Tumkur: ತುಮಕೂರಿಗೂ 6 'ಅಶ್ವಮೇಧ' ಬಸ್
ಬೆಂಗಳೂರು, ಮಾರ್ಚ್ 08: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ತಿಂಗಳ ಹಿಂದಷ್ಟೇ 100 ಅಶ್ವಮೇಧ (Ashwamedha Bus) ಬಸ್‌ಗಳನ್ನು ಲೋಕಾರ್ಪಣೆ ಮಾಡಿತ್ತು. ಅದರಲ್ಲೀಗ 06 ಅಶ್ವಮೇಧ ಸೇರಿದಂತೆ ಒಟ್ಟು 15 ಬಸ್‌ಗಳನ್ನು ನೀಡಿದೆ.
ಗುರುವಾರ ರಾಜ್ಯ ಸಾರಿಗೆ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತುಮಕೂರಿನಲ್ಲಿ ಜಿಲ್ಲೆಯ ಸಾರಿಗೆ ವಿಭಾಗಕ್ಕೆ 06 ಅಶ್ವಮೇಧ ಬಸ್, 09 ಟಾಟಾ ಬಿಎಸ್-6 ಸೇರಿ ಒಟ್ಟು ಹದಿನೈದು ಬಸ್‌ಗಳ ಕಾರ್ಯಾಚರಣೆಗೆ ಚಾಲನೆ ದೊರೆಯಿತು. ಗೃಹ ಸಚಿವ ಡಾ.ಜಿ.ಪರಮೇಶ್ವರ, ಸಚಿವ ಕೆ.ಎನ್. ರಾಜಣ್ಣ ಹಾಗೂ ಸ್ಥಳೀಯ ಶಾಸಕ ಜ್ಯೋತಿಗಣೇಶ್ ಅವರು ಹಸಿರು ನಿಶಾನೆ ತೋರಿಸಿದರು.

ಸುಮಾರು 2500ಕ್ಕೂ ಹೆಚ್ಚು ಹಳ್ಳಿಗಳನ್ನು ಒಳಗೊಂಡಿರುವ ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿ ಈ ಎಲ್ಲ ಹೊಸ ಬಸ್‌ಗಳು ಕಾರ್ಯಾಚರಣೆ ಆರಂಭಿಸಿವೆ. ಕ್ಲಾಸಿಕ್ ಅಶ್ವಮೇಧ ಬಸ್‌ಗಳಿಗೆ ಎಲ್ಲಿಲ್ಲದ ಸ್ಪಂದನೆ ವ್ಯಕ್ತವಾಗಿದೆ. ಈ ಹಿಂದೆ ಮೈಸೂರು ಹಾಗೂ ಹಾಸನ ಜಿಲ್ಲೆಗಳಿಗೆ ಬೆಂಗಳೂರಿನಿಂದ 'ಅಶ್ವಮೇಧ' ಬಸ್‌ಗಳ ಸೇವೆಗೆ ಚಾಲನೆ ನೀಡಲಾಗಿತ್ತು.
ತುಮಕೂರಿನಲ್ಲಿ ಎಷ್ಟಿವೆ ಬಸ್‌ಗಳು
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ್ ಅವರು, ತುಮಕೂರು ವಿಭಾಗ ವ್ಯಾಪ್ತಿಯಲ್ಲಿ ಕುಣಿಗಲ್, ತುಮಕೂರು ನಗರ, ಶಿರಾ, ತಿಪಟೂರು ಸೇರಿದಂತೆ ಒಟ್ಟು ಏಳು ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಒಟ್ಟು 606 ಬಸ್‌ಗಳಿವೆ. ಇದರಲ್ಲಿ 270 ಸಾಮಾನ್ಯ ಸಾರಿಗೆ ಬಸ್ ಇದ್ದರೆ, 299 ವೇಗಧೂತ, 33 ನಗರ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ. ಇವು ಸೇರಿದಂತೆ ಹೊಸ ಬಸ್‌ಗಳು ಜಿಲ್ಲೆಯಿಂದ ವಿವಿಧೆಡೆ ಸಂಚರಿಸಲಿವೆ.

ಸರ್ಕಾರ ನಾಡಿನ ಮಹಿಳೆಯರಿಗೆ ಉಚಿತ ಸಾರಿಗೆ ಸೇವೆ ನೀಡುವ ಶಕ್ತಿ ಯೋಜನೆ ಜಾರಿಗೆ ತಂದ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಈವರೆಗೆ ರಾಜ್ಯದಲ್ಲಿ 4.86 ಕೋಟಿ ಮಹಿಳೆಯರು ಉಚಿತವಾಗಿ ಸಾರ್ವಜನಿಕ ಬಸ್‌ಗಳಲ್ಲಿ ಓಡಾಡಿದ್ದಾರೆ ಎಂದು ಅವರು ಲೆಕ್ಕ ಕೊಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕೆ.ವಿ.ಅಶೋಕ್, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ವರಾಳೆ ಸೇರಿದಂತೆ ವಿಭಾಗ ಸಾರಿಗೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಈ ಜಿಲ್ಲೆಗಳಲ್ಲಿ 'ಅಶ್ವಮೇಧ' ಬಸ್ ಸಂಚಾರ
KSRTC ಒಟ್ಟು 100 ಅಶ್ವಮೇಧ ಬಸ್‌ಗಳಲ್ಲಿ ಈ ಹಿಂದೆ 10 ಬಸ್‌ಗಳನ್ನು ಹಾಸನ ಜಿಲ್ಲೆಗೆ ನೀಡಲಾಗಿತ್ತು. ಅದಾದ ಬಳಿಕ ಮತ್ತೆ 15 ಬಸ್‌ಗಳನ್ನು ಸಾಂಸ್ಕೃತಿಕ ನಗರ ಮೈಸೂರಿಗೆ ನೀಡಲಾಯಿತು. ಇದೀಗ ತುಮಕೂರು ಜಿಲ್ಲೆಗೆ 6 ಅಶ್ವಮೇಧ್ ಬಸ್‌ಗಳನ್ನು ನೀಡಲಾಗಿದೆ.
ಬೆಂಗಳೂರಿನಿಂದ ಈ ಬಸ್‌ಗಳು ಪ್ರತಿ ಗಂಟೆಗೆ ಒಂದರಂತೆ ಆಯಾ ಜಿಲ್ಲೆಗಳಿಗೆ ಸಾರ್ವಜನಿಕರಿಗೆ ಸಾರಿಗೆ ಸೇವೆ ನೀಡಲಿವೆ. ಅತ್ಯಾಧುನಿಕ ವ್ಯವಸ್ಥೆ ಹೊಂದಿರುವ ಈ ಬಸ್‌ಗಲು ಒಟ್ಟು 3.42 ಮೀಟರ್ ಎತ್ತರವಿದೆ. ಒಟ್ಟು 52 ಆಸನಗಳನ್ನು ಹೊಂದಿದೆ. ಸಾಮಾನ್ಯ ಸಾರಿಗೆ ಬಸ್‌ಗಿಂತಲೂ ವಿಶಾಲ ಒಳಾಂಗಣ ಹೊಂದಿದೆ. ಪ್ರತಿ ಗಂಟೆಗೆ 70km ವೇಗದಲ್ಲಿ ಕಾರ್ಯಾಚರಣೆ ನಡೆಸಲಿದೆ ಎಂದು ನಿಗಮ ತಿಳಿಸಿದೆ.












Click it and Unblock the Notifications