ಪ್ರಧಾನಿ ಮೋದಿ ಸ್ವಾಗತಿಸಲು ಸಜ್ಜಾದ ಕರ್ನಾಟಕ
ತುಮಕೂರು, ಸೆ.14: ಪ್ರಧಾನಮಂತ್ರಿಯಾದ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಕಾಲಿರಿಸುತ್ತಿದ್ದಾರೆ. ಸೆ.23ರಂದು ಬೆಂಗಳೂರಿಗೆ ಬರಲಿರುವ ಮೋದಿ ಅವರು ರಾಜಭವನದಲ್ಲಿ ತಂಗಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಆದರೆ, ಮೋದಿ ಅವರನ್ನು ಸ್ವಾಗತಿಸುವ ಬಗ್ಗೆ ಸಿದ್ದರಾಮಯ್ಯ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.
ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರು ರಾಜ್ಯದ ವಿವಿಧೆಡೆ ಭಾಷಣ ಮಾಡುವ ಮೂಲಕ ಬಿಜೆಪಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ತುಮಕೂರು ಜಿಲ್ಲೆಯಲ್ಲಿ ಸೆ.24ರಂದು ಏಷ್ಯಾಖಂಡದಲ್ಲೇ ದೊಡ್ಡದೆನ್ನಲಾದ ಫುಡ್ ಪಾರ್ಕಿಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ-4ರ ತುಮಕೂರು-ಶಿರಾ ರಸ್ತೆಯ ಕೋರಾ ಬಳಿ ಇರುವ ವಸಂತನರಸಾಪುರದಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಈ ಅತಿದೊಡ್ಡ ಫುಡ್ ಪಾರ್ಕ್ ನಿರ್ಮಾಣಗೊಳ್ಳುತ್ತಿದೆ.

ತುಮಕೂರು ನಗರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಈ Integrated Food Park Private Limited (IFPPL) ಫುಡ್ ಪಾರ್ಕ್ ಸ್ಥಾಪನೆಗೆ 2012ರಲ್ಲೇ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವಾಲಯದಿಂದ ಅನುಮೋದನೆ ಸಿಕ್ಕಿತ್ತು. 110 ಎಕರೆ ವಿಸ್ತೀರ್ಣದಲ್ಲಿ 113 ಕೋಟಿ ರು ವೆಚ್ಚದಲ್ಲಿ ಫುಡ್ ಪಾರ್ಕ್ ಸ್ಥಾಪನೆ ಮಾಡಲು ಖಾಸಗಿ ಸಂಸ್ಥೆಯೊಂದಕ್ಕೆ ಕರ್ನಾಟಕ ರಾಜ್ಯ ಕೈಗಾರಿಕಾ ಅಭಿವೃದ್ಧಿ ಮಂಡಳಿ ಒಪ್ಪಿಗೆ ಸೂಚಿಸಿತ್ತು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವುದರಿಂದ ಸೆ.24ರಂದು ಎಲ್ಲರ ಕಣ್ಣು ತುಮಕೂರಿನತ್ತ ಹೊರಳುವಂತಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಧೂಳಿಪಟವಾಗಿದ್ದ ಬಿಜೆಪಿ ಮತ್ತೆ ಲೋಕಸಭಾ ಚುನಾವಣೆಯಿಂದ ದೇಶದಲ್ಲಿ ಅಧಿಕಾರ ಹಿಡಿಯುವಂತಾಗಿದೆ.
ರಾಷ್ಟ್ರೀಯ ಉಪಾಧ್ಯಕ್ಷರಾಗಿ ಬಿ.ಎಸ್.ಯಡಿಯೂರಪ್ಪ ಆಯ್ಕೆಯಾಗಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಅಭಿನಂದಿಸಲು ಚಿಂತನೆ ನಡೆದಿದೆ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ಹೇಳಿದ್ದಾರೆ.
ಈ ಕಾರ್ಯಕ್ರಮದ ನಂತರ ಮೋದಿ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ಕೊಡುವ ಕಾರ್ಯಕ್ರಮವೂ ಇದೆ ಎನ್ನಲಾಗಿದೆ. ಸೆ.23ರಂದೇ ಮೋದಿ ಅವರು ಬರುತ್ತಾರಾ? ಅಥವಾ ಸೆ.24ರಂದು ನೇರವಾಗಿ ಬರುತ್ತಾರಾ? ಎಂಬುದರ ಬಗ್ಗೆ ಇನ್ನೂ ಗೊಂದಲವಿದೆ.












Click it and Unblock the Notifications