ಉಡುಪಿ; ಪಟಾಕಿ ಅಂಗಡಿ ತೆರೆಯಲು ಡಿಸಿ ಒಪ್ಪಿಗೆ, ಷರತ್ತುಗಳು
ಉಡುಪಿ, ಅಕ್ಟೋಬರ್ 12; ಬೆಂಗಳೂರಿನ ಅತ್ತಿಬೆಲೆಯ ಪಟಾಕಿ ಗೋಡಾನ್‌ನಲ್ಲಿ ನಡೆದ ದುರಂತದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿ ಹಲವು ಸೂಚನೆಗಳನ್ನು ನೀಡಿದ್ದಾರೆ. ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಇರುವುದರಿಂದ ಪಟಾಕಿ ಅಂಗಡಿ ತೆರೆಯುವಾಗ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ನಗರದ ಮಣಿಪಾಲ ರಜತಾದ್ರಿಯ ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಾತ್ಕಾಲಿಕ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲು ಅನುಮತಿ ನೀಡುವ ಕುರಿತು ಸಭೆಯನ್ನು ನಡೆಸಿದರು.

ಸಭೆಯ ಬಳಿಕ ಮಾತನಾಡಿದ ಅವರು, "ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಸಂಚಾರ ವ್ಯವಸ್ಥೆಗೆ ಧಕ್ಕೆಯುಂಟಾಗದಂತೆ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಸೂಕ್ತ ಸ್ಥಳವನ್ನು ಗುರುತಿಸಿ, ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗುವುದು" ಎಂದು ಹೇಳಿದರು.
ಷರತ್ತುಗಳು; "ಮಾರಾಟ ಮಳಿಗೆಗಳನ್ನು ತೆರೆಯಲು ಅನುಮತಿ ನೀಡುವ ಮೊದಲು ನಿಯೋಜಿಸಲಾದ ಅಧಿಕಾರಿಗಳು ಮಳಿಗೆ ತೆರೆಯುವ ಪ್ರದೇಶಗಳನ್ನು ಖುದ್ದು ಪರಿಶೀಲನೆ ನಡೆಸಬೇಕು. ಅಂಗಡಿ ಮುಂಗಟ್ಟುಗಳ ಸಮೀಪದಲ್ಲಿ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆಗೆ ಸಮಸ್ಯೆಯಾಗುವುದು ಕಂಡು ಬಂದಲ್ಲಿ ಪಟಾಕಿ ಮಳಿಗೆ ತೆರೆಯಲು ಅನುಮತಿ ನೀಡಬಾರದು" ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
"ಕಾರ್ಕಳ ಹಾಗೂ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಈ ಹಿಂದಿನಂತೆ ಸಮಿತಿಯನ್ನು ರಚಿಸಿ, ಚೀಟಿ ಎತ್ತುವ ಮೂಲಕ ಸ್ಥಳ ಹಂಚಿಕೆ ಮಾಡಬೇಕು. ಉಡುಪಿ ನಗರಸಭಾ ವ್ಯಾಪ್ತಿಯ ಮಲ್ಪೆ, ಸಂತೆಕಟ್ಟೆ, ಬೀಡಿನಗುಡ್ಡೆ, ಎಂ.ಜಿ.ಎಂ, ಮಣಿಪಾಲ ಹಾಗೂ ಅಂಬಲಪಾಡಿ ಪ್ರದೇಶಗಳಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯುವಲ್ಲಿ, ಸಂಚಾರ ವ್ಯವಸ್ಥೆಗೆ ತೊಂದರೆಯಾಗದಂತೆ ವಾಹನ ನಿಲುಗಡೆಗೆ ಅವಕಾಶವಿರುವ, ಜನವಸತಿ ಕಡಿಮೆ ಇರುವ ಪ್ರದೇಶದಲ್ಲಿ ನಿಯೋಜಿಸಲಾದ ಅಧಿಕಾರಿಗಳು ಸ್ಥಳ ಗುರುತಿಸಿ, ವ್ಯಾಪಾರ ನಡೆಸುವ ವ್ಯಕ್ತಿಗಳಿಗೆ ಹಂಚಿಕೆ ಮಾಡುವಂತೆ" ತಿಳಿಸಿದರು.
ಪಟಾಕಿ ಅಂಗಡಿ ತೆರೆಯಲು ಪರವಾನಿಗೆ ಕೋರಿ ಅಕ್ಟೋಬರ್ 16ರ ಒಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಸಂಬಂಧಪಟ್ಟ ಇಲಾಖೆಗಳು ವರದಿಗಳನ್ನು ಶೀಘ್ರ ಪಡೆದು ಅರ್ಜಿಗಳನ್ನು ವಿಲೇವಾರಿ ಮಾಡುವಂತೆಯೂ ಸಭೆಯಲ್ಲಿ ಸೂಚನೆ ನೀಡಲಾಗಿದೆ.
ಖಡಕ್ ಸೂಚನೆ ನೀಡಿದ್ದ ಸಿದ್ದರಾಮಯ್ಯ; ಅತ್ತಿಬೆಲೆಯ ಪಟಾಕಿ ಗೋಡಾನ್‌ನಲ್ಲಿ ನಡೆದ ದುರಂತದಲ್ಲಿ 16 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಾದ್ಯಂತ ಪ್ರತಿಯೊಂದು ಲೈಸೆನ್ಸ್‌ದಾರರ ಸ್ಥಳ ಪರಿಶೀಲನೆ ನಡೆಸಿ, ಲೋಪಗಳಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳು ಎಲ್ಲ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಬೇಕು ಎಂದು ಖಡಕ್ ಸೂಚನೆ ನೀಡಿದ್ದರು.
ಎಕ್ಸ್‌ಪ್ಲೋಸಿವ್ ಆಕ್ಟ್‌ನಲ್ಲಿ ಲೈಸೆನ್ಸ್ ಕೊಡುವಾಗ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಜನರು ಜೀವ ಕಳೆದುಕೊಂಡಿದ್ದಕ್ಕೆ ಯಾರು ಹೊಣೆಗಾರರು?. ಎಲ್ಲ ಮಾನದಂಡಗಳನ್ನು ಪೂರೈಸಿದ್ದಾರೆಯೇ? ಎಂದು ನೋಡಬೇಕು ಬಳಿಕ ಲೈಸೆನ್ಸ್ ನೀಡಬೇಕು. ತಳಹಂತದ ಅಧಿಕಾರಿಗಳು ಸಲ್ಲಿಸಿದ ವರದಿ ಸರಿಯಿದೆಯೇ ಎಂದು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದರು.
ಎಲ್ಲ ಪಟಾಕಿ ಮಳಿಗೆಗಳ ಸುರಕ್ಷತೆಯನ್ನೂ ತಪಾಸಣೆ ಮಾಡಬೇಕು. ಇನ್ನು ಮುಂದೆ ಲೈಸನ್ಸ್ ನೀಡುವಾಗ ಜಿಲ್ಲಾಧಿಕಾರಿಗಳು, ಪೊಲೀಸ್ ಅಧೀಕ್ಷಕರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ತಪಾಸಣಾ ವರದಿ ಸರಿಯಾಗಿದೆಯೇ? ಎಂದು ಪರಿಶೀಲಿಸಿಯೇ ಲೈಸನ್ಸ್ ನೀಡುವ ಬಗ್ಗೆ ತೀರ್ಮಾನಿಸಬೇಕು. ರಾಜ್ಯದೆಲ್ಲೆಡೆ ತಪಾಸಣೆ ನಡೆಸಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಎಲ್ಲ ಗೋಡಾನ್‌ಗಳು ಹಾಗೂ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವುಗಳ ಪರವಾನಗಿ ರದ್ದುಪಡಿಸಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದರು.












Click it and Unblock the Notifications