Pavagada Solar Park: ರೈತರು ಜಮೀನು ನೀಡಿದರೆ 10 ಸಾವಿರ ಎಕರೆಗೆ ಸೋಲಾರ್ ಪಾರ್ಕ್ ವಿಸ್ತರಣೆ: ಡಿ.ಕೆ ಶಿವಕುಮಾರ್
ತುಮಕೂರು, ಜೂನ್ 14: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಇಂಧನ ಸಚಿವ ಕೆ.ಜೆ. ಜಾರ್ಜ್ ಬುಧವಾರ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ತಿರುಮಣಿ ಸಮೀಪದಲ್ಲಿರುವ ಸೋಲಾರ್ ಪಾರ್ಕ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ರೈತರು ಜಮೀನು ನೀಡಿದರೆ ಸೋಲಾರ್ ಪಾರ್ಕ್ ಅನ್ನು 10000 ಎಕರೆಗೆ ವಿಸ್ತರಣೆ ಮಾಡುತ್ತೇವೆ ಎಂದು ಹೇಳಿದರು.
ಸೋಲಾರ್ ಪಾರ್ಕ್ ಬಳಿ ಮಾತನಾಡಿದ ಅವರು, ಸದ್ಯ ಸೋಲಾರ್ ಪಾರ್ಕ್ ಅನ್ನು 10 ಸಾವಿರ ಎಕರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. "ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಜೊತೆಗೂಡಿ ಹೆಲಿಕಾಪ್ಟರ್ ಮೂಲಕ ಸೋಲಾರ್ ಪಾರ್ಕ್ ವೀಕ್ಷಣೆ ಮಾಡಿದ್ದೇನೆ. ಸೋಲಾರ್ ಪಾರ್ಕ್‌ಗೆ ಜಮೀನು ನೀಡಿರುವ ರೈತರು ಸಮಾಧಾನದಿಂದ ಇದ್ದಾರೆ. ಒಪ್ಪಂದ ಮಾಡಿಕೊಂಡಿರುವ ಪ್ರಕಾರ ಜಮೀನು ನೀಡಿರುವ ರೈತರ ಖಾತೆಗೆ ಹಣ ಹೋಗುತ್ತಿದೆ, ಪ್ರತಿ ಎಕರೆ ಜಮೀನಿಗೆ ವರ್ಷಕ್ಕೆ 25 ಸಾವಿರ ರೂಪಾಯಿ ಬಾಡಿಗೆ ಪಡೆಯುತ್ತಿದ್ದಾರೆ" ಎಂದು ಮಾಹಿತಿ ನೀಡಿದರು

ರಾಜ್ಯದ ಸೋಲಾರ್ ಪಾರ್ಕ್ ವಿಶ್ವದಲ್ಲೇ ಮೊದಲನೇ ಸ್ಥಾನದಲ್ಲಿತ್ತು, ಈಗ ಕರ್ನಾಟಕ ಮತ್ತು ರಾಜಸ್ಥಾನದ ನಡುವೆ ಪೈಪೋಟಿಯಿದೆ. ಈಗ ಸೋಲಾರ್ ಪಾರ್ಕ್ ಅನ್ನು 10 ಸಾವಿರ ಎಕರೆಗೆ ವಿಸ್ತರಣೆ ಮಾಡಲು ನಿರ್ಧಾರ ಮಾಡಿದ್ದೇವೆ. ಮೊದಲು ಜಮೀನು ನೀಡಿದ ಮಾದರರಿಯಲ್ಲಿ ಈಗ ಜಮೀನು ನೀಡಲು ರೈತರು ಮುಂದೆ ಬಂದರೆ ಸೋಲಾರ್ ಪಾರ್ಕ್ ವಿಸ್ತರಣೆ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯದಾದ್ಯಂತ ಕುಸುಮ ಯೋಜನೆ ವಿಸ್ತರಣೆ ಜಾರಿ ಮಾಡಲು ಯೋಜನೆ ಮಾಡುತ್ತಿದ್ದೇವೆ. ರೈತರ ಪಂಪ್‌ಸೆಟ್‌ಗೆ ಅವರೇ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಲು ಯೋಜನೆ ರೂಪಿಸಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಏನಿದು ಕುಸುಮ್ ಯೋಜನೆ?
ತಮ್ಮ ಜಮೀನಿನಲ್ಲಿ ಸೋಲಾರ್ ಪಂಪ್ ಅಳವಡಿಸುವ ರೈತರಿಗೆ ಶೇ. 90ರಷ್ಟು ಸಹಾಯಧನ ದೊರೆಯಲಿದೆ. ಸೋಲಾರ್ ವಿದ್ಯುತ್ ಬಳಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ 2019ರಲ್ಲಿ ಈ ಯೋಜನೆಯನ್ನು ಪರಿಚಯಿಸಿದೆ.
ಈ ಯೋಜನೆಯಡಿ ಕೃಷಿಕರು ಸೋಲಾರ್ ಪಂಪ್ ಅಳವಡಿಸಿಕೊಂಡು ವಿದ್ಯುತ್ ಮತ್ತು ಕಾರ್ಮಿಕರಿಗೆ ತಗುಲುವ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದು. ಜತೆಗೆ ಕಡಿಮೆ ಖರ್ಚಿನಲ್ಲಿ ನೀರಾವರಿ ಕೃಷಿ ಮಾಡಬಹುದಾಗಿದೆ. ಸೋಲಾರ್ ಪಂಪ್ ಅಳವಡಿಕೆಗೆ ಸರ್ಕಾರ ಶೇ. 90ರಷ್ಟು ಆರ್ಥಿಕ ನೆರವು ನೀಡುವುದಾಗಿ ತಿಳಿಸಿದೆ.
ಸುರ್ಜೇವಾಲಾ-ಬಿಬಿಎಂಪಿ ಸಭೆ ಬಗ್ಗೆ ಸ್ಪಷ್ಟನೆ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸಭೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಭಾಗವಹಿಸಿದ್ದ ಬಗ್ಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಡಿಕೆ ಶಿವಕುಮಾರ್ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಯಾರು ಯಾರಿಗಾದರೂ ದೂರು ಕೊಡಲಿ, ನಾನು ಬೆಂಗಳೂರು ನಗರ ವೀಕ್ಷಣೆ ಮಾಡುತ್ತಿದ್ದೆ, ನನ್ನನ್ನು ಕರೆದುಕೊಂಡು ಹೋಗಲು ಅವರು ಬಂದಿದ್ದರೂ, ಬಿಬಿಎಂಪಿ ಸಭೆಗೂ ಸುರ್ಜೆವಾಲಾ ಅವರಿಗೂ ಯಾವುದೇ ಸಂಬಂಧವಿಲ್ಲ, ನಾನು ಯಾವುದೇ ಸಭೆ ನಡೆಸಿಲ್ಲ ಎಂದು ಹೇಳಿದರು.












Click it and Unblock the Notifications