Modi Cabinet: ಸೋಮಣ್ಣಗೆ ಖುಲಾಯಿಸಿದ ಅದೃಷ್ಟ: ಕೇಂದ್ರದಲ್ಲಿ ಸಚಿವ ಸ್ಥಾನ ಪಟ್ಟ ಸಿಕ್ಕಿದ್ದೇಗೆ..?
ಬೆಂಗಳೂರು, ಜೂನ್ 09: ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ನೂತನ ಕೇಂದ್ರ ಸಚಿವ ಸಂಪುಟ ರಚನೆಯಾಗಲಿದೆ. ಈ ಸಚಿವ ಸಂಪುಟದಲ್ಲಿ ರಾಜ್ಯದ ಐವರು ಸಂಸದರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನುವುದು ಖಾತ್ರಿಯಾಗಿದೆ.
ಮಂಡ್ಯ ಸಂಸದ ಹೆಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಹಾಗೂ ನಿರ್ಮಲಾ ಸೀತಾರಾಮನ್ ಕೇಂದ್ರ ಸಂಪುಟದಲ್ಲಿ ನೂತನ ಸಚಿವರಾಗಲಿದ್ದಾರೆ. ಕಳೆದೆರಡು ಬಾರಿ ಕೇಂದ್ರ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ ಹಾಗೂ ಶೋಭಾ ಕರಂದ್ಲಾಜೆಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡಲಾಗುತ್ತಿದೆ.

ಆದರೆ ಮೊದಲ ಬಾರಿಗೆ ಸಂಸತ್ತಿಗೆ ಹೋದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ವಿ. ಸೋಮಣ್ಣ ಕೇಂದ್ರ ಸಚಿವರಾದ ಖುಷಿಯಲ್ಲಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮೊದಲ ಬಾರಿಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿದ್ದು, ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಫುಲ್ ಖುಷಿಯಾಗಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸೋಲು ಕಂಡಿದ್ದ ವಿ.ಸೋಮಣ್ಣ, ಲೋಕಸಭಾ ಚುನಾವಣೆ ಮೂಲಕ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.
ಬೇರೆ ಕ್ಷೇತ್ರದಿಂದ ಬಂದ ವಿ.ಸೋಮಣ್ಣ ಅವರನ್ನು ತುಮಕೂರಿನ ಜನರು ಒಪ್ಪಿ ತಮ್ಮ ಕ್ಷೇತ್ರದ ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ. ಇದೇ ಖುಷಿಯಲ್ಲಿದ್ದ ವಿ. ಸೋಮಣ್ಣಗೆ ಮತ್ತೆ ಅದೃಷ್ಟ ಖುಲಾಯಿಸಿದ್ದು, ಕೇಂದ್ರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿದೆ.

ಈ ಸಂತೋಷವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿರುವ ವಿ.ಸೋಮಣ್ಣ, ನನಗೆ ಕೇಂದ್ರ ಸಚಿವ ಸ್ಥಾನ ಸಿಗುವ ನಿರೀಕ್ಷೆ ಖಂಡಿತ ಇರಲಿಲ್ಲ. ನನಗೆ ಕರೆ ಬಂದಿದ್ದೇ 11 ಗಂಟೆಗೆ. ಕರೆದರು ನಾನು ಅಲ್ಲಿಗೆ ಹೋದೆ. ನಿನ್ನ ಕೇಂದ್ರ ಸಚಿವ ಮಾಡಿದ್ದೇವೆ ಅಂದರು. ಆನಂದ ಆಯ್ತು. ಇನ್ನು ಮುಂದೆ ಜವಾಬ್ದಾರಿ ಜಾಸ್ತಿ ಆಯ್ತು. ಅದನ್ನು ನಿರ್ವಹಣೆ ಮಾಡುತ್ತೇವೆ. ಯಾವ ಖಾತೆಯೂ ನಿರೀಕ್ಷೆಯು ನನಗಿಲ್ಲ ಎಂದರು.
ನನ್ನ 45 ವರ್ಷದ ಅನುಭವದಿಂದ ಮೋದಿ ಸಂಪುಟದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ರಾಷ್ಟ್ರ ನಾಯಕರು ಹಾಗೂ ರಾಜ್ಯ ನಾಯಕರ ಸಮನ್ವಯತೆ ಮೇರೆಗೆ ನನಗೆ ಇಂದು ಜವಾಬ್ದಾರಿ ವಹಿಸಿದ್ದಾರೆ. ಇದನ್ನು ಸವಾಲು ಎಂದು ಸ್ವೀಕಾರ ಮಾಡಿ ಕೆಲಸ ಮಾಡುತ್ತೇನೆ. ಕೇಂದ್ರ ನಾಯಕರು ಯಾವತ್ತು ಕೈ ಬಿಡೋದಿಲ್ಲ ಅಂತ ಹೇಳಿದ್ದೆ. ಈಗ ಅದು ನಿಜ ಆಗಿದ್ದು, ಸರ್ಕಾರ ಕೊಡುವ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.












Click it and Unblock the Notifications