ಕುಣಿಗಲ್: ಶಾಲೆಯಲ್ಲಿ ಶಿಕ್ಷಕರ ಕೊರತೆ, ಟಿಸಿ ನೀಡುವಂತೆ ಆಗ್ರಹಿಸಿ ಪೋಷಕರ ಪ್ರತಿಭಟನೆ
ತುಮಕೂರು, ಜುಲೈ. 10: ಗ್ರಾಮೀಣ ಭಾಗ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಮಕ್ಕಳು ಶಿಕ್ಷಣ ವಂಚಿತರಾಗುವ ಹಲವು ವರದಿಗಳಿವೆ. ಶಿಕ್ಷಕರ ಕೊರತೆ, ಮೂಲಸೌಲಭ್ಯಗಳು ದೊರೆಯದಿರುವ ಘಟನೆಗಳಿವೆ. ಇಂತಹ ಘಟನೆಗಳಿಗೆ ಕೆಲವರು ಮಾತ್ರ ಪ್ರತಿರೋಧ ತೋರಿಸುತ್ತಾರೆ. ಇಂತಹದ್ದೆ ಘಟನೆ ತುಮಕೂರಿನ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ.
ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದಾಗಿ ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲೆಗೆ ಮುತ್ತಿಗೆ ಹಾಕಿದ್ದು, ವರ್ಗಾವಣೆ ಪ್ರಮಾಣ ಪತ್ರ(ಟಿಸಿ) ಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಘಟನೆ ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿ ಗುನ್ನಾಗರೆ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಗುನ್ನಾಗರೆ ಗ್ರಾಮದಲ್ಲಿನ ಮಹಾತ್ಮ ಗಾಂಧಿ ಅನುದಾನಿತ ಮಾದರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಶಾಲೆಯ ಆಡಳಿತ ವೈಖರಿ ಹಾಗೂ ಬೇಜವಾಬ್ದಾರಿಯನ್ನು ಖಂಡಿಸಿ ಶಾಲೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಶಾಲಾ ಆಡಳಿತದ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಮಕ್ಕಳ ಪೋಷಕರಾದ ನವೀನ್, ರಂಗಪ್ಪ, ಚೇತನ ಅವರ ನೇತೃತ್ವದಲ್ಲಿ ನೂರಾರು ಜನರು ಪ್ರತಿಭಟನೆಗಾಗಿ ಸೇರಿದ್ದರು.
ಮಹಾತ್ಮ ಗಾಂಧಿ ಅನುದಾನಿತ ಮಾದರಿ ಪ್ರೌಢ ಶಾಲೆಯಲ್ಲಿ ಎಂಟು ಶಿಕ್ಷಕರ ಪೈಕಿ, ಕೇವಲ ಇಬ್ಬರು ಶಿಕ್ಷಕರಿದ್ದು ಆರು ಮಂದಿ ಶಿಕ್ಷಕರು ನಿವೃತ್ತಿಯಾಗಿ ಎರಡು ವರ್ಷ ಕಳೆದಿದೆ. ಆದರೂ ಈವರೆಗೂ ಯಾವೊಬ್ಬ ಶಿಕ್ಷಕರನ್ನು ಆಡಳಿತ ಮಂಡಳಿ ನೇಮಕ ಮಾಡಿಕೊಂಡಿಲ್ಲ ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗಿತ್ತು. ಈ ಸಂಬಂಧ ವಿದ್ಯಾರ್ಥಿಗಳ ಪೋಷಕರು ಶಾಲೆಯ ಕಾರ್ಯದರ್ಶಿ ದೊಡ್ಡನಂಜಪ್ಪ ಅವರ ಗಮನಕ್ಕೆ ತಂದಿದ್ದರು. ಆದರೆ ಅವರು ಯಾವುದೇ ಕ್ರಮಕೈಗೊಂಡಿರಲಿಲ್ಲ.
ಹೀಗಾಗಿ ಬೇಸತ್ತ ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಶಾಲೆಯ ಸಹವಾಸವೇ ಬೇಡ ಎಂದು ತಮ್ಮ ಮಕ್ಕಳ ಟಿಸಿ ಕೊಡುವಂತೆ ಹಲವು ದಿನಗಳಿಂದ ಬೇಡಿಕೆಯಿಟ್ಟಿದ್ದರು. ಆದರೆ ಶಾಲಾ ಆಡಳಿತ ಮಂಡಲಿ ಟಿಸಿ ಕೊಡಲಿಲ್ಲ. ಎಂಟನೇ ತರಗತಿಯಲ್ಲಿ ಏಳು ಜನ ವಿದ್ಯಾರ್ಥಿಗಳು, ಎಸ್ಸೆಸ್ಸೆಲ್ಸಿಯಲ್ಲಿ 28 ಜನ ಇದ್ದಾರೆ. ಒಂಬತ್ತನೇ ತರಗತಿಗೆ ಯಾವೋಬ್ಬ ವಿದ್ಯಾರ್ಥಿ ದಾಖಲಾಗಿಲ್ಲ. ಹೀಗಾಗಿ ಉಳಿದ ವಿದ್ಯಾರ್ಥಿಗಳು ಬೇರೆ ಶಾಲೆಗೆ ಸೇರಿಕೊಳ್ಳಲು ತಮ್ಮ ಟಿಸಿ ಕೊಡುವಂತೆ ಪ್ರತಿಭಟನೆ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕ್ಷೇತ್ರಶಿಕ್ಷಣಾಧಿಕಾರಿ ಬೋರೇಗೌಡ, "ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಂತೆ ಶಾಲಾ ಆಡಳಿತ ಮಂಡಳಿಗೆ ಆದೇಶ ನೀಡಲಾಗಿತ್ತು. ಆದರೆ ಈವರೆಗೂ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಲ್ಲಿ ಶಾಲಾ ಆಡಳಿತ ಮಂಡಲಿ ವಿಫಲವಾಗಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಟಿಸಿ ಕೇಳಿದ್ದಾರೆ. ಟಿಸಿ ಕೊಡುವುದು ಆಡಳಿತ ಮಂಡಳಿ ಕರ್ತವ್ಯ" ಎಂದಿದ್ದಾರೆ.












Click it and Unblock the Notifications