ಕಾಫಿ ತೋಟದಲ್ಲಿ ಅನುಮಾನಾಸ್ಪದವಾಗಿ ದನದ ವ್ಯಾಪಾರಿ ಸಾವು
ಉಡುಪಿ, ಮೇ. 30 : ದನದ ವ್ಯಾಪಾರಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಪೆರ್ಡೂರಿನಲ್ಲಿ ಇಂದು ಬುಧವಾರ ನಡೆದಿದೆ. ದಕ್ಷಿಣ ಕನ್ನಡ ಮೂಲದ ಜೋಕಟ್ಟೆ ನಿವಾಸಿ ಹುಸೇನಬ್ಬ ಮೃತ ದುರ್ದೈವಿ.
ಹುಸೇನಬ್ಬ ಕಳೆದ 35 ವರ್ಷಗಳಿಂದ ಹಸುವಿನ ವ್ಯಾಪಾರ ಮಾಡುತ್ತಿದ್ದ. ಕಳೆದ ರಾತ್ರಿ ಉಡುಪಿಯ ಪೆರ್ಡೂರು ಸಮೀಪ ಬರುತ್ತಿರುವಾಗ ಪೊಲೀಸರು ಹುಸೇನಬ್ಬ ವಾಹನವನ್ನು ಅಡ್ಡಗಟ್ಟಿದ್ದಾರೆ. ಹುಸೇನಬ್ಬ ಸೇರಿದಂತೆ ಹಸು ಸಾಗಾಟದ ವಾಹನದಲ್ಲಿದ್ದ ನಾಲ್ಕೈದು ಮಂದಿ ದಿಕ್ಕಾಪಾಲಾಗಿ ಓಡಿದ್ದಾರೆ.
ಪೊಲೀಸರು ವಾಹನವನ್ನು ಕಳೆದ ರಾತ್ರಿಯೇ ವಶಪಡಿಸಿಕೊಂಡಿದ್ದಾರೆ. ರಾತ್ರಿ ತಪ್ಪಿಸಿಕೊಂಡು ಓಡಿದ್ದ ಹುಸೇನಬ್ಬ ಮೃತದೇಹ ಬೆಳಗ್ಗೆ ಕಾಫಿ ತೋಟದಲ್ಲಿ ಪತ್ತೆಯಾಗಿದೆ. ಹಿರಿಯಡ್ಕ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲು ಮಾಡಿದ್ದಾರೆ.

ಹುಸೇನಬ್ಬನ ಮನೆಯವರು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ದುಷ್ಕರ್ಮಿಗಳು ಕೊಲೆ ಮಾಡಿರಬಹುದು ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಳೆದ ರಾತ್ರಿ ಪೊಲೀಸರ ಜೊತೆಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರಿದ್ದರೆಂಬ ಸಂಶಯವನ್ನು ವ್ಯಕ್ತಗೊಳಿಸಿದ್ದಾರೆ.
ಹುಸೇನಬ್ಬ ಮೃತದೇಹವನ್ನು ಮಣಿಪಾಲ ಶವಾಗಾರಕ್ಕೆ ರವಾನಿಸಲಾಗಿದೆ. ಹೃದಯಾಘಾತದಿಂದ ಸತ್ತಿರಬಹುದೆಂಬ ಶಂಕೆಯೂ ಇದೆ. ಮೃತರು ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಶವಪರೀಕ್ಷಾ ವರದಿ ಬಂದ ನಂತರ ಅನುಮಾನಾಸ್ಪದ ಸಾವಿಗೆ ಸರಿಯಾದ ಕಾರಣ ತಿಳಿಯಬಹುದು.
ಈ ಬಗ್ಗೆ ಮಾತನಾಡಿದ ಎಸ್ಪಿ ಲಕ್ಷ್ಮಣ್ ನಿಂಬರ್ಗಿ, ಸಾವಿನ ಕುರಿತು ಮನೆಯವರು ಈಗಾಗಲೇ ದೂರನ್ನು ನೀಡಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ದೂರಿನಲ್ಲಿ ಸೂರ್ಯ ಎಂಬಾತನ ಮೇಲೆ ಸಂಶಯ ವ್ಯಕ್ತಪಡಿಸಲಾಗಿದೆ.












Click it and Unblock the Notifications