ತುಮಕೂರು: ಬಿಜೆಪಿ ಒಳಬೇಗುದಿ; ಎಸ್‌ಪಿಎಂಗೆ ಸುಲಭವಾದ ಗೆಲುವಿನ ಹಾದಿ?
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ಗೆ ಗೆಲುವಿನ ಹಾದಿ ಸುಲಭವಾಗುತ್ತಿದ್ದೆಯಾ ಎನ್ನುವ ಅನುಮಾನ ಮೂಡುತ್ತಿದೆ. ಜಿಲ್ಲಾ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಎಲ್ಲವೂ ಕಾಂಗ್ರೆಸ್ ಅಭ್ಯರ್ಥಿ ಎಸ್‌ಪಿ ಮುದ್ದಹನುಮೇಗೌಡರ ಗೆಲುವಿಗೆ ಅನುಕೂಲಕರವಾಗುವಂತೆ ನಡೆಯುತ್ತಿದೆಯಾ ಅನಿಸುತ್ತದೆ.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ವಿ ಸೋಮಣ್ಣ ಸ್ಪರ್ಧಿಸಿದ್ದರೆ, ಕಾಂಗ್ರೆಸ್‌ನಿಂದ ಎಸ್‌ಪಿ ಮುದ್ದಹನುಮೇಗೌಡ ಕಣಕ್ಕಿಳಿದಿದ್ದಾರೆ. ವಿ ಸೋಮಣ್ಣ ಅವರಿಗೆ ಜೆಡಿಎಸ್ ಬೆಂಬಲ ಕೂಡ ಇದ್ದು, ಅವರ ಗೆಲುವು ಸುಲಭವಾಗುತ್ತದೆ ಅಂದುಕೊಂಡರು, ಜಿಲ್ಲೆಯಲ್ಲಿ ಪರಿಸ್ಥಿತಿ ಭಿನ್ನವಾಗಿದೆ.

ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಅವರು ಬಿಜೆಪಿಯಿಂದ ಟಿಕೆಟ್ ಪಡೆಯುವ ವಿಶ್ವಾಸದಲ್ಲಿದ್ದರು. ಆದರೆ ಅವರಿಗೆ ಟಿಕೆಟ್ ನಿರಾಕರಿಸಿ ವಿ. ಸೋಮಣ್ಣ ಅವರಿಗೆ ಟಿಕೆಟ್ ನೀಡಲಾಗಿದೆ. ಜಿಲ್ಲೆಯಲ್ಲಿ ಹೊರಗಿನ ಅಭ್ಯರ್ಥಿಗಳಿಗೆ ಮತದಾರರು ಅಷ್ಟು ಸುಲಭವಾಗಿ ಮಣೆ ಹಾಕುವುದಿಲ್ಲ.
2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರೇ ಸೋಲನುಭವಿಸಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿಎಸ್ ಬಸವರಾಜು ಅವರು ಗೆದ್ದು ಬೀಗಿದ್ದರು, 2024ರ ಲೋಕಸಭಾ ಚುನಾವಣೆಗೆ ಮುನ್ನ ಜಿಎಸ್‌ಬಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ್ದರು.
ಮಾಧುಸ್ವಾಮಿ-ಎಸ್‌ಪಿಎಂ ಭೇಟಿ
ಸೋಮಣ್ಣ ಸ್ಪರ್ಧೆಗೆ ಜಿಲ್ಲಾ ಬಿಜೆಪಿಯಲ್ಲೇ ವಿರೋಧ ಇದೆ. ಟಿಕೆಟ್ ಸಿಗದ ಕಾರಣ ಜೆಸಿ ಮಾಧುಸ್ವಾಮಿ ಅಸಮಾಧಾನ ಗೊಂಡಿದ್ದಾರೆ. ಇದರ ಬೆನ್ನಲ್ಲೇ ಎಸ್‌ಪಿ ಮುದ್ದಹನುಮೇಗೌಡ ಅವರು ಜೆಸಿ ಮಾಧುಸ್ವಾಮಿ ಮನೆಗೆ ಭೇಟಿ ನೀಡಿ ಚರ್ಚೆ ಮಾಡಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಜೆಸಿ ಮಾಧುಸ್ವಾಮಿ ಏನಾದರೂ ಎಸ್‌ಪಿಎಂ ಅವರಿಗೆ ಬೆಂಬಲ ನೀಡಿದರೆ ಅವರ ಗೆಲುವು ಬಹುತೇಕ ಖಚಿತವಾಗುತ್ತದೆ ಎನ್ನುತ್ತಾರೆ ಜಿಲ್ಲೆಯ ರಾಜಕೀಯವನ್ನು ಹತ್ತಿರದಿಂದ ನೋಡಿದವರು.
ಕಾಂಗ್ರೆಸ್‌ಗೆ ಹೆಚ್ಚಿನ ಬಲ?
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ನಾಲ್ವರು ಕಾಂಗ್ರೆಸ್ ಶಾಸಕರಿದ್ದರೆ, ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಇಬ್ಬರು ಶಾಸಕರಿದ್ದಾರೆ. ಪರಮೇಶ್ವರ್, ಕೆಎನ್‌ಆರ್, ಎಸ್‌ಆರ್ ಶ್ರೀನಿವಾಸ್ ಅವರಂತಹ ನಾಯಕರು ಜಿಲ್ಲೆಯಲ್ಲಿ ಪ್ರಭಾವಿಗಳಾಗಿದ್ದು, ಎಸ್‌ಪಿಎಂ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.
ಸೋಮಣ್ಣ ಅವರಿಗೆ ಜೆಡಿಎಸ್ ಬೆಂಬಲ ಸಿಕ್ಕಿದ್ದರೂ ಒಕ್ಕಲಿಗರ ಮತಗಳು ಸಿಗುವ ಬಗ್ಗೆ ಅನುಮಾನವಿದೆ. ಎಸ್‌ಪಿ ಮುದ್ದಹನುಮೇಗೌಡರು ಕಾಂಗ್ರೆಸ್ ಬೆಂಬಲಿಗರಾಗಿದ್ದು, ಒಕ್ಕಲಿಗರ ಮತಗಳನ್ನು ಪಡೆಯುವ ವಿಶ್ವಾಸದಲ್ಲಿದ್ದಾರೆ.
ಎಸ್‌ಪಿ ಮುದ್ದಹನುಮೇಗೌಡರು 2014-19ರ ಅವಧಿಯಲ್ಲಿ ಜಿಲ್ಲೆಯಲ್ಲಿ ಮಾಡಿದ ಕೆಲಸಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಸೋಮಣ್ಣ ಕೂಡ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಮೋದಿ ಸಾಧನೆಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಕ್ಷೇತ್ರದ ಮತದಾರ ಈ ಬಾರಿ ಯಾರಿಗೆ ಮಣೆ ಹಾಕುತ್ತಾನೆ ನೋಡಬೇಕಿದೆ.












Click it and Unblock the Notifications