ ಕಾಳಗ: ಗೊಂದಲದಲ್ಲಿ ಕಾರ್ಯಕರ್ತರು
ಉಡುಪಿ, ಮೇ 24: ಲೋಕಸಭಾ ಚುನಾವಣೆಯ ವೇಳೆ ರಾಜ್ಯ ಬಿಜೆಪಿ ಮುಖಂಡ ಈಶ್ವರಪ್ಪ ಅವರ ಬಂಡಾಯ ಸ್ಪರ್ಧೆ ಸಾಕಷ್ಟು ಸುದ್ದಿ ಮಾಡಿತ್ತು. ಸದ್ಯ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದ್ದಂತೆ ಬಿಜೆಪಿಯ ಮಾಜಿ ಶಾಸಕ ಕೂಡ ಪಕ್ಷದ ವಿರುದ್ಧ ಬಂಡಾಯ ಸಾರಿದ್ದಾರೆ.
ಉಡುಪಿ ಜಿಲ್ಲೆ ಈ ಬಾರಿ ಲೋಕಸಭಾ ಚುನಾವಣೆಯ ವೇಳೆಗೆ ಸಾಕಷ್ಟು ಸುದ್ದಿಯಲ್ಲಿತ್ತು ಎಂದರೆ ತಪ್ಪಾಗಲಾರದು. ಅದರಲ್ಲೂ ಎರಡನೇ ಹಂತದ ಲೋಕಸಭಾ ಚುನಾವಣೆಯ ವೇಳೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಉಡುಪಿ ಜಿಲ್ಲೆಯ ಬೈಂದೂರು ಸಾಕಷ್ಟು ಸುದ್ದಿಯ ಕೇಂದ್ರ ಬಿಂದು ಆಗಿತ್ತು.

ಇದೀಗ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದೆ. ಇದರಿಂದ ಮನನೊಂದ ರಘುಪತಿ ಭಟ್ ಕಾರ್ಯಕರ್ತರ ಬೆಂಬಲದೊಂದಿಗೆ ಪಕ್ಷೇತರರಾಗಿ ಸ್ಪರ್ಧಿಸುವ ಘೋಷಣೆ ಮಾಡಿದ್ದಾರೆ.
ಕ್ಷೇತ್ರದ ಅತ್ಯಂತ ಸಾಕಷ್ಟು ತಿರಗಾಟಗಳನ್ನು ಮಾಡಿ ಹೊಸ ಪದವೀಧರ ಮತದಾರರನ್ನು ಸೇರ್ಪಡೆಗೊಳಿಸುವ ಕೆಲಸ ಮಾಡಿದ್ದ ರಘುಪತಿ ಭಟ್ ಬದಲಿಗೆ ಧನಂಜಯ್ ಸರ್ಜಿ ಅವರಿಗೆ ಟಿಕೆಟ್ ನೀಡಿರುವುದು ರಘುಪತಿ ಭಟ್ ಅವರ ಬೇಸರಕ್ಕೆ ಕಾರಣವಾಗಿತ್ತು. ಪಕ್ಷೇತರವಾಗಿ ಅರ್ಥಾಕಾಣದಲ್ಲಿರುವ ರಘುಪತಿ ಭಟ್ ಅವರನ್ನು ಮನವೊಲಿಸುವ ಪ್ರಯತ್ನ ಈಗಾಗಲೇ ನಡೆದಿದ್ದರೂ ಕೂಡ ಯಾವುದಕ್ಕೂ ಬಗ್ಗದ ಭಟ್ ಅವರ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ಸ್ಪಷ್ಟೀಕರಣ ನೀಡುವಂತೆ ಮತ್ತು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಬಿಜೆಪಿಗೆ ಪತ್ರ ಬರೆದಿತ್ತು.
ಇಂತಹ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿರುವ ಯಶ್ ಪಾಲ್ ಸುವರ್ಣ ಅವರು ರಘುಪತಿ ಭಟ್ ಅವರ ಕುರಿತು ಹೇಳಿದ ಹೇಳಿಕೆ ಸದ್ಯ ವಿವಾದಕ್ಕೆ ಕಾರಣವಾಗಿದೆ.

ರಘುಪತಿ ಭಟ್ ಅವರ ಬದಲಿಗೆ ಈ ಬಾರಿ ಉಡುಪಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಪಡೆದಿದ್ದ ಯಶ್ ಬಾಸ್ ಸುವರ್ಣ ರಘುಪತಿ ಭಟ್ ಅವರ ಆಪ್ತ ಎಂದೇ ಗುರುತಿಸಿಕೊಂಡವರು. ಆದರೆ ಎರಡನೇ ಬಾರಿ ರಘುಪತಿ ಭಟ್ ಅವರಿಗೆ ಪಕ್ಷದಿಂದ ಅನ್ಯಾಯ ಆಗಿದೆ ಎಂದು ತಿಳಿದರು ಕೂಡ ಪರಮಾಪ್ತ ಎನಿಸಿಕೊಂಡ ಯಶ್ ಪಾಲ್ ಸುವರ್ಣ, ರಘುಪತಿ ಭಟ್ ವಿರುದ್ಧ ಮಾತನಾಡಿರುವುದು ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿದೆ. ಇನ್ನೊಂದು ಮೂಲದ ಪ್ರಕಾರ ರಘುಪತಿ ಭಟ್ ಅವರ ಟಿಕೆಟ್ ತಪ್ಪಲು ಯಶ್ ಪಾಲ್ ಸುವರ್ಣ ಕಾರಣ ಎನ್ನುವ ಆರೋಪ ರಘುಪತಿ ಭಟ್ ಅಭಿಮಾನಿ ಬಳಗದಿಂದ ಕೇಳಿ ಬರುತ್ತಿದೆ.
ರಾಜಕೀಯ ಜೀವನದ ಪ್ರಾರಂಭದಿಂದ ಹಿಡಿದು ಇಲ್ಲಿಯವರೆಗೆ ಕೈ ಹಿಡಿದು ನಡೆಸಿದ ರಘುಪತಿ ಭಟ್ ವಿರುದ್ಧ ಯಶ್ ಪಾಲ್ ಸುವರ್ಣ ಹೋಗಿದ್ದಾರೆ ಎನ್ನುವ ಆರೋಪ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಏನೇ ಆದರೂ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಿಂದಾಗಿ ಉಡುಪಿಯ ಬಿಜೆಪಿಯಲ್ಲಿರುವ ಬಿರುಕುಗಳು ದೊಡ್ಡದಾಗುತ್ತಿದೆ. ರಾಜ್ಯ ನಾಯಕರು ಈ ಬಗ್ಗೆ ಗಮನ ಹರಿಸಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಒಗ್ಗೂಡಿಸಬೇಕು ಎನ್ನುವ ಆಗ್ರಹ ಕಾರ್ಯಕರ್ತರ ವಲಯದಲ್ಲಿದೆ.












Click it and Unblock the Notifications