Tiptur Coconut Saplings: ತಿಪಟೂರಿನಲ್ಲಿ ಕೊಬ್ಬರಿ, ಕಾಯಿ, ಚಿಪ್ಪು ಆಯ್ತು.. ಈಗ ತೆಂಗಿನ ಸಸಿ ದಾಖಲೆ ಬೆಲೆಗೆ ಮಾರಾಟ
Tiptur Coconut Saplings: ಕಲ್ಪತರು ನಾಡು ಅಂತಲೇ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಕೊಬ್ಬರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಅಲ್ಲದೆ, ಇದೀಗ ಇಲ್ಲಿನ ತೆಂಗಿನ ಸಸಿಯೂ ದಾಖಲೆಯ ಬೆಲೆಗೆ ಮಾರಾಟವಾಗುತ್ತಿದ್ದು, ಉತ್ತಮ ತಳಿಯ ಸಸಿಗಳು ಹೆಚ್ಚು ಹಣ ಕೊಡುತ್ತೇವೆ ಅಂದರೂ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾದ್ರೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಎಳನೀರು, ತೆಂಗಿನಕಾಯಿ, ಕೊಬ್ಬರಿ ಹಾಗೂ ಕೊಬ್ಬರಿ ಚಿಪ್ಪಿನ ಬೆಲೆಗಳು ಮಾರುಕಟ್ಟೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವ ಬೆನ್ನಲ್ಲೇ ತೆಂಗಿನ ಸಸಿಗಳಿಗೂ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಇದರ ಪರಿಣಾಮವಾಗಿ ತೆಂಗಿನ ಸಸಿಗಳ ದರದಲ್ಲೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಹೆಚ್ಚು ದುಡ್ಡು ಕೊಟ್ಟರೂ ಸಿಗದ ತೆಂಗಿನ ಸಸಿ
ಜೂನ್ ತಿಂಗಳ ಆರಂಭದಲ್ಲಿ ಒಂದಕ್ಕೆ 150, 200 ರೂಪಾಯಿಯಂತೆ ಮಾರಾಟವಾಗುತ್ತಿದ್ದ ತೆಂಗಿನ ಸಸಿಯ ಬೆಲೆ, ಇದೀಗ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಪ್ರಸ್ತುತ 450 ನೀಡಲು ಸಿದ್ಧರಿದ್ದರೂ ಕೂಡ ಮಾರುಕಟ್ಟೆಯಲ್ಲಿ ಅಥವಾ ನರ್ಸರಿಗಳಲ್ಲಿ ಸಸಿಗಳು ಲಭ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ತುಮಕೂರು ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ ಸರ್ಕಾರಿ ತೋಟಗಾರಿಕೆ ನರ್ಸರಿಗಳಲ್ಲೂ ಸಸಿಗಳ ಅಭಾವ ಎದುರಾಗಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಮತ್ತೆ ತೆಂಗಿನ ಬೆಳೆಯತ್ತಮ ಮುಖ ಮಾಡಿದ ರೈತರು
ಕಳೆದ ಒಂದು ದಶಕದಿಂದ ತೆಂಗಿನ ಮರಗಳಿಗೆ ತಗುಲಿದ ಹಲವು ರೋಗಗಳು ಹಾಗೂ ಕೀಟಬಾಧೆಯಿಂದಾಗಿ ಲಕ್ಷಾಂತರ ಹೆಕ್ಟೇರ್‌ನಲ್ಲಿದ್ದ ಬೆಳೆ ನಶಿಸಿ ಹೋಗಿತ್ತು. ಇಳುವರಿಯು ತೀವ್ರವಾಗಿ ಕುಸಿದಿದ್ದರಿಂದ ಆರ್ಥಿಕ ನಷ್ಟ ಅನುಭವಿಸಿದ್ದ ಕೃಷಿಕರು ತೆಂಗಿನ ಕೃಷಿ ಬಿಟ್ಟು ಪರ್ಯಾಯ ಬೆಳೆಗಳತ್ತ ಮುಖ ಮಾಡಿದ್ದರು. ಆದರೆ ಪ್ರಸ್ತುತ ಇದೀಗ ಮಾರುಕಟ್ಟೆಯಲ್ಲಿ ತೆಂಗಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ್ದು, ಮಾರುಕಟ್ಟೆ ಬೆಲೆ ದಾಖಲೆ ಮಟ್ಟಕ್ಕೆ ತಲುಪಿದೆ. ಕೊಬ್ಬರಿ ಧಾರಣೆ ಕ್ವಿಂಟಾಲ್‌ಗೆ ಸುಮಾರು 30,000 ರೂಪಾಯಿ ತಲುಪಿರುವುದು ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸಿದ್ದು, ಕೃಷಿಕರು ಮತ್ತೆ ಕಲ್ಪವೃಕ್ಷದ ಬೆಳೆಸಲು ಆಸಕ್ತಿ ತೋರುತ್ತಿದ್ದಾರೆ ಎನ್ನಲಾಗಿದೆ.
ಒಂದೆರಡು ವರ್ಷಗಳ ಕಾಲ ಮಳೆ ಅಭಾವ ಎದುರಾದರೂ ಅಥವಾ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾದರೂ ತೆಂಗಿನ ಬೆಳೆ ನಿರ್ವಹಣೆಗಾಗಿ ಸರಳವಾಗಿರುತ್ತದೆ ಎಂಬುದು ರೈತರ ಲೆಕ್ಕಾಚಾರವಾಗಿದೆ. ಇದರ ಜೊತೆಗೆ ತೆಂಗು ಬೆಳೆಯ ವಿಸ್ತರಣೆಗೆ ಪೂರಕವಾಗಿ ಕೇಂದ್ರ ಸರ್ಕಾರವು ನೀಡುತ್ತಿದ್ದ ಸಹಾಯಧನವನ್ನು ಹೆಚ್ಚಿಸಿದ್ದು, ತೆಂಗು ಅಭಿವೃದ್ಧಿ ಮಂಡಳಿಯೂ ಆರ್ಥಿಕ ನೆರವು ನೀಡುತ್ತಿರುವುದು ರೈತರಿಗೆ ಉತ್ತೇಜನ ನೀಡಿದೆ ಎನ್ನುವ ಮಾಹಿತಿ ಇದೆ.
ತಿಪಟೂರಿನ ಈ ಸಸಿಗಳಿಗೆ ಹೆಚ್ಚಿದ ಬೇಡಿಕೆ
ತುಮಕೂರು ಜಿಲ್ಲೆಯು ತೆಂಗಿನ ಬೆಳೆಗೆ ಹೆಸರುವಾಸಿಯಾಗಿದೆ. ಇಲ್ಲಿನ ವಿಶೇಷ ತಳಿಯಾದ 'ತಿಪಟೂರು ಟಾಲ್' (Tiptur Tall) ಸಸಿಗಳಿಗೆ ರಾಜ್ಯದಲ್ಲಿ ಅಷ್ಟೇ ಅಲ್ಲದೆ ದೇಶದ ಇತರ ರಾಜ್ಯಗಳಲ್ಲೂ ಭಾರಿ ಬೇಡಿಕೆ ಇದೆ. ಜೂನ್ ತಿಂಗಳಿನಿಂದ ಇಲ್ಲಿವರೆಗೆ ಸುಮಾರು 3 ಲಕ್ಷಕ್ಕೂ ಅಧಿಕ ಸಸಿಗಳಿಗೆ ಬೇಡಿಕೆ ಬಂದಿದ್ದು, ಈಗಾಗಲೇ ಸುಮಾರು 1 ಲಕ್ಷಕ್ಕೂ ಅಧಿಕ ಸಸಿಗಳನ್ನು ನಾಟಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮಾರುಕಟ್ಟೆಯಲ್ಲಿ ತೆಂಗಿನ ಉಪ ಉತ್ಪನ್ನಗಳ ಬೆಲೆ ಹೆಚ್ಚಿರುವುದರಿಂದ ಮತ್ತು ಹೊಸದಾಗಿ ತೋಟ ಮಾಡುವವರಿಗೆ ತೋಟಗಾರಿಕೆ ಇಲಾಖೆಯು ವಿವಿಧ ಯೋಜನೆಗಳಡಿ ಸೌಲಭ್ಯ ಒದಗಿಸುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ತೆಂಗಿನ ಬೆಳೆ ವಿಸ್ತೀರ್ಣ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ತೆಂಗಿನ ಕಾಯಿ, ಎಳನೀರು, ಕೊಬ್ಬರಿಯಂತೆಯೇ ತೆಂಗಿನ ಸಸಿಗೂ ಬೇಡಿಕೆ ಹೆಚ್ಚಾಗಿದ್ದು, ಇದರಿಂದ ಈ ಬೆಳೆಗಾರರಿಗೆ ಮತ್ತಷ್ಟು ಲಾಭದ ಭರವಸೆ ಮೂಡಿದಂತಾಗಿದೆ.


Click it and Unblock the Notifications
