ಸುಟ್ಟಿರುವುದು ಚಡ್ಡಿಯನ್ನಷ್ಟೆ, ರಾಷ್ಟ್ರಧ್ವಜವನ್ನಲ್ಲ: ಡಿಕೆಶಿ
ತುಮಕೂರು, ಜೂನ್ 5: "ಕರ್ನಾಟಕ ರಾಜ್ಯ, ಭಾರತದ ಇತಿಹಾಸವನ್ನು ತಿರುಚುವುದಕ್ಕೆ ನಾಗೇಶ್ ನೇತೃತ್ವದ ಶಿಕ್ಷಣ ಇಲಾಖೆ ಹೊರಟಿದೆ. ಕುವೆಂಪು, ಬಸವಣ್ಣ, ನಾರಾಯಣಗುರು ಅವರಿಗೆ ಅವಮಾನ ಮಾಡುತ್ತಿರುವುದು ಸರಿಯಿಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆರೋಪಿಸಿದರು.
ಎನ್‌ಎಸ್‌ಯುಐ ಕಾರ್ಯಕರ್ತರನ್ನು ಬಂಧಿಸಿ ಜೈಲಿಗೆ ಕಳುಹಿಸಿರುವ ಹಿನ್ನಲೆಯಲ್ಲಿ ತುಮಕೂರು ನಗರದ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಮಾತನಾಡಿದ ನಂತರ ಮಾಧ್ಯಮಗಳ ಜೊತೆ ಅವರು ಮಾತನಾಡಿ, "ಯುವಕರು, ವಿದ್ಯಾರ್ಥಿಗಳು, ಮಠಾಧೀಶರು ಹೋರಾಟ ಮಾಡುತ್ತಿದ್ದಾರೆ. ನಾಗೇಶ್ ಮನೆ ಮುಂದೆ ಚಡ್ಡಿಯನ್ನ ತೆಗೆದುಕೊಂಡು ಹೋಗಿ ಸುಟ್ಟಿರಬಹುದು. ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ವಿರುದ್ಧ ಧಿಕ್ಕಾರ ಕೂಗಿದ್ದಾರೆ, ಅವರೇನು ಯಾರ ಮನೆ ಒಳಗೂ ಹೊಗಿಲ್ಲ" ಎಂದು ಹೇಳಿದರು.
ರಾಷ್ಟ್ರಕವಿ ಕುವೆಂಪು ಬಗ್ಗೆ ಅವಹೇಳನಕಾರಿ ಹೇಳಿಕೆ ಮತ್ತು ಅವರು ರಚಿಸಿರುವ ನಾಡಗೀತೆಯನ್ನು ತಿರುಚಲಾಗಿದೆ ಮತ್ತು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಜಾಗೊಳಿಸಬೇಕು ಮತ್ತು ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಬಂಧಿಸುವಂತೆ ಒತ್ತಾಯಿಸಿ ಎನ್ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಕಾರ್ಯಕರ್ತರು ಸಚಿವ ನಾಗೇಶ್ ಮನೆ ಎದುರು ಗುರುವಾರ ಪ್ರತಿಭಟನೆ ಮಾಡಿದ್ದರು.
ಈ ವೇಳೆ ಆರ್‌ಎಸ್‌ಎಸ್ ಚಡ್ಡಿಯನ್ನು ಕಾರ್ಯಕರ್ತರು ಸುಟ್ಟು ಹಾಕಿದ್ದರು. ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕಿದ ಎನ್ಎಸ್‌ಯುಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಚಡ್ಡಿಗೆ ಬೆಂಕಿ ಹಾಕಿರುವ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ರಾಷ್ಟ್ರಧ್ವಜಕ್ಕೇನು ಅವಮಾನ ಮಾಡಿಲ್ಲ
"ಯುವಕರು ರಾಷ್ಟ್ರ ಧ್ವಜಕ್ಕೆ ಏನು ಅವಮಾನ ಮಾಡಿಲ್ಲ. ಅಲ್ಲದೇ ನಾಗೇಶ್ ಮನೆಯ ಚಡ್ಡಿಯನ್ನು ಸುಟ್ಟಿಲ್ಲ, ಯಾರ ಮನೆಗೆ ಹೋಗಿ ಚಡ್ಡಿ ಕದ್ದು ತಂದು ಸುಟ್ಟಿಲ್ಲ. ಇದು ಪ್ರತಿಭಟನೆಯ ಒಂದು ಸ್ವರೂಪ. ಎಲ್ಲರಿಗೂ ಪ್ರತಿಭಟನೆಯ ಹಕ್ಕಿದೆ. ದೆಹಲಿಯಲ್ಲಿ ಮುಖ್ಯಮಂತ್ರಿ ಮನೆಗೆ ನುಗ್ಗಿದ್ದಾರೆ, ಅವರ ಮೇಲೆ ಯಾವ ಕೇಸ್ ಹಾಕಿದ್ದಾರೆ. ರಾಷ್ಟ್ರದ ರೈತ ಮುಖಂಡನ ಮೇಲೆ ಮೋದಿ ಎಂದು ಹೇಳಿಕೊಂಡು ಬಂದು ಮಸಿ ಬಳೀತಾರೆ, ಅವರ ಮೇಲೆ ಯಾವ ಕ್ರಮ ತೆಗೆದುಕೊಂಡಿದ್ದಾರೆ. ಈ ಹುಡುಗರ ಮೇಲೆ ಬೇಲ್ ಸಿಗಲೇಬಾರದು ಎಂದು ಸೆಕ್ಷನ್ ಗಳನ್ನು ಹಾಕಿದ್ದಾರೆ" ಎಂದು ಡಿ. ಕೆ. ಶಿವಕುಮಾರ್ ಕಿಡಿಕಾರಿದರು.

ರಾಜ್ಯದಲ್ಲಿ ಶಾಂತಿ ಭಂಗ ಉಂಟಾಗಿದೆ
"ಈ ಘಟನೆ ನಡೆದಾಗ ತಕ್ಷಣ ಗೃಹ ಸಚಿವರು ಹೋಗಿದ್ದಾರೆ. ಆದರೆ ಈ ಜಿಲ್ಲೆಯಲ್ಲಿ ಇಬ್ಬರು ದಲಿತರು ಸತ್ತಾಗ ಸಚಿವರು, ಶಾಸಕರು ಎಲ್ಲಿ ಹೋಗಿದ್ದರು. ಯಾರಾದರೂ ದಲಿತರಿಗೆ ರಕ್ಷಣೆ ಕೊಡಲು ಹೋಗಿದ್ದರಾ?. ಈಗ ಮನೆ ಮನೆಗೆ ಹೋಗಿ ಸಿಕ್ಕ ಸಿಕ್ಕ 20 ಜನರನ್ನು ತಂದು ಜೈಲಿಗೆ ಹಾಕಿದ್ದಾರೆ. ಪಠ್ಯ ಪುಸ್ತಕ ವಿಚಾರಕ್ಕೆ ನಿರ್ಮಲಾನಂದ ಸ್ವಾಮೀಜಿಗಳು, ಸಿದ್ದಗಂಗಾ ಶ್ರೀಗಳು, ಸೊನ್ನೇನಹಳ್ಳಿ ಶ್ರೀಗಳು ಮಾತನಾಡಿದ್ದಾರೆ, ಸಾಹಿತಿಗಳು ಮಾತನಾಡಿದ್ದಾರೆ. ಅವರೆಲ್ಲರ ಪ್ರೇರೆಪಣೆ ಈ ಹುಡುಗರಿಗೆ ಸಿಕ್ಕಿದೆ. ಈ ರಾಜ್ಯದಲ್ಲಿ ಅನ್ಯಾಯ, ಅಧರ್ಮ ಆಗುತ್ತಿದೆ, ಶಾಂತಿ ಭಂಗ ಉಂಟಾಗುತ್ತಿದೆ" ಎಂದು ಡಿ. ಕೆ. ಶಿವಕುಮಾರ್ ಆತಂಕ ವ್ಯಕ್ತಪಡಿಸಿದರು.

ಪೊಲೀಸರಿಗೆ ಡಿಕೆಶಿ ಎಚ್ಚರಿಕೆ
"ಕಾರ್ಯಕರ್ತರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲ್ ರಿಜ್ಟೆಕ್ಟ್ ಆಗಿದೆ. ಮೇಲಿನ ಕೋರ್ಟ್ ಹೋಗುತ್ತಾರೆ. ಇದು ಅವರಿಗೇನು ಅವಮಾನ ಅಲ್ಲ. ಇದು ಹೋರಾಟದ ಸ್ವರೂಪ. ಶಿವಮೊಗ್ಗದಲ್ಲಿ ಲೂಟಿ ಮಾಡಿದ್ದಾರೆ. ಅಲ್ಲಿ ಯಾಕ್ ಕೇಸ್ ಹಾಕಿಲ್ಲ, ಎಷ್ಟೋ ಜನ ಸತ್ತರು, ಅವರ ಮೇಲೆ ಯಾಕೆ ಕೇಸು ಹಾಕಿಲ್ಲ. ಅಧಿಕಾರಿಗಳು ರಾಜಕಾರಣಿಗಳ ಮಾತು ಕೇಳಿ ಇಂಥ ಸುಳ್ಳು ಸೆಕ್ಷನ್ ಗಳನ್ನ ಹಾಕುತ್ತಿದ್ದಾರೆ. ಅವರು ಮುಂದೆ ಇದಕ್ಕೆಲ್ಲಾ ಉತ್ತರ ಕೊಡಬೇಕಾಗುತ್ತದೆ. ನೀವೆಲ್ಲಾ ಶಿಕ್ಷೆಯನ್ನ ಅನುಭವಿಸುತ್ತೀರಾ" ಎಂದು ಪೊಲೀಸ್ ಅಧಿಕಾರಿಗಳಿಗೆ ಡಿ. ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು.

ನಮ್ಮ ಹುಡುಗರಿಗೆ ರೌಡಿಗಳಿಂದ ಹಲ್ಲೆ
"ರೌಡಿಶೀಟರ್‌ಗಳನ್ನು ಕರೆಸಿ ನಮ್ಮ ಹುಡುಗರಿಗೆ ಹೊಡೆದಿದ್ದಾರೆ. ಅದಕ್ಕೆ ಸಾಕ್ಷಿ ವಿಡಿಯೋ ಇದೆ. ನಾನು ಚಿಂತನ ಮಂಥನದಲ್ಲಿದ್ದೆ, ಇಲ್ಲದಿದ್ದರೆ ಅವರೇನು ಬರೋದು ನಾವೇ ಬರುತ್ತಿದ್ದೆವು. ಚೆಡ್ಡಿ ಏನು ಅವರೊಬ್ಬರದೇನಾ, ನಾನು ಚೆಡ್ಡಿ ಹಾಕಿಕೊಳ್ಳುತ್ತೀನಿ, ಚೆಡ್ಡಿ ಏನ್ ರಾಷ್ಟ್ರ ಧ್ವಜ ಅಲ್ವಲ್ಲ. ಹುಡುಗರು ಯಾವ್ ಮನೆಗೆ ಬೆಂಕಿ ಹಾಕಿದ್ದಾರೆ ತೋರಿಸಲಿ ವಿಡಿಯೋ ಇದ್ದರೆ. ನಮ್ಮ ಹತ್ತಿರಾನೂ ವಿಡಿಯೋ ಇದೆ. ಕೇವಲ ಚಡ್ಡಿಗೆ ಮಾತ್ರ ಬೆಂಕಿ ಹಾಕಿರೋದು ಅವರು, ಅದು ಆರ್.ಎಸ್.ಎಸ್ ಸಮವಸ್ತ್ರ ಎಂದು ಹೇಗೆ ಹೇಳ್ತೀರಾ? ಅದರ ಮೇಲೆ ಏನಾದರೂ ಸೀಲ್ ಇದ್ಯಾ. ಹುಡುಗರ ಮೇಲಿನ ಹಲ್ಲೆ ಕುರಿತು ನಾವು ದೂರು ಕೊಟ್ಟೀದ್ದೀವಿ, ಆದರೆ ಎಫ್ಐಆರ್ ಹಾಕಿಲ್ಲ" ಎಂದು ಡಿ. ಕೆ. ಶಿವಕುಮಾರ್ ಆಕ್ರೋಶ ಹೊರ ಹಾಕಿದರು.
ರಾಜ್ಯಸಭೆ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, "ನಾವು ಗೆಲ್ಲುತ್ತೀವೋ, ಸೋಲುತ್ತೀವೋ, ನಮ್ಮ ರಾಜಕಾರಣ ನಾವು ಮಾಡುತ್ತೇವೆ. ಎಲ್ಲರೂ ಕುಳಿತುಕೊಂಡು ಚರ್ಚೆ ಮಾಡಿ ನಮ್ಮ ಪಕ್ಷದ ಹಿತದೃಷ್ಟಿಯಿಂದ ನಾಮಪತ್ರ ಸಲ್ಲಿಸಿದ್ದೇವೆ. ನಾವು ಯಾರನ್ನೂ ಸಂಪರ್ಕಸಿಲ್ಲ, ಸಂಪರ್ಕಿಸೋದು ಇಲ್ಲ. ಇಡೀ ಪಕ್ಷ ಒಗ್ಗಟ್ಟಿನಿಂದ ಎರಡನೇ ಅಭ್ಯರ್ಥಿಯನ್ನ ತೀರ್ಮಾನ ಮಾಡಿದ್ದೀವಿ. ನಮ್ಮ ಓಟ್ ನಾವು ಕಾಪಾಡಿಕೊಳ್ಳುತ್ತೇವೆ. ಖರ್ಗೆ ಸಾಹೇಬರೂ ಏನೂ ಮಾತಾಡಿಲ್ಲ, ಯಾರ ಬೆಂಬಲಕ್ಕೂ ನಿಂತಿಲ್ಲ, ಆತ್ಮಸಾಕ್ಷಿ ಮತ ಕೇಳುತ್ತಿದ್ದೇವೆ, ಏನಾಗುತ್ತೋ ನೋಡೋಣ" ಎಂದರು.












Click it and Unblock the Notifications