ಕಾಂಗ್ರೆಸ್ ತೊರೆಯುವ ತೀರ್ಮಾನ ಘೋಷಿಸಿದ ಎಸ್‌ಪಿ ಮುದ್ದಹನುಮೇಗೌಡ!
ತುಮಕೂರು, ಸೆಪ್ಟೆಂಬರ್ 01; ಕರ್ನಾಟಕ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಂಸದ ಎಸ್. ಪಿ. ಮುದ್ದಹನುಮೇಗೌಡ ಕಾಂಗ್ರೆಸ್ ತೊರೆಯುವುದಾಗಿ ಘೋಷಣೆ ಮಾಡಿದರು. 2019ರ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿತ್ತು.
ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಎಸ್. ಪಿ. ಮುದ್ದಹನುಮೇಗೌಡ ಬೆಂಗಳೂರಿನಲ್ಲಿ ಭೇಟಿ ಮಾಡಿದರು. ಬಳಿಕ ಪಕ್ಷ ತೊರೆಯುವ ತೀರ್ಮಾನ ಘೋಷಣೆ ಮಾಡಿದರು.
"ಕಾಂಗ್ರೆಸ್ ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಬಿಡುಗಡೆ ಮಾಡಿ. ಪಕ್ಷದ ಜೊತೆಗೆ ಮುಂದುವರೆಯಲು ಸಾಧ್ಯವೇ ಇಲ್ಲ" ಎಂದು ಎಸ್. ಪಿ. ಮುದ್ದಹನುಮೇಗೌಡ ಡಿ. ಕೆ. ಶಿವಕುಮಾರ್‌ಗೆ ಮನವಿ ಮಾಡಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ ಎಸ್. ಪಿ. ಮುದ್ದಹನುಮೇಗೌಡ ತುಮಕೂರು ಕ್ಷೇತ್ರದಲ್ಲಿ 4,29,868 ಮತಗಳನ್ನು ಪಡೆದು ಜಯಗಳಿಸಿದ್ದರು. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಪಕ್ಷದ ಟಿಕೆಟ್ ಕೈ ತಪ್ಪಿತ್ತು, ಈ ಕುರಿತು ಅವರು ಅಸಮಾಧಾನ ಹೊರಹಾಕಿದ್ದರು.

ಡಿ. ಕೆ. ಶಿವಕುಮಾರ್ ಭೇಟಿ
ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದ ಬಳಿಕ ಮಾತನಾಡಿದ ಎಸ್. ಪಿ. ಮುದ್ದಹನುಮೇಗೌಡ, "ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸುವಂತೆ ಕೇಳಿದ್ದೇನೆ. ಪಕ್ಷ ಬಿಡಬೇಕಾದರೆ ಪಕ್ಷ ಕಾರಣವಾಗಿರಬೇಕು ಅಥವ ನಾನು ಕಾರಣವಾಗಿರಬೇಕು. ಅದು ನನ್ನ ಕಡೆಯಿಂದ ಆಗಿದ್ದರೆ ಸ್ಪಷ್ಟವಾಗಿ ಹೇಳಬೇಕು. ಒಂದು ರಾಷ್ಟ್ರೀಯ ಪಕ್ಷ ಬಿಡಲು ಬಲವಾದ ಕಾರಣ ಇರಬೇಕು ಅಲ್ಲವೇ?" ಎಂದರು.
"ಆಪರೇಷನ್ ಕಮಲ ಮಾಡಲು ನಾನು ಅಧಿಕಾರದಲ್ಲಿ ಇದ್ದೇನೆಯೇ?. ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ರಣದೀಪ್ ಸಿಂಗ್ ಸುರ್ಜೇವಾಲಾ ಪಕ್ಷದಲ್ಲೇ ಇರುವಂತೆ ಹೇಳಿದ್ದರು. ಬಳಿಕ ಏನನ್ನೂ ಮಾತನಾಡಿಲ್ಲ" ಎಂದು ಎಸ್. ಪಿ. ಮುದ್ದಹನುಮೇಗೌಡ ಸ್ಪಷ್ಟಪಡಿಸಿದರು.

ನನ್ನ ಸ್ಪಷ್ಟ ನಿರ್ಧಾರ ತಿಳಿಸಿದ್ದೇನೆ
"ನಾನು ನಾಯಕರನ್ನು ಭೇಟಿ ಮಾಡಿ ನನ್ನ ಸ್ಪಷ್ಟ ನಿರ್ಧಾರವನ್ನು ತಿಳಿಸಿದ್ದೇನೆ. ನಾನು ಅತ್ಯಂತ ಕ್ರಿಯಾಶೀಲವಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. ನಾನು ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧೆ ಮಾಡದಂತೆ ತಪ್ಪಿಸಲಾಗಿದೆ. 2019ರಲ್ಲಿ ಹಾಲಿ ಸಂಸದನಾಗಿದ್ದರೂ ಸ್ಪರ್ಧೆಗೆ ನನಗೆ ಅವಕಾಶ ನೀಡಲಿಲ್ಲ" ಎಂದು ಎಸ್. ಪಿ. ಮುದ್ದಹನುಮೇಗೌಡ ಆರೋಪಿಸಿದರು.
"ಸಿದ್ದರಾಮಯ್ಯ ಪಕ್ಷ ತೊರೆಯುವ ನಿರ್ಧಾರ ಮಾಡಬೇಡಿ ಎಂದು ಹೇಳಿದ್ದಾರೆ. ಆದರೆ ಪಕ್ಷದಿಂದ ಬಿಡುಗಡೆ ಮಾಡಿ ಎಂದು ಕೇಳಿದ್ದೇನೆ. ಇಷ್ಟು ವರ್ಷ ನಡೆದ ರಾಜಕೀಯ ಧೋರಣೆಗಳು ಇಂದಿನ ತೀರ್ಮಾನಕ್ಕೆ ಕಾರಣ" ಎಂದು ಮುದ್ದಹನುಮೇಗೌಡ ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕೊಡುಗೆ ಇದೆ
"1989ರಲ್ಲಿ ಕಾಂಗ್ರೆಸ್ ಬಿ-ಫಾರಂ ನನಗೆ ಕೊಟ್ಟು ಬಳಿಕ ಬೇರೆಯವರಿಗೆ ಕೊಟ್ಟರು. ಪಕ್ಷಕ್ಕೆ ನನ್ನದೇ ಆದ ಅಳಿಲು ಸೇವೆ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನನ್ನ ಸೇವೆಯೂ ಇದೆ. ನನ್ನ ಕ್ರಿಯಾಶೀಲ ರಾಜಕೀಯ ನಿಂತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನನ್ನ ರಾಜೀನಾಮೆ ನೀಡುತ್ತೇನೆ" ಎಂದು ಎಸ್. ಪಿ. ಮುದ್ದಹನುಮೇಗೌಡ ಘೋಷಣೆ ಮಾಡಿದರು.
"ನಾನು ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ಇಂದೇ ರಾಜೀನಾಮೆ ಸಲ್ಲಿಸುತ್ತೇನೆ. ಬ್ಲಾಕ್ ಮೇಲ್ ಮಾಡಲು ನಾನು ಈ ರೀತಿ ಮಾಡುತ್ತಿಲ್ಲ. ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಲು ಬಯಸುವುದಿಲ್ಲ" ಎಂದು ಎಸ್. ಪಿ. ಮುದ್ದಹನುಮೇಗೌಡ ತಿಳಿಸಿದರು.

ಶೀಘ್ರದಲ್ಲಿಯೇ ಒಳ್ಳೆಯ ನಿರ್ಧಾರ
"ಹಲವು ವರ್ಷಗಳ ಹಿಂದೆಯೇ ನಾನು ಕುಣಿಗಲ್ ಕ್ಷೇತ್ರದ ಶಾಸಕನಾಗಿದ್ದೆ. ಮುಂದಿನ ವಿಧಾನಸಭೆ ಚುನಾವಣೆಗೆ ಅಲ್ಲಿಂದ ಸ್ಪರ್ಧಿಸಬೇಕು ಎಂದು ಜನರು ಬಯಸಿದ್ದಾರೆ. ಅತಿ ಶೀಘ್ರದಲ್ಲಿಯೇ ಒಳ್ಳೆಯ ನಿರ್ಧಾರಕ್ಕೆ ಬರುತ್ತೇನೆ. ಕಾಂಗ್ರೆಸ್ ಪಕ್ಷ ತೊರೆಯುವ ನಿರ್ಧಾರ ಮಾಡಿದ್ದೇನೆ. ಮುಂದೆ ಒಳ್ಳೆಯ ಅವಕಾಶಗಳು ಬರಲಿವೆ" ಎಂದು ಎಸ್. ಪಿ. ಮುದ್ದಹನುಮೇಗೌಡ ಹೇಳಿದರು.
"ಮುಂದಿನ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ನನ್ನ ತೀರ್ಮಾನ ಅಚಲವಾಗಿದೆ" ಎಂದು ಅವರು ಸ್ಪಷ್ಟಪಡಿಸಿದರು.

ಕ್ಷೇತ್ರ ಬಿಟ್ಟುಕೊಟ್ಟಿದ್ದ ಕಾಂಗ್ರೆಸ್
2014ರ ಲೋಕಸಭೆ ಚುನಾವಣೆಯಲ್ಲಿ ಎಸ್. ಪಿ. ಮುದ್ದಹನುಮೇಗೌಡ ತುಮಕೂರು ಕ್ಷೇತ್ರದಲ್ಲಿ ಜಯಗಳಿಸಿದ್ದರು. ಆದರೆ 2019ರ ಲೋಕಸಭೆ ಚುನಾವಣೆ ಸಮಯದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿತ್ತು.
ಹಾಲಿ ಸಂಸದರಾಗಿದ್ದರೂ ತುಮಕೂರು ಕ್ಷೇತ್ರದಲ್ಲಿ ಎಸ್‌ಪಿ ಮುದ್ದಹನುಮೇಗೌಡರಿಗೆ ಸ್ಪರ್ಧಿಸಲು ಟಿಕೆಟ್ ನೀಡಿರಲಿಲ್ಲ. ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಎಚ್. ಡಿ. ದೇವೇಗೌಡ ಕಣಕ್ಕಿಳಿದಿದ್ದರು. ಆದರೆ ಅವರು ಸಹ ಸೋಲು ಕಂಡಿದ್ದರು.












Click it and Unblock the Notifications