ರಾಹುಲ್ ಗೆ ಸರ್ಪಗಾವಲು, ತುಮಕೂರಿನ ಜನಕ್ಕೆ ಸಿಕ್ಕಾಪಟ್ಟೆ ಕಿರಿಕಿರಿ
ತುಮಕೂರು, ಏಪ್ರಿಲ್ 4: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಲ್ಲಿನ ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಮಠಕ್ಕೆ ಬಂದು, ಶಿವಕುಮಾರ ಸ್ವಾಮೀಜಿ ಅವರಿಗೆ 111ನೇ ಜನ್ಮದಿನೋತ್ಸವದ ಗುರುವಂದನೆ ಸಲ್ಲಿಸಿ, ಆಶೀರ್ವಾದ ಪಡೆದರು.
ಆ ನಂತರ ಅರ್ಧ ಗಂಟೆಗೂ ಹೆಚ್ಚು ಕಾಲ ಸ್ವಾಮೀಜಿ ಜತೆ ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಸಚಿವ ಟಿ.ಬಿ.ಜಯಚಂದ್ರ ಅವರು ರಾಹುಲ್ ಗಾಂಧಿಗೆ ಸಾಥ್ ನೀಡಿದರು.
ಚಿತ್ರಗಳು :ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ರಾಹುಲ್ ಗಾಂಧಿ
ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಶಾಸಕರಾದ ಡಾ.ರಫೀಕ್ ಅಹ್ಮದ್, ಕೆ.ಎನ್.ರಾಜಣ್ಣ, ಷಡಕ್ಷರಿ, ವಿ.ಎಸ್. ಉಗ್ರಪ್ಪ ಸೇರಿದಂತೆ ಹಲವು ನಿಗಮ ಮಂಡಳಿಯ ಅಧ್ಯಕ್ಷರು, ಮುಖಂಡರು ಹಾಜರಿದ್ದರು.

ತುಮಕೂರು ನಾಗರಿಕರ ಆಕ್ರೋಶ
ರಾಹುಲ್ ಗಾಂಧಿ ತುಮಕೂರಿಗೆ ಅಗಮಿಸುವ ಹಿನ್ನೆಲೆಯಲ್ಲಿ ಪೊಲೀಸರು ಅಘೋಷಿತ ಕರ್ಫ್ಯೂ ಜಾರಿಗೊಳಿಸಿ, ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದರು.

ಪೊಲೀಸರು ಕಾನೂನು ದುರುಪಯೋಗ ಮಾಡಿಕೊಂಡು ನಾಗರಿಕರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಹಲವೆಡೆ ಬ್ಯಾರಿಕೇಡ್ ಅಳವಡಿಸಿದ್ದ ಪೊಲೀಸರು ನಾಗರಿಕರ ಜತೆ ಏರಿದ ಧ್ವನಿಯಲ್ಲಿ ವಾಗ್ವಾದಕ್ಕೆ ಇಳಿಯುತ್ತಿದ್ದ ದೃಶ್ಯ ಕಂಡುಬಂತು.












Click it and Unblock the Notifications