Karnataka Bandh: ಕರ್ನಾಟಕ ಬಂದ್‌ಗೆ ನಮ್ಮ ಬೆಂಬಲ ಇಲ್ಲ ಎಂದ ಕರವೇ ನಾರಾಯಣ ಗೌಡ
ಮರಾಠಿ ಪುಂಡರು ಕನ್ನಡಿಗರ ಮೇಲೆ ಹಲ್ಲೆ ಮಾಡಿದ್ದನ್ನು ವಿರೋಧಿಸಿ ವಾಟಾಳ್ ನಾಗರಾಜ್ ಮಾರ್ಚ್ 22ರಂದು ಕರ್ನಾಟಕ ಬಂದ್ ಗೆ ಕರೆಕೊಟ್ಟಿದ್ದಾರೆ. ಆದರೆ ವಾಟಾಳ್ ನಾಗರಾಜ್ ಕರೆ ಕೊಟ್ಟಿರುವ ಬಂದ್‌ಗೆ ನಮ್ಮ ಬೆಂಬಲ ಇಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿಎ ನಾರಾಯಣಗೌಡ ಹೇಳಿದ್ದಾರೆ. ಈ ಮೂಲಕ ಬಂದ್‌ಗೆ ಆರಂಭದಲ್ಲೇ ಹಿನ್ನಡೆಯಾಗಿದೆ.
ತುಮಕೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾರ್ಚ್ ತಿಂಗಳಿನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ. ಈ ಸಂದರ್ಭದಲ್ಲಿ ಬಂದ್ ಆಚರಿಸಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ವಿದ್ಯಾರ್ಥಿಗಳು ವರ್ಷವಿಡೀ ಅಧ್ಯಯನ ಮಾಡಿ ಪರೀಕ್ಷೆಗೆ ಸಜ್ಜಾಗಿರುತ್ತಾರೆ ಈ ಸಂದರ್ಭದಲ್ಲಿ ಬಂದ್ ಮಾಡಿದರೆ ವಿದ್ಯಾರ್ಥಿಗಳು ಆತಂಕಗೊಳ್ಳುತ್ತಾರೆ ಎಂದು ಹೇಳಿದರು.

ಕನ್ನಡಕ್ಕಿಂತ ಯಾರೂ ದೊಡ್ಡವರಲ್ಲ
ಕರ್ನಾಟಕದಲ್ಲಿ ಎಲ್ಲೇ ಕನ್ನಡ ನೆಲ, ಜಲ, ನುಡಿಗೆ ಅವಮಾನ ಆದರೆ ಕರ್ನಾಟಕ ರಕ್ಷಣಾ ವೇದಿಕೆ ಸಹಿಸಲ್ಲ. ಅದು ಸಿಎಂ ಕ್ಷೇತ್ರ ಆದರೂ ಸರಿ, ಗೃಹಸಚಿವರ ಕ್ಷೇತ್ರ ಆದರೂ ಸರಿ ಸುಮ್ಮನಿರಲು ಆಗಲ್ಲ. ಕನ್ನಡದ ಬಾವುಟಕ್ಕೆ ಅವಮಾನ ಮಾಡಿದರೆ ಇಡೀ ಕನ್ನಡಿಗರಿಗೆ ಆಗುವ ಅವಮಾನ ಎನ್ನುವುದನ್ನು ರಾಜಕರಾಣಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
ಕೊರಟಗೆರೆ ಅಪ್ಪಟ ಕನ್ನಡಿಗರ ಊರು ಅಂತ ಊರಿನಲ್ಲಿ ಕನ್ನಡ ಬಾವುಟವನ್ನು ತೆರವುಗೊಳಿಸಿದ್ದಾರೆ ಎಂದರೆ ಮಹಾರಾಷ್ಟ್ರದ ನಾಡದ್ರೋಹಿಗಳಿಗೂ ನಿಮಗೂ ಏನು ವ್ಯತ್ಯಾಸ ಏನು ಎಂದು ಕೇಳಿದರು. ತಹಶೀಲ್ದಾರ್ ಅವರಿಗೆ ಈಗಾಗಲೇ ಮನವಿ ಮಾಡಿದ್ದೇನೆ, ತೆರವು ಮಾಡಿರುವ ಧ್ವಜಸ್ಥಂಭವನ್ನು ಅಲ್ಲೇ ಸ್ಥಾಪನೆ ಮಾಡಬೇಕು ಅದನ್ನು ನಾನೇ ಬಂದು ಉದ್ಘಾಟನೆ ಮಾಡುತ್ತೇನೆ ಎಂದು ಹೇಳಿದರು.
ರಾಜ್ಯದ ಯಾವುದೇ ಭಾಗದಲ್ಲಿ ಕನ್ನಡಿಗರಿಗೆ, ಕನ್ನಡಕ್ಕೆ ಅವಮಾನ ಮಾಡಿದರೆ ಕರ್ನಾಟಕ ರಕ್ಷಣಾ ವೇದಿಕೆ ಸಹಿಸಲ್ಲ ಎಂದು ಹೇಳಿದರು. ಕೆಪಿಎಸ್‌ಸಿ ನಡೆಸುವ ಕೆಎಎಸ್ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳ ಜೊತೆ ನಾನಿದ್ದೇನೆ. 76,000 ಜನ ಹೋರಾಟ ಮಾಡುತ್ತಿದ್ದು ಕಳೆದ ಒಂದು ತಿಂಗಳಿನಿಂದ ಅವರ ಜೊತೆ ಹೋರಾಟದಲ್ಲಿ ಭಾಗಿಯಾಗಿದ್ದೇನೆ, ಅವರಿಗೆ ಆಗಿರುವ ಅನ್ಯಾಯ ಸರಿಹೋಗುವವರೆಗೆ ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ ಎಂದರು.












Click it and Unblock the Notifications