ತುಮಕೂರಿನಲ್ಲಿ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ತಾಯಿ ಉಸಿರು ನಿಲ್ಲಿಸಿದ ಅಣ್ಣ-ತಂಗಿ!
ತುಮಕೂರು, ಫೆಬ್ರವರಿ 18: ಅನೈತಿಕ ಸಂಬಂಧಗಳು ಅದೆಷ್ಟೋ ಅಪರಾಧ ಕೃತ್ಯಗಳಿಗೆ ಎಡೆ ಮಾಡಿಕೊಟ್ಟಿರುವ ಘಟನೆಗಳು ದಿನನಿತ್ಯ ವರದಿ ಆಗುತ್ತಲೇ ಇರುತ್ತವೆ. ಹೆಣ್ಣು-ಗಂಡಿನ ನಡುವಿನ ಮೋಹಕ್ಕೆ ಮೂರನೇಯವರು ಮಣ್ಣಾದ ಉದಾಹರಣೆಗಳೂ ಸಿಗುತ್ತವೆ. ಅಂಥದ್ದೇ ಒಂದು ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಸಜ್ಜನರಾವ್ ಬೀದಿಯಲ್ಲಿ ಸಂಪಿಗೆ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ. 45 ವರ್ಷದ ಸಾವಿತ್ರಮ್ಮ ಎಂಬ ಮಹಿಳೆಯ ಸಾವಿಗೆ ಹೆತ್ತ ಮಗಳೇ ಕಾರಣ ಎಂಬ ಸತ್ಯ ತೆರೆದುಕೊಂಡಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ತಾಯಿಯನ್ನು ಮಗಳೇ ಕೊಂದು ಹಾಕಿರುವುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ವಾಡಿಕೆಯಲ್ಲಿ ಅವರದ್ದು ಅಣ್ಣ-ತಂಗಿ ಸಂಬಂಧ. ಆದರೆ 21 ವರ್ಷದ ಶೈಲಜಾ ಮತ್ತು 26 ವರ್ಷದ ಪುನೀತ್ ಅನೈತಿಕ ಸಂಬಂಧದಲ್ಲಿ ತೊಡಗಿಕೊಂಡಿದ್ದರು. ಶೈಲಜಾ ತಾಯಿಯೇ ಸಾವಿತ್ರಮ್ಮ. ಈ ಸಾವಿತ್ರಮ್ಮನ ಅಕ್ಕನ ಮಗನೇ ಪುನೀತ್. ಪುನೀತ್ ಮತ್ತು ಶೈಲಜಾ ಅಣ್ಣ-ತಂಗಿಯಂತಿರುವುದರ ಬದಲಿಗೆ ಬೇರೆಯದ್ದೇ ನಂಟು ಬೆಸೆದುಕೊಂಡಿದ್ದರು. ಈ ವಿಷಯ ತಿಳಿದು ಬುದ್ಧಿ ಹೇಳಿದ ತಾಯಿ ಕಥೆಯನ್ನು ಸ್ವತಃ ಮಗಳೇ ಮುಂದೆ ನಿಂತು ಮುಗಿಸಿದ್ದಾಳೆ.

ಸಂಪಿಗೆ ಬಿದ್ದು ಮಹಿಳೆ ಸಾವು ಪ್ರಕರಣ
ಕಳೆದ ಜನವರಿ 30ರಂದು ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಸಜ್ಜನರಾವ್ ಬೀದಿಯಲ್ಲಿರುವ ಸಂಪಿಗೆ 45 ವರ್ಷದ ಸಾವಿತ್ರಮ್ಮ ಬಿದ್ದು ಮೃತಪಟ್ಟಿದ್ದರು. ಕಾಲು ಜಾರಿ ಸಂಪಿಗೆ ಬಿದ್ದು ಸಾವಿತ್ರಮ್ಮ ಸಾವನ್ನಪ್ಪಿದ್ದಾರೆ ಎಂದು ಕೊರಟಗೆರೆ ಪೊಲೀಸರೂ ಸಹ ಪ್ರಕರಣ ದಾಖಲಿಸಿಕೊಂಡಿದ್ದರು.

ಸಾವಿನ ಹಿಂದೆ ಅನೈತಿಕ ಸಂಬಂಧದ ಕಥೆ
ಅಕ್ಕ-ತಂಗಿಯ ಮಕ್ಕಳಾದ ಶೈಲಜಾ ಮತ್ತು ಪುನೀತ್ ನಡುವೆ ಇರಬೇಕಾಗಿದ್ದು ಅಣ್ಣ-ತಂಗಿಯ ಸಂಬಂಧ. ಹೊಸ ಜಗತ್ತಿನ ಎದುರು ಅಣ್ಣ-ತಂಗಿಯಂತಿದ್ದ ಇಬ್ಬರೂ, ಮನೆಯಲ್ಲಿ ಮಾತ್ರ ಅನೈತಿಕ ಸಂಬಂಧದಲ್ಲಿ ತೊಡಗುತ್ತಿದ್ದರು. ಇಬ್ಬರ ನಡುವಳಿಕೆ ಬಗ್ಗೆ ತಿಳಿದ ನಂತರ ಮೆಸೇಜ್ ಮತ್ತು ಕಾಲ್ ಮಾಡದಂತೆ ಸಾವಿತ್ರಮ್ಮ ಇಬ್ಬರಿಗೂ ಬೈದು ಬುದ್ಧಿ ಹೇಳಿದ್ದರು. ಪುನೀತ್ ತಾಯಿ ಕೂಡ ಮಗನಿಗೆ ಎಚ್ಚರಿಕೆ ನೀಡಿದ್ದರು. ಹೀಗೆ ತಮ್ಮ ಸಂಬಂಧಕ್ಕೆ ಅಡ್ಡಿಯಾದ ತಾಯಿ ಸಾವಿತ್ರಮ್ಮನನ್ನು ಮಗಳು ಶೈಲಿಜಾ ಮತ್ತು ಪುನೀತ್ ಕತ್ತು ಹಿಸುಕಿ ಕೊಂದಿದ್ದಾರೆ. ನಂತರದಲ್ಲಿ ಆಕೆ ಸಂಪಿಗೆ ಬಿದ್ದು ಸತ್ತಿದ್ದಾರೆ ಎಂದು ಬಿಂಬಿಸಿದ್ದಾರೆ.

ಪೊಲೀಸರಲ್ಲಿ ಹುಟ್ಟಿಕೊಂಡ ಅನುಮಾನ
ಸಂಪಿಗೆ ಬಿದ್ದು ಮಹಿಳೆ ಸಾವನ್ನಪ್ಪಿರುವ ಪ್ರಕರಣದ ಬಗ್ಗೆ ಕೊರಟಗೆರೆ ಪೊಲೀಸರಲ್ಲಿ ಮೊದಲೇ ಕೊಂಚ ಅನುಮಾನವಿತ್ತು. ಇದರ ಮಧ್ಯೆ ಸಾವಿತ್ರಮ್ಮ ಸಾವಿನ ನಂತರದಲ್ಲಿ ಶೈಲಜಾ ಮತ್ತು ಪುನೀತ್ ಬಾಂಧವ್ಯ ಮತ್ತಷ್ಟು ಬಲವಾಗಿ ಬೆಸೆದುಕೊಂಡಿತು. ಈ ಅಣ್ಣ-ತಂಗಿ ನಡುವಿನ ನಡುವಳಿಕೆ ಬಗ್ಗೆ ಪೊಲೀಸರಲ್ಲಿ ಅನುಮಾನ ಮೂಡಿತು. ಇಬ್ಬರನ್ನೂ ಕರೆ ತಂದು ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಅಸಲಿ ಕಥೆ ಬಯಲಾಗಿದೆ.

ಶೈಲಿಜಾ-ಪುನೀತ್ ಅನ್ನು ಬಂಧಿಸಿದ ಪೊಲೀಸರು
ಅಣ್ಣ-ತಂಗಿ ನಡುವಿದ್ದ ಅಸಲಿ ಸಂಬಂಧವನ್ನು ಪತ್ತೆ ಮಾಡಿದ ಕೊರಟಗೆರೆ ಪೊಲೀಸರು ವಿಚಾರಣೆ ನಂತರ ಆರೋಪಿಗಳಾದ ಪುನೀತ್ ಮತ್ತು ಶೈಲಜಾರನ್ನು ಬಂಧಿಸಿದ್ದಾರೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.












Click it and Unblock the Notifications