ತುಮಕೂರಿನಿಂದ ಶೋಭಾ ಕರಂದ್ಲಾಜೆ ಸ್ಪಧಿಸಬಹುದು: ಸಂಸದ ಜಿಎಸ್ ಬಸವರಾಜು ಅಚ್ಚರಿಯ ಹೇಳಿಕೆ
ಲೋಕಸಭಾ ಚುನಾವಣೆ 2024ರ ದಿನಾಂಕ ಘೋಷಣೆಗೆ ಮುನ್ನವೇ ತುಮಕೂರು ಲೋಕಸಭಾ ಕ್ಷೇತ್ರ ಹಲವು ಕಾರಣಗಳಿಂದ ಸಾಕಷ್ಟು ಸದ್ದು ಮಾಡುತ್ತಿದೆ. ಕಾಂಗ್ರೆಸ್‌ನಿಂದ ರಾಹುಲ್ ಗಾಂಧಿ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಭಾರಿ ಕುತೂಹಲ ಹುಟ್ಟುಹಾಕಿತ್ತು, ಅದಾದ ಬಳಿಕ ಮುದ್ದಹನುಮೇಗೌಡರ ಹೆಸರು ಮತ್ತೆ ಮುನ್ನಲೆಗೆ ಬಂದಿದೆ. ಇದು ಕಾಂಗ್ರೆಸ್ ಕಥೆಯಾದರೆ, ಇನ್ನು ಬಿಜೆಪಿ ಪಾಳಯದಲ್ಲಿ ಕೂಡ ಹಲವು ಹೆಸರು ಕೇಳಿ ಬರುತ್ತಿವೆ.
ತುಮಕೂರಿನಿಂದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಸ್ಪರ್ಧಿಸುತ್ತಾರೆ ಎನ್ನುವ ಬೆನ್ನಲ್ಲೇ ಸಂಸದ ಜಿ.ಎಸ್. ಬಸವರಾಜು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರನ್ನು ತೇಲಿಬಿಟ್ಟಿದ್ದಾರೆ. ತುಮಕೂರಿನಿಂದ ಶೋಭಾ ಕರಂದ್ಲಾಜೆ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಅವರು ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಅವರದ್ದೇ ಆದ ಶಕ್ತಿಯಿದೆ, ಅವರು ಚಾಣಾಕ್ಷರಿದ್ದಾರೆ ಎಂದು ಹೇಳಿರುವ ಸಂಸದ ಬಸವರಾಜು ಶೋಭಾ ಕರಂದ್ಲಾಜೆ ಸ್ಪರ್ಧಿಸಬಹುದು ಎಂದು ಹೇಳಿದ್ದಾರೆ.
ಸೋಮಣ್ಣ ಸ್ಪರ್ಧಿಸಲಿ ಎಂದ ಜಿಎಸ್‌ಬಿ
ವಿ. ಸೋಮಣ್ಣ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಲು ವರಿಷ್ಠರಲ್ಲಿ ಮನವಿ ಮಾಡಿದ್ದಾರೆ, ಆದರೆ ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ನಾನು ಅವರಿಗೆ ಮನವಿ ಮಾಡಿದ್ದೇನೆ, ಸೋಮಣ್ಣ ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಗೆಲ್ಲುತ್ತಾರೆ ಆದರೆ ಜೆ.ಸಿ. ಮಾಧುಸ್ವಾಮಿ ನಿಂತರೆ ಗೆಲುವಿನ ಬಗ್ಗೆ ಹೇಳಲು ಆಗುವುದಿಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು.
ತುಮಕೂರಿನಿಂದ ಸ್ಪರ್ಧೆ ಮಾಡುವ ಬಗ್ಗೆ ಸೋಮಣ್ಣ ನನಗೆ ಸಲಹೆ ಕೇಳಿದ್ದಾರೆ. ಇಲ್ಲಿ ಬಿಜೆಪಿ ಪರ ಅಲೆ ಇದ್ದು, ಯಾರೇ ನಿಂತರೂ ಗೆಲ್ಲುತ್ತಾರೆ. ಆದರೆ ಹೈಕಮಾಂಡ್ ಬೆಂಬಲ ನೀಡಬೇಕು ಎನ್ನುವ ಮೂಲಕ ಸೋಮಣ್ಣ ಅವರಿಗೆ ಟಿಕೆಟ್ ಕೊಡುವಂತೆ ಪರೋಕ್ಷವಾಗಿ ಒತ್ತಡ ಹಾಕಿದ್ದಾರೆ.
ಬಿಜೆಪಿಯಿಂದ ಯಾರೇ ಸ್ಪರ್ಧೆ ಮಾಡಿದರೂ ಬೆಂಬಲ ನೀಡುತ್ತೇನೆ ಆದರೆ ಮಾಧುಸ್ವಾಮಿಯವರಿಗೆ ಟಿಕೆಟ್ ಕೊಟ್ಟರೆ ವರಿಷ್ಠರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು. ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಮಾತನಾಡಲು ಅಮಿತ್ ಶಾ ಅವರಿಗೆ ಸಮಯ ಕೇಳಿದ್ದೇನೆ, ಅರ್ಧಗಂಟೆ ಭೇಟಿಗೆ ಸಮಯ ನೀಡಿದ್ದು, ತುಮಕೂರು ಕ್ಷೇತ್ರದ ಬಗ್ಗೆ ಮಾತನಾಡುತ್ತೇನೆ ಎಂದಿರುವುದಾಗಿ ತಿಳಿಸಿದರು.
ತುಮಕೂರಿನಿಂದ ಕತ್ತೆ ನಿಲ್ಲಿಸಿದರೂ ಮೋದಿ ನೋಡಿ ಜನ ವೋಟು ಹಾಕುತ್ತಾರೆ. ಆದರೆ ದುರಹಂಕಾರಿಗಳು ಗೆಲ್ಲುವುದು ಕಷ್ಟ ಎಂದು ಪರೋಕ್ಷವಾಗಿಯೇ ಜೆ.ಸಿ. ಮಾಧುಸ್ವಾಮಿ ಬಗ್ಗೆ ಹೇಳಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ.












Click it and Unblock the Notifications