Tumakuru: ತುಮಕೂರಿನ ಬಿಸಿಎಂ ಹಾಸ್ಟೆಲ್‌ಗಳಿಗೆ ಇಲ್ಲ ಅನ್ನಭಾಗ್ಯ! ಸಹಾಯಕ್ಕೆ ಬಂದ ಸಿದ್ದಗಂಗಾ ಮಠ
ತುಮಕೂರು, ಫೆಬ್ರವರಿ.19: ಹಿಂದುಳಿದ ವರ್ಗಗಳ ಇಲಾಖೆಯಿಂದ ನಡೆಯುತ್ತಿರುವ ತುಮಕೂರಿನ ಬಿಸಿಎಂ ಹಾಸ್ಟೆಲ್‌ಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಅಕ್ಕಿ ಹಂಚಿಕೆ ವಿಳಂಬವಾಗಿದೆ. ಈ ಕಾರಣದಿಂದ ಹಾಸ್ಟೆಲ್‌ನಲ್ಲಿ ಅಕ್ಕಿ ಕೊರತೆ ಕಂಡಿದ್ದು, ಸಿದ್ದಗಂಗಾ ಮಠ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾಗಿದೆ.
ಮೂಲಗಳ ಪ್ರಕಾರ, ಸಿರಾ ಮತ್ತು ತುಮಕೂರಿನ ಬಿಸಿಎಂ ಹಾಸ್ಟೆಲ್‌ಗಳು ಅಕ್ಕಿ ಕೊರತೆಯನ್ನು ಎದುರಿಸುತ್ತಿವೆ. ಹೀಗಾಗಿ ಮಕ್ಕಳ ಊಟಕ್ಕೆ ತೊಂದರೆಯಾಗುತ್ತಿತ್ತು. ಇದೇ ಕಾರಣಕ್ಕೆ ತುಮಕೂರು ಅಧಿಕಾರಿಗಳು ಡಿಸೆಂಬರ್‌ನಲ್ಲಿ ಸಿದ್ದಗಂಗಾ ಮಠದಿಂದ 180 ಕ್ವಿಂಟಾಲ್ ಅಕ್ಕಿಯನ್ನು ಸಾಲವಾಗಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 18 ಹಾಸ್ಟೆಲ್‌ಗಳ ಸುಮಾರು 2,000 ವಿದ್ಯಾರ್ಥಿಗಳಿಗೆ ಆಹಾರಕ್ಕಾಗಿ ಅಧಿಕಾರಿಗಳು ಈ ಕ್ರಮ ತೆಗೆದುಕೊಂಡಿದ್ದಾರೆ.

ಇನ್ನು ಕೆಲವು ತಾಲ್ಲೂಕುಗಳಲ್ಲಿ ಅಧಿಕಾರಿಗಳು ಬೇರೆ ಹಾಸ್ಟೆಲ್‌ಗಳಿಂದ ಅಕ್ಕಿಯನ್ನು ಸಾಲ ಪಡೆಯುವುದು ಅಥವಾ ಮುಕ್ತ ಮಾರುಕಟ್ಟೆಯಿಂದ ದುಬಾರಿ ಬೆಲೆಗೆ ಖರೀದಿಸುವ ಮೂಲಕ ಅಕ್ಕಿಯನ್ನು ಪಡೆದು ಮಕ್ಕಳ ಅಹಾರ ವ್ಯವಸ್ಥೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸರ್ಕಾರವು ಪ್ರತಿ ತ್ರೈಮಾಸಿಕಕ್ಕೆ ಜಿಲ್ಲೆಗೆ ಅಕ್ಕಿಯನ್ನು ಪೂರೈಸುತ್ತದೆ.
ಜಿಲ್ಲಾ ಅಧಿಕಾರಿಯು ಎಫ್‌ಸಿಐ ಗೋದಾಮುಗಳಿಂದ ಅಕ್ಕಿಯನ್ನು ಕೆಜಿಗೆ 6 ರೂ.ನಂತೆ ಸಬ್ಸಿಡಿ ದರದಲ್ಲಿ ಖರೀದಿಸುತ್ತಾರೆ. ಆದರೆ, ಜಿಲ್ಲೆಯು 2023 ರ ಅಕ್ಟೋಬರ್‌ನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಅಕ್ಕಿಯನ್ನು ಪಡೆಯಬೇಕಾಗಿತ್ತು. ಆದರೆ ಅದು ಜನವರಿ 2024 ರಲ್ಲಿ ಬಂದಿದೆ. ಹೀಗಾಗಿ ಅಕ್ಕಿ ಕೊರತೆ ಎದುರಾಗಿದೆ ಎನ್ನಲಾಗಿದೆ.
ಇನ್ನು, "ತುಮಕೂರು ತಾಲೂಕಿಗೆ ಸಿದ್ದಗಂಗಾ ಮಠದಿಂದ ಅಕ್ಕಿ ಬಂದಿದ್ದರಿಂದ ನಮ್ಮಲ್ಲೂ ಅಕ್ಕಿ ದಾಸ್ತಾನು ಮಾಡಲು ಗೋದಾಮುಗಳ ಕೊರತೆ ಇರುವುದರಿಂದ ಎಫ್‌ಸಿಐನಿಂದ ಹೆಚ್ಚಿನ ಅಕ್ಕಿ ಖರೀದಿಸಿಲ್ಲ. ನಮಗೆ ಮಂಜೂರು ಮಾಡಿದ ಅಕ್ಕಿ ಸುರಕ್ಷಿತವಾಗಿ ಎಫ್‌ಸಿಐನಲ್ಲಿ ಉಳಿದಿದೆ" ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ಗಂಗಪ್ಪ ತಿಳಿಸಿದ್ದಾರೆ.

"2,200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಹಾಸ್ಟೆಲ್‌ಗಗೆ ಸಿದ್ದಗಂಗಾ ಮಠದಿಂದ ಅಕ್ಕಿ ತೆಗೆದುಕೊಳ್ಳುವುದು ಸಹಜ. ಏಕೆಂದರೆ ಅದು ಸಮೀಪದಲ್ಲಿಯೇ ಇದೆ. ಆದರೆ, ನಾವು ಎಫ್‌ಸಿಐ ಗೋದಾಮಿನಿಂದ ಅಕ್ಕಿಯನ್ನು ತರದೆ ಹೋದರೆ ಅದು ವಾಪಸ್ ಹೋಗುತ್ತದೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಿದ್ದಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ಅವರು ಅಧಿಕೃತ ಮನವಿ ಮೇರೆಗೆ ಹಾಸ್ಟೆಲ್‌ಗಳಿಗೆ ಅಕ್ಕಿ ನೀಡಿರುವುದನ್ನು ಖಚಿತಪಡಿಸಿದ್ದಾರೆ. ಮಠವು ಭಕ್ತರು ಮತ್ತು ದಾನಿಗಳಿಂದ ಅಕ್ಕಿ ಪಡೆಯುತ್ತದೆ.












Click it and Unblock the Notifications