ತುಮಕೂರು: ಕೊರಟಗೆರೆಯ ಗೋಶಾಲೆಯಲ್ಲಿ ಮೇವು, ನೀರು ಇಲ್ಲದೆ 20ಕ್ಕೂ ಹೆಚ್ಚು ಜಾನುವಾರುಗಳ ಸಾವು
ತುಮಕೂರು, ಜುಲೈ. 11: ಕೊರಟಗೆರೆ ತಾಲೂಕಿನ ಬೈಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೆಡ್ಡಿಹಳ್ಳಿ ಬಳಿಯ ಗೋಮುಖ ಗೋಶಾಲೆಯಲ್ಲಿ ಕಳೆದ ಎರಡ್ಮೂರು ತಿಂಗಳಿಂದ ಸಮರ್ಪಕ ಮೇವು, ನೀರು ಸಿಗದೆ 20ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಎಮ್ಮೆ ಸೇರಿದಂತೆ ಜಾನುವಾರುಗಳನ್ನು ಕಳೆದ ಎರಡು ತಿಂಗಳಿನಿಂದ ಕೂಡಿ ಬೀಗ ಹಾಕಲಾಗಿದೆ. ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ಮತ್ತು ನೀರು ಒದಗಿಸಿಲ್ಲ ಎಂದು ನಿವಾಸಿಗಳು ದೂರಿದರು. ಸರಕಾರಿ ಗೋಮಾಳದ ಜಮೀನಿನ ದಾರಿಗಾಗಿ ಮಾಲೀಕರ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದು, ಗೋಶಾಲೆಗೆ ತೆರಳುವ ಮಾರ್ಗವೇ ಬಂದ್ ಮಾಡಲಾಗಿದೆ.

ಜಮೀನು ಮತ್ತು ದಾರಿಗಾಗಿ ಸರಕಾರಿ ಗೋಮಾಳದ ಜಮೀನು ಮಾಲೀಕರು ಕೊರಟಗೆರೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಆದರೆ, ಮೇವು, ನೀರಿಲ್ಲದೆ ಪ್ರತಿನಿತ್ಯ ನರಳಾಡಿ ಮೃತ ಪಡುತ್ತಿರುವ ರಾಸುಗಳ ಕಷ್ಟ ಕೇಳುವವರಿಲ್ಲದಂತಾಗಿದೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಬೈಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೆಡ್ಡಿಹಳ್ಳಿಯ ಸಮೀಪದ ಗೋಮುಖ ಗೋಶಾಲೆಯಲ್ಲಿ ಈ ಅಮಾನವೀಯ ಘಟನೆ ನಡೆಯುತ್ತಿದೆ.
ಮಧುಗಿರಿ ಪುರುವಾರ ಹೋಬಳಿ ಸುಣ್ಣವಾಡಿ ಗ್ರಾಮದ ಸರ್ವೇ.15ರ ಸರಕಾರಿ ಗೋಮಾಳದ ಜಮೀನಿನಲ್ಲಿ ದಾರಿಯಿದೆ. ಕೊರಟಗೆರೆ ತಾಲೂಕಿನ ರೆಡ್ಡಿಯಲ್ಲಿ ಗ್ರಾಮದ ಸರ್ವೇ ನಂ.43/8ರ 1ಎಕರೇ 31ಗುಂಟೆ ಜಮೀನಿನಲ್ಲಿ ಗೋಮುಖ ಗೋಶಾಲೆ ಇದೆ. ಗೋಮುಖ ಗೋಶಾಲೆಯ ಅಧ್ಯಕ್ಷ ಮಲ್ಲಿಕಾರ್ಜುನ್ ಮತ್ತು ರೆಡ್ಡಿಯ ರೈತ ವೆಂಕಟೇಶಯ್ಯ ನಡುವಿನ ಸರಕಾರಿ ಗೋಮಾಳದ ದಾರಿಯ ಕುರಿತು ಜಗಳ ನಡೆಯುತ್ತಿದೆ. ಜಾನುವಾರುಗಳು ಮೃತಪಡುತ್ತಿದ್ದರು ಸಮಸ್ಯೆಯನ್ನು ಅರಿತು ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳ ತಂಡವು ಮೌನಕ್ಕೆ ಶರಣಾದ ಪರಿಣಾಮವೇ ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ.

20ಕ್ಕೂ ಹೆಚ್ಚು ಜಾನುವಾರುಗಳ ಸಾವು
ಸಮರ್ಪಕ ಪೋಷಣೆ ಮತ್ತು ನಿರ್ವಹಣೆ ಇಲ್ಲದೇ ಅನಾರೋಗ್ಯ ಹೆಚ್ಚಾಗಿ ಕಳೆದ 30 ದಿನದಿಂದ 12 ಜಾನುವಾರುಗಳು ಮೃತಪಟ್ಟಿವೆ. ಕಳೆದ ವಾರದಿಂದ ಗೋಶಾಲೆಗೆ ತೆರಳಲು ದಾರಿಯಿಲ್ಲದೇ ಮೇವು, ನೀರು ಸಿಗದೆ ಮತ್ತೆ 8 ರಾಸುಗಳು ದಾರುಣವಾಗಿ ಮೃತಪಟ್ಟಿವೆ. ಇದೆ ಜೊತೆಗೆ ಗೋಮುಖ ಗೋಶಾಲೆಯ ಸುತ್ತಲು ಸ್ಥಳೀಯರು ಚರಂಡಿ ತೆಗೆದು ಜಾನುವಾರುಗಳು ಹೊರಹೋಗದಂತೆ ತಡೆದಿದ್ದಾರೆ.
ಗೋಮುಖ ಗೋಶಾಲೆ
ಗೋಮುಖ ಗೋಶಾಲೆಯು ಇದೇ ವರ್ಷದ 2023 ರ ಮಾ. 9ರಂದು ಪ್ರಾರಂಭ ಆಗಿದೆ. ಗೋಶಾಲೆಯಲ್ಲಿ ಪ್ರಸ್ತುತ ಒಟ್ಟು 35 ಎಮ್ಮೆ ಮತ್ತು 14 ಹಸು ಸೇರಿ ಒಟ್ಟು 49 ರಾಸುಗಳಿವೆ. ಜಿಲ್ಲೆಯ ಪಾವಗಡ, ಮಧುಗಿರಿ, ಮಡಕಶಿರಾದ ಪೊಲೀಸ್ ಇಲಾಖೆಯಿಂದ ಚಿನ್ನಮಲ್ಲಣ್ಣಹಳ್ಳಿಯ ಸುರಭಿ ಗೋಶಾಲೆ ಮೂಲಕ ರೆಡ್ಡಿಯಲ್ಲಿಯ ಗೋಮುಖ ಗೋಶಾಲೆಗೆ ಹಸ್ತಾಂತರ ಆಗಿವೆ.

ಗೋಮಾಳಕ್ಕೆ ತೆರಳುವ ದಾರಿ ಮುಚ್ಚಿದ್ದು, ಅಲ್ಲಿಗೆ ಹೋಗಿ ಮೇವು ಮತ್ತು ನೀರು ನೀಡುಲು ಆಗುತ್ತಿಲ್ಲ. ಗೋಮಾಳದ ಜಮೀನಿನ ರಸ್ತೆಗೆ ಹಣ ನೀಡಿದರೆ ದಾರಿ ಬಿಡುವುದಾಗಿ ಮಾಲೀಕರು ಹೇಳುತ್ತಾರೆ. ಜಿಲ್ಲಾಧಿಕಾರಿ ಮತ್ತು ಮಧುಗಿರಿ ತಹಶೀಲ್ದಾರ್‌ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನಾ ಆಗಿಲ್ಲ. ಮೇವು ಮತ್ತು ನೀರು ಸರಬರಾಜು ಇಲ್ಲದೇ ಪ್ರತಿನಿತ್ಯ ಜಾಣುವಾರುಗಳು ಮೃತಪಡುತ್ತಿವೆ ಎಂದು ಗೋಮುಖ ಗೋಶಾಲೆ ಅಧ್ಯಕ್ಷ ಮಲ್ಲಿಕಾರ್ಜುನ್ ಹೇಳಿದ್ದಾರೆ.
ಇನ್ನು, "ಗೋಶಾಲೆಗೆ ಮೇವು ಮತ್ತು ನೀರು ಪೂರೈಕೆಗೆ ಸೂಚಿಸಲಾಗಿದೆ. ಸರಕಾರಿ ಗೋಮಾಳದ ರಸ್ತೆ ಕಡಿತ ಮಾಡದಂತೆ ರೈತನಿಗೆ ಎಚ್ಚರಿಕೆ ನೀಡಲಾಗಿದೆ. ಗೋಶಾಲೆಯ ಜಾನುವಾರುಗಳಿಗೆ ಚಿಕಿತ್ಸೆ ನೀಡುವಂತೆ ಪಶು ವೈದ್ಯರಿಗೆ ತಿಳಿಸಲಾಗಿದೆ. ಜಾಣುವಾರುಗಳ ರಕ್ಷಣೆ ಮತ್ತು ಪೋಷಣೆಯ ಬಗ್ಗೆ ಮಾಹಿತಿ ನೀಡುವಂತೆ ಟ್ರಸ್ಟ್ ಅಧ್ಯಕ್ಷರಿಗೆ ಸೂಚಿಸಿದ್ದೇನೆ" ಎಂದು ಕೊರಟಗೆರೆ ತಹಶೀಲ್ದಾರ್ ಮುನಿಶಾಮಿರೆಡ್ಡಿ ತಿಳಿಸಿದ್ದಾರೆ.












Click it and Unblock the Notifications