ಕೈ ತಪ್ಪಿದ ಟಿಕೆಟ್; ಬಿಜೆಪಿ ತೊರೆಯುವುದಾಗಿ ಮಾಜಿ ಸಚಿವರ ಘೋಷಣೆ!
ತುಮಕೂರು, ಏಪ್ರಿಲ್ 12; ಈ ಬಾರಿಯ ಚುನಾವಣೆಗೆ ಕರ್ನಾಟಕ ಬಿಜೆಪಿ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಪಟ್ಟಿ ಬಿಡುಗಡೆ ಬಳಿಕ ಟಿಕೆಟ್ ಕೈ ತಪ್ಪಿದವರ ಅಸಮಾಧಾನ ಹೆಚ್ಚಾಗಿದೆ. ಗುರುವಾರ ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು, ಏಪ್ರಿಲ್ 20ರ ತನಕ ನಾಮಪತ್ರಗಳನ್ನು ಸಲ್ಲಿಕೆ ಮಾಡಬಹುದು. ಮೇ 10ರಂದು ಚುನಾವಣೆ ನಡೆಯಲಿದೆ.
ತುಮಕೂರು ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಮಾಜಿ ಸಚಿವ ಸೊಗಡು ಶಿವಣ್ಣಗೆ ಟಿಕೆಟ್ ಕೈತಪ್ಪಿದೆ. ಹಾಲಿ ಶಾಸಕ ಜಿ. ಬಿ. ಜ್ಯೋತಿ ಗಣೇಶ್ ಅಭ್ಯರ್ಥಿ ಎಂದು ಪಕ್ಷ ಘೋಷಣೆ ಮಾಡಿದೆ. ಇದರಿಂದಾಗಿ ಅಸಮಾಧಾನಗೊಂಡಿರುವ ಸೊಗಡು ಶಿವಣ್ಣ ಬಿಜೆಪಿಗೆ ಗುಡ್ ಬೈ ಹೇಳುವುದಾಗಿ ಘೋಷಣೆ ಮಾಡಿದ್ದಾರೆ. ಬಳಿಕ ತುಮಕೂರು ಬಿಜೆಪಿ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ಈ ಬಾರಿಯ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಒಂದು ನೋಟು, ಒಂದು ವೋಟು ಎಂದು ಜೋಳಿಗೆ ಹಿಡಿದು ಪ್ರಚಾರ ಆರಂಭಿಸಿದ್ದರು. ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು ಎಂದು ಹೇಳಿದ್ದರು. ಹಾಲಿ ಬಿಜೆಪಿ ಶಾಸಕರು ಇರುವ ಕ್ಷೇತ್ರದಲ್ಲೇ ಟಿಕೆಟ್ ಬಯಸಿದ್ದ ಅವರಿಗೆ ನಿರಾಸೆಯಾಗಿದೆ.
ಬುಧವಾರ ತುಮಕೂರಿನ ಮಾಕಂ ಕಲ್ಯಾಣ ಮಂದಿರದಲ್ಲಿ ಬೆಂಬಲಿಗರ ಸಭೆ ನಡೆಸಿದ ಸೊಗಡು ಶಿವಣ್ಣ ಬಿಜೆಪಿಗೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದರು. ಬಳಿಕ ತುಮಕೂರು ಜಿಲ್ಲಾ ಬಿಜೆಪಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಆಗ ಬೆಂಬಲಿಗರು ಬಿಜೆಪಿಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಬಂಡಾಯ ಚುನಾವಣೆಯಲ್ಲಿ ಹೇಗೆ ಪ್ರಭಾವ ಬೀರಲಿದೆ? ಎಂದು ಕಾದು ನೋಡಬೇಕಿದೆ.
ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಸೊಗಡು ಶಿವಣ್ಣ, "ನಾನು ಉಸಿರು ಇರುವ ತನಕ ನಿಮ್ಮ ಸೇವಕನಾಗಿರುತ್ತೇನೆ. ನಾನು ಟಿಕೆಟ್ ಕೊಡಿ ಎಂದು ಮನವಿ ಮಾಡಿದೆ. ಆದರೆ, ಅದಕ್ಕೆ ಬೆಲೆ ನೀಡಲಿಲ್ಲ, ಮುಂದೆ ಏನು ಮಾಡಲಿ? ಎಂಬುದನ್ನು ನೀವೇ ತಿಳಿಸಿ" ಎಂದು ಕೇಳಿದರು. ಬೆಂಬಲಿಗರು ಸಭೆಯಲ್ಲಿ ತಾವು ಚುನಾವಣೆಗೆ ಸ್ಪರ್ಧೆ ಮಾಡಲೇಬೇಕು ಎಂದು ಆಗ್ರಹಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ಹಾಲಿ ಶಾಸಕರಿಗೂ ಟಿಕೆಟ್ ಸಿಗುವುದಿಲ್ಲ ಎಂಬ ವರದಿಗಳು ಸೊಗಡು ಶಿವಣ್ಣಗೆ ಆತ್ಮವಿಶ್ವಾಸ ಹೆಚ್ಚಿಸಿತ್ತು. ಆದರೆ ತುಮಕೂರು ನಗರ ಕ್ಷೇತ್ರದಲ್ಲಿ ಜಿ. ಬಿ. ಜ್ಯೋತಿ ಗಣೇಶ್‌ಗೆ ಬಿಜೆಪಿ ಟಿಕೆಟ್ ನೀಡಿದ್ದು, ಸೊಗಡು ಶಿವಣ್ಣಗೆ ಟಿಕೆಟ್ ಕೈತಪ್ಪಿದೆ. ಕಾಂಗ್ರೆಸ್ ಪಕ್ಷ ಕ್ಷೇತ್ರಕ್ಕೆ ಇಕ್ಬಾಲ್ ಅಹಮದ್ ಅಭ್ಯರ್ಥಿ ಎಂದು ತನ್ನ 2ನೇ ಪಟ್ಟಿಯಲ್ಲಿ ಘೋಷಣೆ ಮಾಡಿದೆ.
ಆದ್ದರಿಂದ ಸೊಗಡು ಶಿವಣ್ಣ ಮುಂದಿನ ದಾರಿ ಏನು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಕಾಂಗ್ರೆಸ್ ಯಾವಾಗಲೂ ಟೀಕಿಸುವ BJP vs BJP ಎಂಬುದು ನಿಜವಾಗುವ ಲಕ್ಷಣಗಳು ಕಾಣುತ್ತಿವೆ.
1994ರಲ್ಲಿ ಮೊದಲ ಬಾರಿಗೆ ತುಮಕೂರು ನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೊಗಡು ಶಿವಣ್ಣ ಶಾಸಕರಾಗಿ ಆಯ್ಕೆಯಾದರು. ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಮೈತ್ರಿ ಸರ್ಕಾರದಲ್ಲಿ ರೇಷ್ಮೆ ಖಾತೆ ಸಚಿವರಾಗಿದ್ದರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಪರಿಸರ ಖಾತೆ ಸಚಿವರಾಗಿದ್ದರು.
2013ರ ಚುನಾವಣೆಯಲ್ಲಿ ಬಿಜೆಪಿ, ಕೆಜೆಪಿ ಗೊಂದಲದ ಕಾರಣ ಬಿಜೆಪಿ ಅಭ್ಯರ್ಥಿ ಸೊಗಡು ಶಿವಣ್ಣ ಸೋಲು ಕಂಡರು. ಕೆಜೆಪಿ ಅಭ್ಯರ್ಥಿ ಜಿ. ಬಿ. ಜ್ಯೋತಿ ಗಣೇಶ್ 40,073 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಡಾ. ರಫೀಕ್ ಅಹಮ್ಮದ್ ಎಸ್. ಗೆಲುವು ಸಾಧಿಸಿದರು.
ಆದರೆ 2018ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಬಿ. ಎಸ್. ಯಡಿಯೂರಪ್ಪ ಆಪ್ತರಾದ ತುಮಕೂರು ಸಂಸದ ಜಿ. ಎಸ್. ಬಸವರಾಜು ಪುತ್ರ ಜಿ. ಬಿ. ಜ್ಯೋತಿ ಗಣೇಶ್ ಕೈ ಸೇರಿತು. ಈ ಬಾರಿಯ ಚುನಾವಣೆಯಲ್ಲಿಯೂ ಅವರಿಗೆ ಟಿಕೆಟ್ ನೀಡಲಾಗಿದೆ. ಆದ್ದರಿಂದ ಸೊಗಡು ಶಿವಣ್ಣ ಪಕ್ಷೇತರರಾಗಿ ಕಣಕ್ಕಿಳಿಯಲು ಬಯಸಿದ್ದಾರೆ.












Click it and Unblock the Notifications