ನನ್ನ ಹಿಂದುತ್ವವನ್ನು ಬಡಿಯುವ ಉದ್ದೇಶವಿದೆ: ಶಿರೂರು ಶ್ರೀ
ಉಡುಪಿ, ಏಪ್ರಿಲ್ 2: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹವಾ ಹೆಚ್ಚುತ್ತಿದ್ದು, ಶಿರೂರು ಲಕ್ಷ್ಮೀವರತೀರ್ಥ ಸ್ವಾಮೀಜಿ ರಾಜಕೀಯ ಎಂಟ್ರಿ ಕೂಡ ಹೊಸ ಹುರುಪನ್ನು ನೀಡುತ್ತಿದೆ. ಇತ್ತೀಚೆಗೆ ಶಿರೂರು ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಅಷ್ಟ ಮಠದಿಂದ ನೋಟಿಸ್ ಕೂಡ ಜಾರಿಯಾಗಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿರೂರು ಲಕ್ಶ್ಮೀವರ ಸ್ವಾಮೀಜಿ, ಇತ್ತೀಚೆಗೆ ಖಾಸಗಿ ಚಾನಲ್ ನಲ್ಲಿ ನನ್ನ ವಿರುದ್ಧ ಸುದ್ದಿ ಪ್ರಸಾರವಾಗಿದೆ. ಮುಖ್ಯವಾಗಿ ಆ ವಿಚಾರ ಕೋರ್ಟ್ ನಲ್ಲಿದೆ. ಅಲ್ಲಿ ಬಂದಿರುವುದು ನನ್ನ ಭಾವಚಿತ್ರವೂ ಅಲ್ಲ. ನನ್ನ ಮಾತು ಕೂಡ ಅಲ್ಲ. ಕೋರ್ಟ್ ನಲ್ಲಿ ಇರುವ ವಿಚಾರ ಚರ್ಚೆ ಮಾಡುವುದು ನ್ಯಾಯಾಂಗ ನಿಂದನೆ ಮಾಡಿದ ಹಾಗಾಗುತ್ತದೆ ಎಂದಿದ್ದಾರೆ.
ಮಠದಿಂದ ಪತ್ರ ಬಂದಿತ್ತು. ಆದರೆ ಅದನ್ನು ನಾನು ಸ್ವೀಕಾರ ಮಾಡಿಲ್ಲ. ಪತ್ರದಲ್ಲಿ ಏನಿದೆ ಅನ್ನುವುದು ಮಾಧ್ಯಮಗಳನ್ನು ನೋಡಿದಾಗ ತಿಳಿಯಿತು. ದ್ವಂದ್ವ ಮಠದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಅವರವರ ಮಠ ಅವರವರಿಗೆ. ದ್ವಂದ್ವ ಮಠಕ್ಕೆ ಆಧಾರ ಕೂಡ ಇಲ್ಲ ಎಂದಿದ್ದಾರೆ.

ಕೃಷ್ಣ ಮಠದ ಹಾಗೂ ಅಷ್ಟ ಮಠದ ಭಕ್ತರ ಮನಸ್ಸಿಗೆ ನೋವಾಗಿದೆ. ಇದರ ಹಿಂದೆ ನನ್ನ ಹಿಂದುತ್ವವನ್ನು ಬಡಿಯುವ ಒಂದೇ ಉದ್ದೇಶವಿದೆ. ಶಿರೂರು ಮಠಕ್ಕೆ ತುಂಬಾ ಅಭಿಮಾನಿಗಳಿದ್ದಾರೆ. ಅವರಿಗೆ ಕೂಡ ನೋವಾಗಿದೆ. ವಿಡಿಯೊದಲ್ಲಿ ಇರುವುದು ನಾನಲ್ಲ ಎಂದು ಹೇಳಿಯಾಗಿದೆ. ನನ್ನ ಜೊತೆ ಶ್ರೀಕೃಷ್ಣ, ಮುಖ್ಯಪ್ರಾಣ ಇದ್ದಾರೆ. ಎಲ್ಲವನ್ನೂ ಅವನೇ ನೋಡುತ್ತಾನೆ ಎಂದು ಶಿರೂರು ಶ್ರೀ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications