Tumkur: ಬೆಂಗಳೂರಿನಿಂದ ತಂದ ಕುದುರೆಗೆ ಹಸಿರು ಮೇವು ಹಾಕಿಲ್ಲ: ಪರಮೇಶ್ವರ
ತುಮಕೂರು, ಏಪ್ರಿಲ್ 17: ಬಿಜೆಪಿಯವರು ಶ್ರೀರಾಮನ ಆರಾಧನೆಯನ್ನು ಗುತ್ತಿಗೆಗೆ ತೆಗೆದುಕೊಂಡವರಂತೆ ಮಾಡುತ್ತಿದ್ದಾರೆ. ಯಾವುದೇ ಬೇದವಿಲ್ಲದೆ ಎಲ್ಲರು ಒಂದೇ ಎಂಬುದರ ಮೇಲೆ ನಂಬಿಕೆ ಇಟ್ಟ ಪಕ್ಷ ನಮ್ಮದು. ಬಿಜೆಪಿಯವರು ಅಧರ್ಮದ ಹಾದಿ ಹಿಡಿದಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಪಕ್ಷದ ವಿವಿಧ ಘಟಕಗಳ ಮುಖ್ಯಸ್ಥರ ಸಭೆಯಲ್ಲಿ ಅವರು ಮಾತನಾಡಿದರು. ಶ್ರೀರಾಮನು ಎಲ್ಲ ಪ್ರಜೆಗಳನ್ನು ಸಮಾನವಾಗಿ ಕಾಣುತ್ತಿದ್ದರು. ಹೀಗಾಗಿ 'ರಾಮರಾಜ್ಯ' ಆಡಳಿತದ ಪರಿಕಲ್ಪನೆ ಇದೆ. ಶ್ರೀರಾಮ ಯಾವುದೇ ಒಂದು ವರ್ಗ ಅಥವಾ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ.

ಬಿಜೆಪಿಯದ್ದು ಅಧರ್ಮದ ಹಾದಿ
ಶ್ರೀರಾಮ ಸತ್ಯ, ಧರ್ಮ, ಸಮಾನತೆ ಮತ್ತು ಪ್ರಜೆಗಳ ಸಮಭಾವದಿಂದ ಯೋಗಕ್ಷೇಮ ನೋಡಿದ ಮೂಲ ಪುರುಷನಾಗಿದ್ದು, ಆತನ ಕೆಲವು ತತ್ವ-ಆದರ್ಶಗಳನ್ನೇ ಸಂವಿಧಾನದಲ್ಲಿ ಅಳವಡಿಸಲಾಗಿದೆ. ಬಿಜೆಪಿಯವರು ಅಧರ್ಮದ ಹಾದಿ ಹಿಡಿದಿದ್ದಾರೆ. ಜಾತಿ, ಧರ್ಮದ ಹೆಸರಿನಲ್ಲಿ ದೇಶ ಒಡೆಯುವ ಮಾರ್ಗ ಅನುಸರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಹಾತ್ಮ ಗಾಂಧೀಜಿ ಹೇಳಿಕೊಟ್ಟ, 'ಸತ್ಯ ಮೇವ ಜಯತೇ' ದಾರಿಯಲ್ಲಿ ಕಾಂಗ್ರೆಸ್ ಪಕ್ಷ ನಡಿಯುತ್ತಿದೆ. ನಾವೆಲ್ಲ ಒಂದು ಎಂದು ಪ್ರತಿಪಾದನೆ ಮಾಡುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಎಲ್ಲರೂ ಸಂಕಲ್ಪ ಮಾಡಬೇಕು. ಯಾವುದೇ ಘಟಕವಾದರೂ ಬೂತ್ ಮಟ್ಟದಲ್ಲಿಯೇ ಹೆಚ್ಚು ಗಮನ ಹರಿಸಬೇಕು ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು.

ಕಾಂಗ್ರೆಸ್‌ನಿಂದ ಓಡುವ ಕುದುರೆ ಸ್ಪರ್ಧೆ
ಕಾಂಗ್ರೆಸ್ ಪಕ್ಷವು ಒಳ್ಳೆಯ ಕುದುರೆಯನ್ನು ತಂದು ನಿಲ್ಲಿಸಿದೆ. ಮುದ್ದಹನುಮೇಗೌಡ ಸಾಮಾನ್ಯ ಕುದುರೆಯಲ್ಲ ಕುಣಿಗಲ್ ಕುದುರೆ. ಬೆಂಗಳೂರಿನಿಂದ ಅದ್ಯಾವೋದು ಕುದುರೆ ಬಂದಿದೆ. ಕತ್ತೆ ಎಂದು ಹೇಳೋಕೆ ಹೋಗಲ್ಲ. ಆದರೆ, ಆ ಕುದುರೆಗೆ ಹಸಿರು ಮೇವು ಹಾಕಿಲ್ಲ ಎಂದು ಟೀಕಿಸಿದರು.
ತುಮಕೂರಿನಲ್ಲಿ ಮುದ್ದಹನುಮೇಗೌಡ ಅವರು ನೂರಕ್ಕೆ ನೂರು ಗೆಲುವು ಖಚಿತ. ಅವರ ಕಾರ್ಯವೈಖರಿಯನ್ನು ನಾವೆಲ್ಲ ನೋಡಿದ್ದೇವೆ. ಸಾರ್ವಜನಿಕರ ಬದುಕಿನಲ್ಲಿ ಒಳ್ಳೆ ವ್ಯಕ್ತಿ ಎಂದು ಗುರುತಿಸಿಕೊಂಡವರು. ಜಿಲ್ಲೆಗೆ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಗಮಿಸಲಿದ್ದಯ, ಯಾವಾಗ ಎಂದು ಸದ್ಯದಲ್ಲೇ ತಿಳಿಯಲಿದೆ ಎಂದರು.
ಕನಿಷ್ಠ 100 ಮತ ಹೆಚ್ಚಿಸಿ
ಪ್ರತಿ ಬೂತ್‌ನಲ್ಲಿ ಕಳೆದ ಚುನಾವಣೆಗಿಂತ ಕನಿಷ್ಠ 100 ಮತಗಳನ್ನು ಹೆಚ್ಚಿಸಬೇಕು. ಇದು ಪಕ್ಷದ ಅಭ್ಯರ್ಥಿ ಸುಲಭವಾಗಿ ಗೆಲ್ಲಲು ಸಹಕಾರವಾಗುತ್ತದೆ. ಸರ್ಕಾರ ಅನುಷ್ಟಾನಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದರೆ, ಈ ಚುನಾವಣೆಯಲ್ಲಿ ನಿಶ್ಚಿತ ಗುರಿ ತಲುಪಲು ಸಾಧ್ಯವಾಗುತ್ತದೆ. ಕಾಂಗ್ರೆಸ್ ಪಕ್ಷದ ಬದ್ಧತೆ ಹೊಂದಿರುವ ನಿವೆಲ್ಲರು ಮಾಡುತ್ತೀರಿ ಎಂದು ಅವರು ವಿಶ್ವಾಸ ಹೊರ ಹಾಕಿದರು.
ಕಾಂಗ್ರೆಸ್‌ನಿಂದ ದೇವೇಗೌಡರು ಪ್ರಧಾನಿ ಆದರು
ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಎಂದು ಎಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ. ಅವರ ಬಾಯಲ್ಲಿ ಈ ಮಾತು ಯಾಕೆ ಬಂತೋ ನನಗೆ ಗೊತ್ತಿಲ್ಲ. ನಾನು ಪ್ರಧಾನಮಂತ್ರಿಯಾಗಿದ್ದು ಕಾಂಗ್ರೆಸ್ ಪಕ್ಷದಿಂದ ಎಂಬ ಮಾತು ಒಮ್ಮೆಯು ಅವರ ಬಾಯಲ್ಲಿ ಬರಲೇ ಇಲ್ಲ.
ನಮ್ಮಪಕ್ಷವು 150 ಸೀಟುಗಳನ್ನು ಧಾರೆ ಎರೆದು ಅವರನ್ನು ಪ್ರಧಾನಿ ಮಾಡಿದ್ದೇವೆ. ಈಗ, ರಾಜ್ಯ ಸರ್ಕಾರ ಬಿಳಲಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ರಾತ್ರಿ ಹೊತ್ತು ಅಥವಾ ಬೆಳಗಿನ ಜಾವ ಕನಸು ಕಾಣುವವರಿಗೆ ಏನಾದರು ಹೇಳಬಹುದು. ರಾಜ್ಯ ಸರ್ಕಾರ ಬೀಳುತ್ತೆ ಅಂತ ಹಗಲು ಹೊತ್ತು ಕನಸ್ಸು ಕಾಣುವವರಿಗೆ ಏನು ಹೇಳಬೇಕು. ನಾಲ್ಕು ವರ್ಷಗಳವರೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಸುಭದ್ರವಾಗಿರಲಿದೆ. ಯಾವುದೇ ಕಾರಣಕ್ಕು ಸರ್ಕಾರ ಬೀಳುವುದಿಲ್ಲ ಎಂದು ಅವರು ದೇವೇಗೌಡರಿಗೆ ತಿರುಗೇಟು ಕೊಟ್ಟರು.
ಸೋಮಣ್ಣ ವಿರುದ್ಧ ಕಿಡಿ
ತುಮಕೂರು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಕಾಂಗ್ರೆಸ್‌ನಲ್ಲಿದ್ದಾಗ ಚೆನ್ನಾಗಿದ್ದರು. ಬಿಜೆಪಿ ಸೇರಿದ ಮೇಲೆ ಸುಳ್ಳು ಹೇಳುವುದನ್ನ ಕಲಿತಿದ್ದಾನೆ. ಬಿಜೆಪಿಯವರು ಸಾಮಾನ್ಯ ಜನರಿಗೆ ಮೋಸ ಮಾಡಿ, ಅವರ ಬದುಕನ್ನು ನಾಶ ಮಾಡಿದ್ದಾರೆ. ಇಂದಿರಾಗಾಂಧಿ ಗರೀಭಿ ಹಠಾವೋ ಯೋಜನೆ ಜಾರಿಗೆ ತಂದರು. ಅಂತಹ ಯಾವುದೇ ಜನಪ್ರಿಯ ಯೋಜನೆಯನ್ನು ಮೋದಿ ಸರ್ಕಾರ ಜಾರಿಗೆ ತರಲು ಆಗಿಲ್ಲ ಎಂದು ದೂರಿದರು.
ಕೊಬ್ಬರಿ ಬೆಳೆಗಾರರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ
ಪ್ರಧಾನಿ ನರೇಂದ್ರ ಮೋದಿಯವರು ರೈತರ ಆದಾಯ ದ್ವಿಗುಣ ಮಾಡುತ್ತೇನೆ ಎಂದು ಹೇಳಿಕೊಂಡು ಪ್ರಚಾರ ಪಡೆದರು. ಸಮಸ್ಯೆಗಳಿಗೆ ಪರಿಹಾರ ಕೇಳಿದ ರೈತರಿಗೆ ಗುಂಡಿಕ್ಕಿದರು. ನಮ್ಮ ಜಿಲ್ಲೆಯಲ್ಲಿ 60 ಲಕ್ಷ ಟನ್ ಉಂಡೆ ಕೊಬ್ಬರಿ ಉತ್ಪನ್ನವಾಗುತ್ತಿದೆ. ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿಯಲ್ಲಿ ಬೆಳೆದ ಕೊಬ್ಬರಿಯಿಂದ ಗುಜುರಾತ್‌ನಲ್ಲಿ ಸ್ವೀಟ್ ತಯಾರಿಸಲಾಗುತ್ತಿದೆ.
ಆದರೆ ಈವರೆಗೂ ಕೊಬ್ಬರಿ ಬೆಳೆಗಾರರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಕಳೆದ ಹತ್ತು ವರ್ಷದಲ್ಲಿ ದೇಶದ ಉದ್ಯಮಿಗಳ ರೂ. 30 ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಗಿದೆ. ರೈತರ ರೂ. 5 ಲಕ್ಷ ಕೋಟಿ ಸಾಲಮನ್ನಾ ಮಾಡಲು ಆಗುವುದಿಲ್ಲವೇ? ರೈತರ ಉದ್ಧಾರ ಮಾಡಲು ಅಧಿಕಾರದಲ್ಲಿಲ್ಲ. ನಾಶ ಮಾಡಲು ಅಧಿಕಾರದಲ್ಲಿದ್ದಾರೆ ಎಂದು ಕಿಡಿಕಾರಿದರು.
ಸಹಕಾರ ಸಚಿವ ರಾಜಣ್ಣ, ಮಾಜಿ ಶಾಸಕರಾದ ಗಂಗ ಹನುಮಯ್ಯ, ರಫೀಕ್ ಅಹ್ಮದ್, ಕೆಪಿಸಿಸಿ ಉಪಾಧ್ಯಕ್ಷರಾದ ಎಂ.ಸಿ.ವೇಣುಗೋಪಾಲ್, ಮುರಳಿಧರ್ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ಮುಖಂಡರಾದ ಇಕ್ಬಾಲ್ ಅಹ್ಮದ್ ಸೇರಿದಂತೆ ಮುಂತಾದವರು ಸಭೆಯಲ್ಲಿದ್ದರು.












Click it and Unblock the Notifications