ಶಿರಾದಲ್ಲಿ ಅತ್ಯಾಧುನಿಕ ಕಸಾಯಿ ಖಾನೆ ಆರಂಭಕ್ಕೆ ಮುಹೂರ್ತ ಫಿಕ್ಸ್
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚೀಲನಹಳ್ಳಿ ಬಳಿ 20 ಎಕರೆ ವಿಸ್ತೀರ್ಣದಲ್ಲಿ ಅತ್ಯಾಧುನಿಕ ಕಸಾಯಿಖಾನೆ ನಿರ್ಮಾಣವಾಗುತ್ತಿದ್ದು ಡಿಸೆಂಬರ್ ವೇಳೆಗೆ ಕಾರ್ಯಾರಂಭ ಮಾಡಲಿದೆ. ಘೋಷಣೆಯಾದ ಆರು ವರ್ಷಗಳ ಬಳಿಕ ಕಾಮಗಾರಿ ಮುಕ್ತಾಯವಾಗಿದ್ದು, ಆಧುನಿಕ ಯಂತ್ರಗಳನ್ನು ಅಳವಡಿಸುವ ಕೆಲಸ ಬಾಕಿ ಇದೆ.
ಡಿಹೆಚ್ ವರದಿ ಮಾಡಿರುವ ಪ್ರಕಾರ, ಅಕ್ಟೋಬರ್ ತಿಂಗಳಿನಲ್ಲಿ ಯಂತ್ರಗಳ ಅಳವಡಿಕೆ ಮಾಡಲಿದ್ದು, ಡಿಸೆಂಬರ್ ತಿಂಗಳಿನಲ್ಲಿ ಉದ್ಘಾಟನೆಯಾಗಲಿದೆ. ಕುರಿ ಮತ್ತು ಮೇಕೆಗಳಿಗಾಗಿ ಆಧುನಿಕ ರೀತಿಯಲ್ಲಿ ಕಸಾಯಿಖಾನೆ ನಿರ್ಮಾಣ ಮಾಡಲಾಗಿದೆ.

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ (KSWDC) ಅಧಿಕಾರಿಗಳ ಪ್ರಕಾರ, ಕುರಿ ಮತ್ತು ಮೇಕೆಗಳಿಗಾಗಿಯೇ ಮೀಸಲಾದ ಮೊದಲ ಅತ್ಯಾಧುನಿಕ ಕಸಾಯಿ ಖಾನೆ ಇದಾಗಲಿದೆ. ಮಾಂಸಕ್ಕಾಗಿ ಬಳಸುವ ಕುರಿ ಮತ್ತು ಮೇಕೆಗಳ ಆಯ್ಕೆಯಿಂದ ಮೊದಲಾಗಿ, ಸ್ವಚ್ಛತೆ, ಕಟಿಂಗ್ ಮತ್ತು ಪ್ಯಾಕೇಜಿಂಗ್ ಹಾಗೂ ತಾಜ್ಯ ವಿಲೇವಾರಿ ಸಂಪೂರ್ಣವಾಗಿ ಯಾಂತ್ರಿಕೃತವಾಗಿದ್ದು, ಮಾನವರ ಹಸ್ತಕ್ಷೇಪದಿಂದ ಮುಕ್ತವಾಗಿರಲಿದೆ.
ಶಿರಾ ತಾಲೂಕಿನಲ್ಲೇ ನಿರ್ಮಾಣ ಯಾಕೆ?
ರಾಜ್ಯದಲ್ಲಿಯೇ ಅತಿ ಹೆಚ್ಚು ಕುರಿ ಮತ್ತು ಮೇಕೆಗಳನ್ನು ಹೊಂದಿರುವುದು ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳು. ಎರಡೂ ಜಿಲ್ಲೆಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಶಿರಾ ತಾಲೂಕಿನಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಬೆಳಗಾವಿ ಜಿಲ್ಲೆ ಕೂಡ ಹೆಚ್ಚಿನ ಸಂಖ್ಯೆಯ ಕುರಿ ಮತ್ತು ಮೇಕೆಗಳನ್ನು ಹೊಂದಿದೆ.
ತುಮಕೂರು ಜಿಲ್ಲೆಯಲ್ಲಿ ಸುಮಾರು 18 ಲಕ್ಷ ಮೇಕೆ ಮತ್ತು ಕುರಿಗಳಿದ್ದು, ಶಿರಾ ತಾಲೂಕು ಒಂದರಲ್ಲೇ 8 ಲಕ್ಷ ಕುರಿ ಮತ್ತು ಮೇಕೆಗಳನ್ನು ಹೊಂದಿದೆ. ಈ ಮೂಲಕ ರಾಜ್ಯದಲ್ಲೇ ಅತಿ ಹೆಚ್ಚು ಕುರಿ - ಮೇಕೆ ಹೊಂದಿರುವ ತಾಲೂಕು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆಧುನಿಕ ಕಸಾಯಿಖಾನೆಯಾಗಿ 44.63 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಇದರಲ್ಲಿ ಯಂತ್ರಗಳಿಗಾಗಿ 21.1 ಕೋಟಿ ರೂಪಾಯಿ ವ್ಯಯಿಸಲಾಗುತ್ತದೆ. ಕಟ್ಟಡ ನಿರ್ಮಾಣ ಪೂರ್ಣವಾಗಿದ್ದು, ಯಂತ್ರಗಳ ಅಳವಡಿಕೆ ಬಾಕಿ ಇದೆ.
ಈ ಭಾಗದ ಕುರಿಗಾಹಿಗಳಿಗೆ ಅನುಕೂಲ
ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಕುರಿ ಮತ್ತು ಮೇಕೆ ಸಾಕಾಣಿಕೆದಾರರು ಇಲ್ಲಿಗೆ ನೇರವಾಗಿ ಕುರಿ - ಮೇಕೆಗಳನ್ನು ಮಾರಾಟ ಮಾಡಬಹುದಾಗಿದೆ. ತುಮಕೂರು ಜಿಲ್ಲೆಯ 45-55 ಸಾವಿರ ಕುರಿ ಸಾಕಾಣಿಕೆ ಕುಟುಂಬಗಳು ಮತ್ತು ಚಿತ್ರದುರ್ಗ ಜಿಲ್ಲೆಯ 50 ಸಾವಿರ ಕುಟುಂಬಗಳಿಗೆ ಈ ಕಸಾಯಿಖಾನೆ ಪ್ರಯೋಜನಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಕುರಿ ಮಾಂಸ ತನ್ನ ವಿಶಿಷ್ಟ ರುಚಿಗೆ ಜನಜನಿತವಾಗಿದ್ದು, ಗ್ರಾಹಕರಿಗೆ ಉತ್ತಮ ಗುಣಮಟ್ಟದ, ರೋಗಮುಕ್ತ ಮಾಂಸ ಒದಗಿಸುವ ಉದ್ದೇಶದಿಂದ ಸಿರಾ ತಾಲೂಕಿನಲ್ಲಿ ಆಧುನಿಕ ಕಸಾಯಿಖಾನೆ ಸ್ಥಾಪಿಸಲಾಗಿದೆ ಶಿರಾ ಶಾಸಕ ಟಿ.ಬಿ. ಜಯಚಂದ್ರ ಹೇಳಿರುವುದಾಗಿ ಡಿಹೆಚ್ ವರದಿ ಮಾಡಿದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಅನಧಿಕೃತ ಮತ್ತು ಅಕ್ರಮ ಕಸಾಯಿಖಾನೆಗಳನ್ನು ಕೊನೆಗಾಣಿಸಲು ನಿರ್ಧರಿಸಲಾಗಿದ್ದು, ಅಕ್ರಮ ಕಸಾಯಿಖಾನೆಗಳಲ್ಲಿ ಅವೈಜ್ಞಾನಿಕವಾಗಿ ಪ್ರಾಣಿಗಳನ್ನು ಕಡಿಯಲಾಗುತ್ತಿದೆ ಎಂದು ಹೇಳಿದರು.
ಪಿಪಿಪಿ ಮಾದರಿಯಲ್ಲಿ ಕಾಮಗಾರಿಗಳು ಪೂರ್ಣಗೊಳ್ಳುತ್ತಿದ್ದು, ಮಾಂಸ ಸಂಸ್ಕರಣೆ ಮತ್ತು ವಿತರಣೆಯಲ್ಲಿ ಪರಿಣತಿ ಹೊಂದಿರುವ ಬೆಂಗಳೂರು ಮೂಲದ ಧಾರ್ಮಿಕ್ ವೈಬ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಸರ್ಕಾರ ಗುತ್ತಿಗೆ ನೀಡಿದೆ ಎಂದು ಜಯಚಂದ್ರ ಹೇಳಿದರು.
ವಿದೇಶಗಳಿಗೂ ರಫ್ತು
ಪ್ರಾಣಿಗಳನ್ನು (ಕುರಿ ಮತ್ತು ಮೇಕೆಗಳು) ಮಾನವೀಯವಾಗಿ ಮತ್ತು ನೋವುರಹಿತ ರೀತಿಯಲ್ಲಿ ಹತ್ಯೆ ಮಾಡಲಾಗುವುದು. ಪಶುವೈದ್ಯರ ತಂಡವು 24 ರಿಂದ 36 ಗಂಟೆಗಳ ಕಾಲ ಪ್ರಾಣಿಗಳನ್ನು ವೀಕ್ಷಿಸುತ್ತದೆ. 5,000 ಪ್ರಾಣಿಗಳನ್ನು ಕಸಾಯಿಖಾನೆಗೆ ಆಯ್ಕೆ ಮಾಡುವ ಮೊದಲು ಅವುಗಳನ್ನು ವೀಕ್ಷಿಸಲು ಸೌಲಭ್ಯದಲ್ಲಿ ಇರಿಸಬಹುದು. ಅಸ್ವಸ್ಥ ಕುರಿ, ಮೇಕೆಗಳನ್ನು ಪ್ರತ್ಯೇಕಿಸಿ 20 ದಿನಗಳವರೆಗೆ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತದೆ. ಈ ಪ್ರಕ್ರಿಯೆಯು ಗ್ರಾಹಕರಿಗೆ ಗುಣಮಟ್ಟದ ಮತ್ತು ರೋಗರಹಿತ ಮಾಂಸ ಪೂರೈಸಲು ಸಹಾಯ ಮಾಡುತ್ತದೆ.
ಘಟಕದಲ್ಲಿ ಪ್ರತಿದಿನ ಸುಮಾರು 1,500 ಕುರಿ ಮತ್ತು ಮೇಕೆಗಳನ್ನು ಕಡಿಯುವ ಮತ್ತು 2.5 ಟನ್ ಮಾಂಸವನ್ನು ಉತ್ಪಾದಿಸುವ ಸೌಲಭ್ಯವಿದ್ದು, ಸುಮಾರು 850 ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಆರಂಭದಲ್ಲಿ ದಿನಕ್ಕೆ 800 ರಿಂದ 1,000 ಕುರಿ ಮತ್ತು ಮೇಕೆಗಳನ್ನು ಕಡಿಯಲಾಗುವುದು. ರೈತರ ಪ್ರತಿಕ್ರಿಯೆ ಮತ್ತು ಪ್ರಾಣಿಗಳ ಒಳಹರಿವಿನ ಆಧಾರದ ಮೇಲೆ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.
ಇಲ್ಲಿ ಉತ್ಪಾದನೆಯಾಗುವ ಒಟ್ಟು ಮಾಂಸದಲ್ಲಿ 50 ಪ್ರತಿಶತ ಮಾಂಸವನ್ನು ಇತರೆ ರಾಜ್ಯಗಳು ಮತ್ತು ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಉಳಿದ 50 ಪ್ರತಿಶತ ಮಾಂಸವನ್ನು ಬೆಂಗಳೂರು ಮತ್ತು ನೆರೆಯ ಜಿಲ್ಲೆಗಳ ಚಿಲ್ಲರೆ ವ್ಯಾಪಾರಿಗಳು, ಮಾಂಸ ಮಾರಾಟ ಮಳಿಗೆಗಳಿಗೆ ಮಾರಾಟ ಮಾಡಲಾಗುತ್ತದೆ.
ಘಟಕವು ಚರ್ಮ ಸಂಸ್ಕರಣಾ ಘಟಕವನ್ನು ಹೊಂದಿದೆ ಮತ್ತು ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಸೌಲಭ್ಯವನ್ನು ಹೊಂದಿದೆ. ರೈತರು ತಮ್ಮ ಕುರಿ ಮತ್ತು ಮೇಕೆಗಳನ್ನು ನೇರವಾಗಿ ಮಾರಾಟ ಮಾಡಿ ಸ್ಥಳದಲ್ಲೇ ಹಣ ಪಡೆಯಬಹುದಾಗಿದೆ.












Click it and Unblock the Notifications