ಕಲ್ಪತರು ನಾಡು ನೋಡಿ ಸಂತಸ ಪಟ್ಟ ಜರ್ಮನ್ ಅಧ್ಯಕ್ಷರು
ತುಮಕೂರು, ಫೆ.9 : ಕಲ್ಪತರು ನಾಡು ತುಮಕೂರಿಗೆ ಭೇಟಿ ನೀಡಿದ್ದ ಜರ್ಮನ್ ಅಧ್ಯಕ್ಷ ಜೋಕ್ಸಿಮ್ ಗಾಕ್, ರೈತರು ಕ್ಷಣಾರ್ಧದಲ್ಲಿ ತೆಂಗಿನಕಾಯಿಯನ್ನು ಸುಲಿಯುವುದು, ಕೈಯಿಂದಲೇ ಹಸುವಿನ ಹಾಲು ಕರೆಯುವುದನ್ನು ನೋಡಿ ಪುಳಕಿತರಾದರು. ನಾರಿನಿಂದ ಸಿದ್ಧಪಡಿಸಿದ ಕುರ್ಚಿ ಮೇಲೆ ಕುಳಿತು ಸಂತಸ ಪಟ್ಟರು.
ಶನಿವಾರ ಜರ್ಮನ್ ಅಧ್ಯಕ್ಷ ಜೋಕ್ಸಿಮ್ ಗಾಕ್ ಪತ್ನಿ ಸಮೇತ ತುಮಕೂರಿಗೆ ಆಗಮಿಸಿದ್ದರು. ಗುಬ್ಬಿ ತಾಲೂಕಿನ ತ್ಯಾಗಟೂರಿನ ತೆಂಗಿನನಾರಿನ ಕುಶಲ ಕೈಗಾರಿಕಾ ಸಹಕಾರ ಸಂಘಕ್ಕೆ ಭೇಟಿ ನೀಡಿ, ತೆಂಗಿನ ನಾರಿನ ಘಟಕದ ಚಟುವಟಿಕೆಯನ್ನು ವೀಕ್ಷಿಸಿದರು. ಮುದ್ದಪುರ ಗ್ರಾಮದ ರೈತರಾದ ಮಹದೇವಯ್ಯ, ರಾಮಣ್ಣ ತಮ್ಮ ಸೀಮೆ ಹಸುವಿನ ಕೆಚ್ಚಲಿನಿಂದ ಕೈಯಲ್ಲಿಯೇ ಹಾಲು ಕರೆಯುವುದನ್ನು ನೋಡಿ ಪುಳಕಿತರಾದರು.
ನಬಾರ್ಡ್ ಕರ್ನಾಟಕ ವಿಭಾಗದ ಸಿಜೆಎಂ ಜಿ.ಆರ್.ಚಿಂತಾಲ ಮತ್ತು ನಬಾರ್ಡ್ ಸಿಜೆಎಂ ಮುಂಬೈ ಬ್ರಾಂಚ್‌ನ ಡಾ. ವೆಂಕಟೇಶ ತಗದ್, ಜರ್ಮನಿ ಅಧ್ಯಕ್ಷರಿಗೆ ತೆಂಗಿನನಾರಿನ ಕುಶಲ ಕೈಗಾರಿಕಾ ಸಹಕಾರ ಸಂಘ ಮತ್ತು ಘಟಕದ ಸಂಪೂರ್ಣ ಪರಿಚಯ ಮಾಡಿಕೊಟ್ಟರು. ತೆಂಗಿನ ನಾರಿನ ಸಹ ಕಾರ ಸಂಘದ ಅಧ್ಯಕ್ಷ ಕಿಡಿಗಣ್ಣಪ್ಪ ಮುಂತಾದವರು ಅಧ್ಯಕ್ಷರ ಜೊತೆ ಉಪಸ್ಥಿತರಿದ್ದರು. ಚಿತ್ರಗಳಲ್ಲಿ ಜರ್ಮನ್ ಅಧ್ಯಕ್ಷರ ತುಮಕೂರು ಭೇಟಿ

ತೆಂಗಿನ ಕಾಯಿ ಸುಲಿದಿದ್ದಕ್ಕೆ ಅಚ್ಚರಿ
ಜರ್ಮನಿಯಲ್ಲಿ ಎಲ್ಲವೂ ಯಾಂತ್ರಿಕತೆಯಿಂದ ನಡೆಯುವುದನ್ನು ನೋಡಿರುವ ಅಧ್ಯಕ್ಷರು ಮುದ್ದಪುರದ ರೈತ ಕಲ್ಲೇಶ್ ಹಾರೆ ಕೋಲನ್ನು ಭೂಮಿಗೆ ಮೀಟಿ ಕೈಯಿಂದ ಕ್ಷಣಾರ್ಧದಲ್ಲಿ ತೆಂಗಿನ ಕಾಯಿಗಳನ್ನು ಸುಲಿಯುವುದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದರು.

ನಾರು ಬೇರ್ಪಡಿಸುವ ಕ್ರಿಯೆ ವೀಕ್ಷಣೆ
ತೆಂಗಿನ ನಾರಿನ ಘಟಕದಲ್ಲಿ ತೆಂಗಿನಮಟ್ಟೆಯಿಂದ ನಾರನ್ನು ಬೇರ್ಪಡಿಸುವ ಪ್ರಕ್ರಿಯೆ ವೀಕ್ಷಿಸಿದರು. ಘಟಕದಲ್ಲಿ ಸಿದ್ಧವಾಗುವ ಹಗ್ಗ, ನಾರು, ಕುರ್ಚಿ, ಮೇಜು, ಮಂಚ, ಪ್ಯಾನಲ್, ಮ್ಯಾಟ್ ಮುಂತಾದ ವಸ್ತುಗಳನ್ನು ನೋಡಿದರು.

ಗ್ರಾಮೀಣ ಪರಿಸರ ಸ್ವರ್ಗದಂತಿದೆ
ಗುಬ್ಬಿ ತಾಲೂಕು ತ್ಯಾಗಟೂರಿನ ತೆಂಗಿನ ನಾರಿನ ಕುಶಲ ಕೈಗಾರಿಕಾ ಸಹಕಾರ ಸಂಘಕ್ಕೆ ಭೇಟಿ ನೀಡಿದ ಅಧ್ಯಕ್ಷರು, ಗ್ರಾಮೀಣ ಪರಿಸರ ಸ್ವರ್ಗದಂತಿದೆ ಎಂದು ಸಂತಸ ಪಟ್ಟರು.

ನಾರಿನ ಕುರ್ಚಿ ಮೇಲೆ ಕುಳಿತು ಸಂತಸ
ಜರ್ಮನ್ ಅಧ್ಯಕ್ಷ ಮತ್ತು ಅವರ ಪತ್ನಿ ನಾರಿನ ಕುರ್ಚಿಯಲ್ಲಿ ಕುಳಿತು ಸಂತಸ ಪಟ್ಟರು. ಜರ್ಮನ್ ಪ್ರಥಮ ಮಹಿಳೆ ನಾರಿನಿಂದ ಸಿದ್ಧಪಡಿಸಿದ ಕುರ್ಚಿ ಮೇಲೆ ಕುಳಿತು ಆನಂದಿಸಿ ಅದರ ಬಗ್ಗೆ ಅಧ್ಯಕ್ಷರಿಗೆ ವಿವರಣೆ ನೀಡಿದರು.

ಶಾಲಾ ಮಕ್ಕಳೊಂದಿಗೆ ಫೋಟೋ ಶೂಟ್
ಸಂಜೆ 4.30ಕ್ಕೆ ಮುದ್ದಪುರಕ್ಕೆ ಆಗಮಿಸಿದ ಅವರು, ಶನೈಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು. ನಂತರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳನ್ನು ಭೇಟಿ ಮಾಡಿ, ಅವರೊಂದಿಗೆ ಪೋಟೊ ತೆಗೆಸಿಕೊಂಡರು.

ರೈತರೊಂದಿಗೆ ಸಂವಾದ
ಆಯ್ದ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದ ಅಧ್ಯಕ್ಷರು, ತೆಂಗಿನ ತೋಟ, ತೆಂಗು ಮಾರುಕಟ್ಟೆ ಬಗ್ಗೆ ರೈತರೊಂದಿಗೆ ಚರ್ಚೆ ನಡೆಸಿದರು. ಗ್ರಾಮದಲ್ಲಿರುವ ಮಕ್ಕಳ ಸಂಖ್ಯೆ, ಶಾಲೆಗೆ ಹೋಗುತ್ತಾರಾ? ಎಂದು ಮಾಹಿತಿ ಪಡೆದುಕೊಂಡರು. ರೈತರು ಹೊಟ್ಟೆಪಾಡಿಗಾಗಿ ವಲಸೆ ಹೋಗುತ್ತಾರಾ? ಇಲ್ಲೇ ಕೆಲಸ ಮಾಡುತ್ತೀರಾ? ಎಂದು ಮಾಹಿತಿ ಸಂಗ್ರಹಿಸಿದರು.












Click it and Unblock the Notifications