Vitla Pindi 2022 : ಉಡುಪಿಯಲ್ಲಿ ವಿಟ್ಲ ಪಿಂಡಿ ಉತ್ಸವಕ್ಕೆ ಕ್ಷಣಗಣನೆ, ಹುಲಿಕುಣಿತಕ್ಕೆ ಎದುರು ನೋಡುತ್ತಿರುವ ಜನತೆ
ಉಡುಪಿ, ಆಗಸ್ಟ್ 20: ಕೃಷ್ಣನೂರು ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮುಗಿಲು ಮುಟ್ಟಿದೆ. ಶುಕ್ರವಾರ ತಡರಾತ್ರಿ ಶ್ರೀಕೃಷ್ಣನಿಗೆ ಉಡುಪಿ ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಅರ್ಘ್ಯ ಪ್ರಧಾನ ಮಾಡಿದ್ದಾರೆ. ಹಾಲು ಹಾಗೂ ನೀರಿನ ಮೂಲಕ ಚಂದ್ರನಿಗೆ ಹಾಗೂ ಕೃಷ್ಣ ದೇವರಿಗೆ ಅರ್ಘ್ಯ ಸಮರ್ಪಣೆ ಮಾಡಿದ ಬಳಿಕ ಉಂಡೆ ಮತ್ತು ಚಕ್ಕುಲಿಗಳನ್ನು ಶ್ರೀಕೃಷ್ಣನಿಗೆ ಅರ್ಪಿಸಿದ್ದಾರೆ. ಮಹಾ ಮಂಗಳಾರತಿ ಬಳಿಕ ಶ್ರೀ ಕೃಷ್ಣ ನಿಗೆ ಅರ್ಘ್ಯ ಸಮರ್ಪಿಸಿದ ಮಠದ ಅರ್ಚಕರು ಹಾಗೂ ಭಕ್ತರು ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ..ಈ ವೇಳೆ ನಟ ರವಿಶಂಕರ್ ಕೂಡಾ ಶ್ರೀ ಕೃಷ್ಣನ ದರ್ಶನ ಪಡೆದಿದ್ದಾರೆ..
ಅರ್ಘ್ಯ ಪ್ರಧಾನದ ಬಳಿಕ ಕೃಷ್ಣಜನ್ಮಾಷ್ಟಮಿಯ ವಿಶೇಷ ಆಕರ್ಷಣೆ ವಿಟ್ಲಪಿಂಡಿ ಇಂದು (ಶನಿವಾರ) ನಡೆಯಲಿದೆ. ಶ್ರೀ ಕೃಷ್ಣ ಲೀಲೋತ್ಸವದಲ್ಲಿ ದೇಶದ ನಾನಾ ಭಾಗಗಳ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆ ವೇಳೆಗೆ ವಿಟ್ಲಪಿಂಡಿ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಗೊಲ್ಲರು ಹುಲಿ ವೇಷದಾರಿಗಳೊಂದಿಗೆ ಆಗಮಿಸಿ ಮೊಸರು ಕುಡಿಕೆ ಒಡೆಯುವ ಮೂಲಕ ಚಾಲನೆ ನೀಡಲಿದ್ದಾರೆ.
ಗುರ್ಜಿ ಕೆಳಗೆ ಆಡುತ್ತಾ ಮೊಸರು ಕುಡಿಕೆ ಒಡೆಯುವ ಮೂಲಕ ಲೀಲೋತ್ಸವಕ್ಕೆ ಚಾಲನೆ ಸಿಗಲಿದೆ. ರಥಬೀದಿ ಸುತ್ತ ಹಾಕಿರುವ ಗುರ್ಜಿ ಕೆಳಗೆ ಗೊಲ್ಲರಿಂದ ಮೊಸರು ಕುಡಿಕೆ ಒಡೆಯವ ಆಟ ನಡೆಯಲಿದೆ. ಗೊಲ್ಲರು ಮೊಸರು ಕುಡಿಕೆ ಒಡೆಯುತ್ತಿದ್ದಂತೆ ಕೃಷ್ಣನ ರಥೋತ್ಸವ ನಡೆಯಲಿದೆ. ಮೂರು ರಥಗಳನ್ನ ಭಕ್ತರು ಎಳೆಯಲಿದ್ದು, ಈ ಸಂಭ್ರಮದ ಕ್ಷಣಕ್ಕೆ ಲಕ್ಷಾಂತರ ಮಂದಿ ಭಕ್ತರು ಸಾಕ್ಷಿಯಾಗಲಿದ್ದಾರೆ. ಸಂಜೆ 5:10ಕ್ಕೆ ಮಧ್ವ ಸರೋವರದಲ್ಲಿ ಕೃಷ್ಣನ ಮೃಣ್ಮಯ(ಮಣ್ಣಿನ) ಮೂರ್ತಿ ಜಲಸ್ಥಂಭನವಾದ ಬಳಿಕ ವಿಟ್ಲಪಿಂಡಿ ಉತ್ಸವ ಸಂಪನ್ನ ವಾಗಲಿದೆ.

ಈ ವಿಟ್ಲ ಪಿಂಡಿ ಸಂಭ್ರಮದಲ್ಲಿ ವಿವಿಧ ವೇಷಧಾರಿಗಳು, ಹುಲಿವೇಷ ತಂಡಗಳು ಗಮನಸೆಳೆಯಲಿದೆ. ವಿಟ್ಲಪಿಂಡಿ ಸಂಭ್ರಮದಲ್ಲಿ ಹುಲಿವೇಷ ತಂಡಗಳದ್ದೇ ಅಬ್ಬರವಿರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹುಲಿವೇಷ ತಂಡಗಳು ಬರುವ ನೀರಿಕ್ಷೆಗಳಿವೆ. ವಿಟ್ಲ ಪಿಂಡಿ ವೈಭದಲ್ಲಿ ಪಾಲ್ಗೊಳ್ಳಲು ಹುಲಿವೇಷ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿವೆ. ಅಕ್ಕಿಮೂಟೆಯನ್ನೇ ಬಾಯಲ್ಲಿ ಎತ್ತಿ ಬಿಸಾಕುವ ಕಸರತ್ತಿನಲ್ಲಿ ಹುಲಿವೇಷ ತಂಡಗಳು ನಿರತವಾಗಿದ್ದು, ನಟ ರಿಷಬ್ ಶೆಟ್ಟಿ ಕೂಡಾ ಹುಲಿವೇಷ ತಂಡದ ಜೊತೆಗೆ ಹುಲಿಹೆಜ್ಜೆ ಹಾಕಿದ್ದಾರೆ.

ಈ ಬಾರಿ ಅಷ್ಟಮಿಗೆ ದೇಶದ ಮೂಲೆ ಮೂಲೆಗಳಿಂದ ಶ್ರೀಕೃಷ್ಣ ಮಠಕ್ಕೆ ಸಹಸ್ರ ಸಂಖ್ಯೆಯ ಭಕ್ತರು ಹರಿದುಬಂದಿದ್ದಾರೆ. ರಥ ಬೀದಿಯ ತುಂಬೆಲ್ಲ ಮುದ್ದು ಕೃಷ್ಣರ ಕಲರವ ಕಂಡುಬಂದಿದ್ದು, ಮಕ್ಕಳ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ನೂರಾರು ಸಂಖ್ಯೆಯ ಮಕ್ಕಳು ಪಾಲ್ಗೊಂಡಿದ್ದಾರೆ. ಎರಡು ವರ್ಷ ಕೊರೊನಾ ಸಂಕಷ್ಟದ ಬಳಿಕ ಅಷ್ಟಮಿಯ ಸಂಭ್ರಮದಲ್ಲಿ ಭಕ್ತರು ಮಿಂದೆದಿದ್ದು, ಕೃಷ್ಣ ರಾಧೆಯರ ವೇಷ ಭೂಷಣದಲ್ಲಿ ವಿದ್ಯಾರ್ಥಿಗಳು ಕುಣಿದು ನಲಿದಾಡಿದ್ದಾರೆ. ಶ್ರೀಕೃಷ್ಣ ಮಠದ ರಥಬೀದಿಯೆಲ್ಲ ಕೃಷ್ಣರಾಧೆಯರದ್ದೇ ಕಲರವ ಕಂಡುಬಂದಿದ್ದು, ಕಡೆಗೋಲು ಕೃಷ್ಣನ ಊರಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.












Click it and Unblock the Notifications