ಖಾತೆ ಬದಲಾಯಿಸಿ, ನನ್ನ ದಾರಿ ನನಗೆ : ಸಚಿವ ವೆಂಕಟರಮಣಪ್ಪ
ತುಮಕೂರು, ಅಕ್ಟೋಬರ್ 03: ಕಳೆದ ಮೂರು ದಿನಗಳ ಹಿಂದೆ ತಮಗೆ ಸಿಕ್ಕಿರುವ ಖಾತೆ ಬಗ್ಗೆ ಅಪಸ್ವರ ಎತ್ತಿದ್ದ ಕಾರ್ಮಿಕ ಖಾತೆ ಸಚಿವ ಪಿ ವೆಂಕಟರಮಣಪ್ಪ ಅವರು ಮತ್ತೊಮ್ಮೆ ಅದೇ ರಾಗ ಹಾಡಿದ್ದಾರೆ.
'ಪ್ರಭಾವಿ ಖಾತೆ ನೀಡಿ, ಕಾರ್ಮಿಕ ಖಾತೆ ಬದಲಾಯಿಸಿ, ಇಲ್ಲಾ ನನ್ನ ದಾರಿ ನನಗೆ' ಎಂದು ವರಾತ ಹಿಡಿದಿದ್ದಾರೆ.
ಹೀಗಾಗಿ, ಎಚ್ ಡಿ ಕುಮಾರಸ್ವಾಮಿ ಅವರು ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಖಾಲಿ ಇರುವ 7 ಸ್ಥಾನಗಳನ್ನು ತುಂಬುವುದರ ಜತೆಗೆ, ಹಲವು ಸಚಿವರ ಖಾತೆಗಳನ್ನು ಅದಲು ಬದಲು ಮಾಡುವ ಒತ್ತಡದಲ್ಲಿದ್ದಾರೆ.
ಹೆಚ್ಚುವರಿ ಖಾತೆ ಹೊಂದಿರುವ ಡಿಸಿಎಂ ಜಿ ಪರಮೇಶ್ವರ ಅವರಿಂದ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಬೇರ್ಪಡಿಸುವ ಬಗ್ಗೆ ಕೂಡಾ ಚಿಂತನೆ ನಡೆದಿದೆ. ಎಲ್ಲಕ್ಕೂ ಅಕ್ಟೋಬರ್ 12ರೊಳಗೆ ಉತ್ತರ ಸಿಗಬಹುದು.

ಹಾಗೇ ನೋಡಿದರೆ, ಯಡಿಯೂರಪ್ಪ ಅವರ ಕಾಲದಲ್ಲಿ ಪಕ್ಷೇತರ ಶಾಸಕರಾಗಿದ್ದು, ಕ್ಯಾಬಿನೆಟ್ ಸೇರಿದ್ದ ವೆಂಕಟರಮಣ ಅವರು ರೇಷ್ಮೆ ಹಾಗೂ ಸಣ್ಣ ಕೈಗಾರಿಕಾ ಖಾತೆಯಲ್ಲಿ ತೃಪ್ತಿ ಪಟ್ಟಿದ್ದರು. ತುಮಕೂರು ಜಿಲ್ಲೆಗೆ 8ನೇ ಬಾರಿಗೆ ರೇಷ್ಮೆ ಖಾತೆ ಸಿಕ್ಕಿತ್ತು ಎಂದು ಸಂಭ್ರಮಿಸಿದ್ದರು.
ಆದರೆ, ಈಗ ಕಾಂಗ್ರೆಸ್ ಶಾಸಕರಾಗಿರುವ 69 ವರ್ಷ ವಯಸ್ಸಿನ ವೆಂಕಟರಮಣಪ್ಪ ಅವರು ಕಾರ್ಮಿಕ ಖಾತೆ ಸಚಿವರಾಗಿದ್ದಾರೆ.
ಆದರೆ, ಐಎಎಸ್ ಅಧಿಕಾರಿ ಆದಿತ್ಯ ಬಿಸ್ವಾಸ್ ಅವರ ಕಾರ್ಯವೈಖರಿಯಿಂದ ಬೇಸತ್ತು ವೆಂಕಟರಮಣಪ್ಪ ಅವರು ಖಾತೆ ಬದಲಾವಣೆ ಕೇಳಿದ್ದಾರೆ. ಆದಿತ್ಯ ಬಿಸ್ವಾಸ್ ಅವರು ನನ್ನ ಮಾತಿಗೆ ಬೆಲೆ ಕೊಡುತ್ತಿಲ್ಲ. ನನ್ನ ವಿರುದ್ಧ ಕೆಲಸ ಮಾಡುತ್ತಾರೆ. ನನ್ನ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂದು ಗೋಳಾಡುತ್ತಿದ್ದಾರೆ.
ಸಚಿವ ಸಂಪುಟ ಪುನರ್ ರಚನೆ ಮಾಡುವಾಗ ತಮ್ಮ ಖಾತೆಯನ್ನು ಬದಲಾವಣೆ ಮಾಡಬೇಕು, ಇಲ್ಲದಿದ್ದರೆ, ನನ್ನ ದಾರಿ ನನಗೆ ಎಂದು ವೆಂಕಟರಮಣಪ್ಪ ಹೇಳಿದ್ದಾರೆ.












Click it and Unblock the Notifications