ಇಂದು ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ; ಮಠಕ್ಕೆ ಹರಿದುಬಂದ ಭಕ್ತಸಾಗರ
ತುಮಕೂರು, ಜನವರಿ 19: "ನಡೆದಾಡುವ ದೇವರು" ಎಂದೇ ಕರೆಸಿಕೊಂಡಿರುವ ಸಿದ್ಧಗಂಗಾ ಮಠಾಧೀಶರಾದ ಡಾ.ಶಿವಕುಮಾರ ಸ್ವಾಮೀಜಿಗಳ ಮೊದಲ ವರ್ಷದ ಪುಣ್ಯ ಸ್ಮರಣೆಯು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಇಂದು ನೆರವೇರಿತು.
ಇಂದು ಶ್ರೀಗಳ ಮೊದಲ ವರ್ಷದ ಪುಣ್ಯಾರಾಧನೆಯು ಬೃಹತ್ ಮಟ್ಟದಲ್ಲಿ ನಡೆದಿದ್ದು, ನೂರ ಹನ್ನೊಂದು ವರ್ಷಗಳ ಸಾರ್ಥಕ ಬದುಕು ಪೂರೈಸಿ, ವರ್ಷದ ಹಿಂದೆ ಶಿವೈಕ್ಯರಾದ ಶ್ರೀಗಳಿಗೆ ಅಸಂಖ್ಯ ಭಕ್ತರು ನಮನ ಸಲ್ಲಿಸಿದರು.
ಅನ್ನದಾಸೋಹದ ಮಹತ್ವ ಸಾರಿದ ಶ್ರೀಗಳ ಗೌರವಾರ್ಥವಾಗಿ ಹಲವೆಡೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು. ಸ್ಮರಣಾ ಕಾರ್ಯಕ್ರಮಕ್ಕೆ ಬರುವ ಭಕ್ತರಿಗೆ ಮಠದ ಆವರಣದಲ್ಲಿ ಏಳು ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ದೂರದ ಊರುಗಳಿಂದ ಶನಿವಾರವೇ ಭಕ್ತರು ಬಂದಿದ್ದು, ಮಠದ ಪ್ರಾಂಗಣದಲ್ಲಿ ಬೆಳಿಗ್ಗೆ ಸ್ವಾಮೀಜಿ ಭಾವಚಿತ್ರದ ಮೆರವಣಿಗೆ ನಡೆಯಿತು.

ಗದ್ದುಗೆ ಪೂಜಾ ಕಾರ್ಯಕ್ರಮಕ್ಕೆ ಸಿದ್ಧಗಂಗಾ ಮಠದ ಸಿದ್ಧಲಿಂಗ ಶ್ರೀಗಳು ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಮತ್ತು ರಾಜಕೀಯ ಮುಖಂಡರು, ಸಾವಿರಾರು ಭಕ್ತರು ಭಾಗಿಯಾಗಿದ್ದರು.












Click it and Unblock the Notifications