ಮದುವೆ ಇಷ್ಟು ಬೇಗ ಬೇಡ ಎಂದಿದ್ದಕ್ಕೆ ಪ್ರಿಯಕರ ಮಾಡಿದ್ದೇನು?
ತುಮಕೂರು, ಆಗಸ್ಟ್ 16: ಇಷ್ಟು ಬೇಗ ಮದುವೆ ಬೇಡ ಸ್ವಲ್ಪ ವರ್ಷ ಕಾಯೋಣ ಅಷ್ಟೊತ್ತಿಗೆ ವಿದ್ಯಾಭ್ಯಾಸವೂ ಮುಗಿಯುತ್ತದೆ, ಒಳ್ಳೆಯ ಕೆಲಸವೂ ಸಿಗುತ್ತದೆ ಎಂದು ಪ್ರೇಯಸಿ ಹೇಳಿದ್ದಕ್ಕೆ ಪ್ರಿಯಕರ ಆಕೆಯ ಕತ್ತು ಬಿಗಿದು ಕೊಲೆ ಮಾಡಲು ಮುಂದಾಗಿದ್ದ ಘಟನೆ ತುಮಕೂರಿನಲ್ಲಿ ನಡೆದಿದೆ.
24 ವರ್ಷದ ಮಹಾವೀರ ಭಕ್ತ ಗುರುನಾನಕ್ ಎಂಬ ಹುಚ್ಚು ಪ್ರೇಮಿ ತನ್ನ 23 ವರ್ಷದ ಪ್ರಿಯತಮೆಯ ಹತ್ಯೆಗೆ ಮಂದಾಗಿದ್ದಾನೆ. ಮದಲೂರು ಗ್ರಾಮಕ್ಕೆ ಗುರುವಾರ ಯುವತಿಯನ್ನು ಕರೆಸಿಕೊಂಡು ಅತೀ ಶೀಘ್ರದಲ್ಲೇ ಮದುವೆಯಾಗುವಂತೆ ಒತ್ತಡ ಹಾಕಿದ್ದಾನೆ. ಆದರೆ ಚಿತ್ರದುರ್ಗದಲ್ಲಿ ಬಿ.ಎಸ್ಸಿ ನರ್ಸಿಂಗ್ ಓದುತ್ತಿರುವ ಯುವತಿ ಈಗಲೇ ಮದುವೆ ಬೇಡ ಎಂದು ಹೇಳಿದ್ದಾಳೆ.
ಅಷ್ಟಕ್ಕೆ ಕೋಪಗೊಂಡ ಪ್ರಿಯಕರ ಆಕೆಯ ಕತ್ತನ್ನು ಬಿಗಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಆಕೆ ಎಚ್ಚರತಪ್ಪಿ ಬಿದ್ದಾಗ, ಆಕೆ ಸತ್ತು ಹೋಗಿದ್ದಾಳೆ ಎಂದುಕೊಂಡು ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಎಚ್ಚರವಾದ ಬಳಿಕ ಯುವತಿ ಈ ವಿಚಾರವನ್ನು ತಮ್ಮ ಪೋಷಕರ ಬಳಿ ಹೇಳಿಕೊಂಡಿದ್ದಾಳೆ.

ಮಹಾವೀರ ಎನ್ನುವವನ ವಿರುದ್ಧ ದೂರು ದಾಖಲಿಸಲಾಗಿದೆ. ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮದಲೂರು ಗ್ರಾಮದಲ್ಲಿ ನಡೆದಿದೆ. ಘಟನೆಯಿಂದ ಯುವತಿಯ ಸ್ಥಿತಿ ಗಂಭೀರವಾಗಿದ್ದು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications