Karkala: ಕಾರ್ಕಳದಲ್ಲಿ ಸಿಡಿದ ಸುಡುಮದ್ದು ಘಟಕ: ಮಹಿಳೆಯರ ಸ್ಥಿತಿ ಗಂಭೀರ
ಉಡುಪಿ, ಮೇ 08: ಸುಡುಮದ್ದು ತಯಾರಿಕಾ ಘಟಕ ಏಕಾಏಕಿ ಸಿಡಿದು ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾರ್ಕಳ ಕಸಬಾ ಗ್ರಾಮದ ಹಿಮ್ಮುಂಜೆ ಬಳಿಯ ಕಾಜೆ ಎಂಬಲ್ಲಿ ನಡೆದಿದೆ.
ಕಾರ್ಕಳ ಕಸಬಾ ಗ್ರಾಮದ ಹಿಮ್ಮುಂಜೆ ಬಳಿಯ ಕಜೆ ಎಂಬಲ್ಲಿ ಹಲವಾರು ವರ್ಷಗಳಿಂದ ಸುಡುಮದ್ದು ತಯಾರಿಕಾ ಘಟಕ ಕಾರ್ಯ ನಿರ್ವಹಿಸುತ್ತಿದೆ. ಎಂದಿನಂತೆ ಇಂದು ( ಮೇ 08) ಬೆಳಗ್ಗೆ ಸುಡುಮದ್ದು ತಯಾರಿಕೆ ಆರಂಭಿಸಲಾಗಿತ್ತು ಈ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಸ್ಫೋಟಗೊಂಡಿದೆ. ಘಟನೆಯಲ್ಲಿ ಅಲ್ಲೇ ಕೆಲಸ ಮಾಡುತ್ತಿದ್ದ ಮಹಿಳೆಯರಿಬ್ಬರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಸುಡುಮದ್ದು ತಯಾರಿಕಾ ಘಟಕದಲ್ಲಿ 3 ಬೇರೆ ಬೇರೆ ಕಟ್ಟಡಗಳಿದ್ದು ಒಂದು ಕಟ್ಟಡದಲ್ಲಿ ಸ್ಫೋಟ ಸಂಭವಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸ್ಫೋಟದ ತೀವ್ರತೆಗೆ ಕಟ್ಟಡದ ಮೇಲ್ಛಾವಣಿ ಹೊತ್ತಿ ಉರಿದಿದ್ದು, ಕಟ್ಟಡಕ್ಕೆ ಸಂಪೂರ್ಣ ಹಾನಿಯಾಗಿದೆ. ಇನ್ನು ಅನಿರೀಕ್ಷಿತವಾಗಿ ಸ್ಫೋಟ ಸಂಭವಿಸಲು ಕಾರಣ ಏನು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.
ಬೆಳ್ಳಂಬೆಳಿಗ್ಗೆ ಸಮುದ್ರ ಪಾಲಾಗುತ್ತಿದ್ದ ಯುವಕರ ರಕ್ಷಣೆ
ಉಡುಪಿ: ಮೇ 08 ಬುಧವಾರ ಬೆಳ್ಳಂಬೆಳಗ್ಗೆ ಸಮುದ್ರ ಪಾಲಾಗುತ್ತಿದ್ದ ಇಬ್ಬರು ಯುವಕರನ್ನು ರಕ್ಷಣೆ ಮಾಡಿರುವ ಘಟನೆ ಉಡುಪಿ ತಾಲೂಕಿನ ಮಲ್ಪೆ ಸಮೀಪದ ತೊಟ್ಟಂ ಬೀಚ್‌ನಲ್ಲಿ ನಡೆದಿದೆ. ಬಳ್ಳಾರಿಯ ಕೊಟ್ಟೂರು ತಾಲೂಕಿನಿಂದ ಬಂದಿದ್ದ ಯುವಕರ ತಂಡ, ಇಂದು ಬೆಳ್ಳಂಬೆಳಗ್ಗೆ ನೀರಿನಲ್ಲಿ ಆಟವಾಡಲು ಸಮುದ್ರಕ್ಕಿಳಿದಿದ್ದಾರೆ.
ಈ ವೇಳೆ ಬೃಹತ್ ದೊಡ್ಡ ಗಾತ್ರದ ಅಲೆಗಳು ಅಪ್ಪಳಿಸಿದ್ದು, ಇಬ್ಬರು ಯುವಕರು ಅಲೆಗೆ ಸಿಲುಕಿ ಒದ್ದಾಡುತ್ತಿದ್ದರು. ಈ ಬಗ್ಗೆ ಕೂಡಲೇ ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿ ಸಮುದ್ರಕ್ಕಿಳಿದು ಯುವರನ್ನು ರಕ್ಷಿಸಿದ್ದಾರೆ. ಸದ್ಯ ಗೋಪಿನಾಥ್ (25) ಹಾಗೂ ರಂಗನಾಥ್ (26) ಇಬ್ಬರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications